ಧಾರವಾಡ ಆ.04: ಧಾರವಾಡದ ಸಾಯಿ ನಗರದ ನಿವಾಸಿ ಸರಸ್ವತಿ ಚಬ್ಬಿ ಎನ್ನುವರು ಧಾರವಾಡನಲ್ಲಿರುವ ಎದುರುದಾರ ಲಕ್ಷ್ಮಿಗೋಲ್ಡ್ ಖಜಾನಾರವರಲ್ಲಿ ಗೋಲ್ಡ್ ಸ್ಕೀಮಿಗೆ ಸದಸ್ಯರಾಗಿದ್ದರು. ಅದರಂತೆ ದೂರುದಾರರು ಪ್ರತಿ ತಿಂಗಳು ರೂ:5,000 ರಂತೆ ಒಟ್ಟು ರೂ:90,000 18 ಕಂತುಗಳಲ್ಲಿ ದಿ:10.04.2017 ರಿಂದ 09.02.2022 ವರೆಗೆ ಪಾವತಿಸಿದ್ದರು. ಗೋಲ್ಡ್ ಸ್ಕೀಮ್ ಪ್ರಕಾರ ಎದುರುದಾರರ ಲಕ್ಷ್ಮಿಗೋಲ್ಡ್ ಖಜಾನಾರವರು ರೂ:90,000 ಮೊತ್ತದ ಬಂಗಾರದ ಆಭರಣ ದೂರುದಾರರಿಗೆ ಕೊಡಬೇಕಾಗಿತ್ತು. ಆದರೆ ದೂರುದಾರರು ಕೆಲ ತಿಂಗಳುಗಳ ಹಣವನ್ನು ಸರಿಯಾಗಿ ಪಾವತಿಸಿಲ್ಲ ಅನ್ನುವ ಕಾರಣ ಹೇಳಿ ಚಿನ್ನದ ಆಭರಣ ಕೊಡಲು ನಿರಾಕರಿಸಿದ್ದರು. ಹಲವು ಬಾರಿ ದೂರುದಾರರು ಬಂಗಾರದ ಆಭರಣ ಕೊಡುವಂತೆ ಒತ್ತಾಯಿಸಿದರೂ ಅವುಗಳನ್ನು ಕೊಡದೆ ಎದುರುದಾರರು ಸತಾಯಿಸುತ್ತಿದ್ದರು. ಧಾರವಾಡದ ಲಕ್ಷ್ಮೀ ಗೋಲ್ಡ ಖಜಾನೆಯವರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 27/02/2024 ರಂದು ದೂರನ್ನು ಸಲ್ಲಿಸಿದ್ದರು. 18 ಕಂತುಗಳ ಹಣವನ್ನು ದೂರುದಾರರು ಪ್ರತಿ ತಿಂಗಳು ಕ್ರಮವಾಗಿ ಕಟ್ಟದೆ ಕೇಲವು ತಿಂಗಳು ಬಿಟ್ಟು ನಂತರ ಕಟ್ಟಿರುವುದರಿಂದ ಸ್ಕೀಮಿನ ಪ್ರಕಾರ ಬಂಗಾರದ ಆಭರಣ ಕೊಡಲು ಬರುವುದಿಲ್ಲ ಅಂತಾ ಲಕ್ಷ್ಮೀ ಗೋಲ್ಡ ಖಜಾನೆಯವರು ಆಕ್ಷೇಪಣೆ ಎತ್ತಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರ ಸ್ಕೀಮಿನಲ್ಲಿ ಸದಸ್ಯರಾಗಿ ಒಂದೆರೆಡು ತಿಂಗಳು ವಿಳಂಬವಾಗಿ ಸ್ಕೀಮಿನ ಹಣ ಪ್ರತಿ ತಿಂಗಳು ರೂ:5,000 ರಂತೆ ಒಟ್ಟು ರೂ:90,000 ಗಳನ್ನು ಪಾವತಿಸಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಎದುರುದಾರರು ದೂರುದಾರರಿಗೆ ಕೊಟ್ಟ ರಶೀದಿಗಳು ಸಾಕ್ಷಿಗಳಾಗಿವೆ. ಸ್ಕೀಮಿನ ಹಣಕಟ್ಟುವಲ್ಲಿ ದೂರುದಾರರು ವಿಳಂಬ ಮಾಡಿ ಷರತ್ತುನ್ನು ಉಲ್ಲಂಘಿಸಿದ್ದರೆ ಆಯಾ ಹಂತದಲ್ಲೆ ದೂರುದಾರರಿಂದ ಹಣ ಪಡೆಯದೆ ಅವರಿಗೆ ಹಿಂದಿರುಗಿಸ ಬೇಕಾಗಿತ್ತು. ಬಾಕಿ ಕಂತುಗಳ ಹಣವನ್ನು ದೂರುದಾರರಿಂದ ಪಡೆದುಕೊಳ್ಳಬಾರದಿತ್ತು. ಆದರೆ ಎದುರುದಾರರು ಎಲ್ಲ 18 ಕಂತುಗಳ ರೂ:90,000 ಹಣವನ್ನು ದೂರುದಾರರಿಂದ ಪಡೆದಿದ್ದಾರೆ. ನಂತರ ದೂರುದಾರರಿಗೆ ಆ ಮೊತ್ತದ ಬಂಗಾರದ ಆಭರಣಗಳನ್ನು ಕೊಡದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಆಯೋಗ ಅಭಿಪ್ರಾಯ ಪಟ್ಟುತೀರ್ಪು ನೀಡಿದೆ.
ಈ ಎಲ್ಲ ಸಂಗತಿಗಳನ್ನು ಆಧರಿಸಿ ದೂರುದಾರರು ಎದುರುದಾರರಿಗೆ ಪಾವತಿಸಿದ ಒಟ್ಟು 18 ಕಂತುಗಳ ಮೊತ್ತ ರೂ:90,000 ಮೌಲ್ಯದ ಬಂಗಾರದ ಆಭರಣಗಳನ್ನು ಸ್ಕೀಮಿನ ನಿಯಮದಂತೆ ಆದೇಶವಾದ 15 ದಿನಗಳ ಒಳಗಾಗಿ ಕೊಡುವಂತೆ ಧಾರವಾಡದ ಲಕ್ಷ್ಮೀ ಗೋಲ್ಡ ಖಜಾನೆಯವರಿಗೆ ಆದೇಶಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.15,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೋಡುವಂತೆ ಲಕ್ಷ್ಮೀಗೋಲ್ಡ್ ಖಜಾನಾ ಪ್ರೈ.ಲಿ.ಗೆ ಆಯೋಗ ನಿರ್ದೇಶಿಸಿದೆ.