ಬಳ್ಳಾರಿ,ಜ.17
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರ ಶೋಷಣೆಯ ದೂರುಗಳು ಬರಬಾರದು. ವಂಚನೆ ಪ್ರಕರಣಗಳನ್ನು ತಡೆಗಟ್ಟಬೇಕು. ಎಪಿಎಂಸಿಯು ರೈತಸ್ನೇಹಿಯಾಗಿರಬೇಕು ಎಂದು ಅಧಿಕಾರಿಗಳಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ನಿರ್ದೇಶನ ನೀಡಿದರು.
ಶುಕ್ರವಾರ ಬಳ್ಳಾರಿ ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಯ ಆವರಣ ಪರಿವೀಕ್ಷಣೆ ನಡೆಸಿ ಬಳಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಪಿಎಂಸಿಯ ಸೋರಿಕೆ ತಡೆಗಟ್ಟಿ ಆರ್ಥಿಕವಾಗಿ ಸದೃಢಗೊಳಿಸಬೇಕು. ಆರ್ಥಿಕ ಅಪರಾಧಗಳಿಗೆ ಅವಕಾಶ ನೀಡಬಾರದು. ಬಳ್ಳಾರಿ ಎಪಿಎಂಸಿಯ ಬಗ್ಗೆ ವರ್ತಕರು ಮತ್ತು ರೈತರಿಂದ ವ್ಯಾಪಕ ದೂರುಗಳಿವೆ. ಅಂತಹ ಅಧಿಕಾರಿಗಳು ಬದಲಾಗಬೇಕೆಂದು ಎಪಿಎಂಸಿ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದರು.
ಮಾರುಕಟ್ಟೆಯಲ್ಲಿ ದಲ್ಲಾಳಿಗಳು ರೈತರಿಂದ ಹೆಚ್ಚುವರಿ ಕಮಿಷನ್ ಪಡೆಯುತ್ತಿರುವ ಹಾಗೂ ಸರಕಾರದ ಸವಲತ್ತು ಇಲ್ಲವೇ ಬೇರೆ ಬೇರೆ ಕಾರಣಕ್ಕೆ ಉದ್ದಿಮೆ ಪರವಾನಿಗೆ (ಟ್ರೇಡ್ ಲೈಸೆನ್ಸ್) ಪಡೆದಿರುವ ದೂರುಗಳಿವೆ. ಅಂಥ ಪರವಾನಿಗೆಗಳನ್ನು ಗುರುತಿಸಿ ರದ್ದುಪಡಿಸಬೇಕು. 10 ವರ್ಷಕ್ಕೆ ನೀಡುತ್ತಿದ್ದ ಪರವಾನಿಗೆಯನ್ನು 05 ವರ್ಷಕ್ಕೆ ನೀಡುವಂತೆ ಸೂಚಿಸಿದರು.
ಮಾರುಕಟ್ಟೆ ಶುಲ್ಕ ಕಮಿಷನ್ ಹಾಗೂ ವಂಚನೆಯ ದೂರುಗಳು ಹೆಚ್ಚಾಗುತ್ತಿವೆ. ಎಪಿಎಂಸಿಯ ಆದಾಯ ಕಡಿಮೆಯಾಗುತ್ತಿದೆ. ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಮಾಡಿ ತಡೆಗಟ್ಟಬೇಕು ಎಂದು ಸೂಚನೆ ನೀಡಿದರು.
ರೈತರು ಬೆಳೆ ಬೆಳೆದು ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದಾರೆ. ಕನಿಷ್ಟ ಬೆಂಬಲ ಯೋಜನೆಯಡಿ ವಿವಿಧ ಉತ್ಪನ್ನಗಳಿಗೆ ನಿಗದಿಯಾದ ದರದಲ್ಲಿಯೇ ರೈತರಿಂದ ಖರೀದಿಸಬೇಕು ಎಂದು ತಿಳಿಸಿದರು.
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಕೆಲ ಅಧಿಕಾರಿಗಳು 20 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆಗೆ ಶಿಫಾರಸ್ಸು ಮಾಡಬೇಕು ಎಂದರು.
ಬಳ್ಳಾರಿ ಎಪಿಎಂಸಿ ವಾರ್ಷಿಕ ಆದಾಯವು ಕುಸಿದಿದ್ದು, ಹೆಚ್ಚಿನ ಆದಾಯ ನಿರೀಕ್ಷೆಗೆ ಕ್ರಮ ವಹಿಸಬೇಕು. ಎಪಿಎಂಸಿಗೆ ಸೂಕ್ತ ನಿರ್ವಹಣೆ ಇಲ್ಲ. ರಸ್ತೆಗಳು ಧೂಳಿನಿಂದ ಕೂಡಿವೆ. ಎಪಿಎಂಸಿಗೆ ಹಲವಾರು ಕಡೆ ದಾರಿಗಳಿವೆ. ಒಳಗಡೆ ಆವರಣದಲ್ಲಿ ಗುಣಮಟ್ಟ ಡಾಂಬರು ರಸ್ತೆ, ಸಿಸಿಟಿವಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ಸಚಿವರು, ಬಳ್ಳಾರಿ ಎಪಿಎಂಸಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ವಿವರ, ಎಪಿಎಂಸಿ ಆದಾಯ ವಿವರಗಳನ್ನು ಕುಲಂಕುಷವಾಗಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ತಾಲ್ಲೂಕಿನ ಆಳದಹಳ್ಳಿಯಲ್ಲಿ 11 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಮೆಣಸಿನಕಾಯಿ ಮಾರುಕಟ್ಟೆಯ ನೀಲ ನಕಾಶೆಯನ್ನು ವೀಕ್ಷಿಸಿದರು.
ಇದಕ್ಕೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಉಚಿತ ಆರೋಗ್ಯ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ರೈತರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಇದೇ ವೇಳೆ ರೈತ ಪರ ಸಂಘಟನೆಗಳು ಮೆಣಸಿನಕಾಯಿ ಮಾರುಕಟ್ಟೆಗೆ ಸಂಬಂಧಿಸಿದಂತೆ ತಮ್ಮ ಮನವಿ ಸಲ್ಲಿಸಿದರು.
ಸಭೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಎಪಿಎಂಸಿ ರಾಜ್ಯ ನಿರ್ದೇಶಕ ಶಿವಾನಂದ ಕಪಾಷಿ, ಎಪಿಎಂಸಿ ಕಾರ್ಯದರ್ಶಿ ನಂಜುಡ ಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂಶರಾಜ್ ನಾಗಿರೆಡ್ಡಿ ಸೇರಿದಂತೆ ಎಪಿಎಂಸಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಜನಪ್ರತಿನಿಧಿಗಳು, ರೈತ ಮುಖಂಡರು, ಅನೇಕರು ಉಪಸ್ಥಿತರಿದ್ದರು.
———