Ad image

ಖಾಸಗಿ ಗಣಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಲಿ ಸ್ಥಳೀಯರಿಗೆ ಉದ್ಯೋಗ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಕೊಡುಗೆ ನೀಡಲಿ -ಸಂಸದ ಗೋವಿಂದ ಎಂ ಕಾರಜೋಳ

Vijayanagara Vani
ಖಾಸಗಿ ಗಣಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಲಿ ಸ್ಥಳೀಯರಿಗೆ ಉದ್ಯೋಗ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಕೊಡುಗೆ ನೀಡಲಿ -ಸಂಸದ ಗೋವಿಂದ ಎಂ ಕಾರಜೋಳ
ಚಿತ್ರದುರ್ಗ :
ಜಿಲ್ಲೆಯ ಗಣಿ ಸಂಪತ್ತು ಬಳಸಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಖಾಸಗಿ ಗಣಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕು. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವುದರ ಜೊತೆಗೆ ಸ್ಥಳೀಯ ಪ್ರದೇಶಾಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಮುಖವಾಗಿ 8 ಖಾಸಗಿ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ 5 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಗಣಿ ಸಂಪತ್ತು ಬಳಿಸಿ ಲಾಭ ಗಳಿಸುತ್ತಿರುವ ಕಂಪನಿಗಳು ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುವುದು ಅಗತ್ಯವಾಗಿದೆ. ಗಣಿ ಮತ್ತು ಅದಿರು ನಿಯಂತ್ರಣ ಅಭಿವೃದ್ಧಿ ನಿಯಮಗಳ ಕಾಯ್ದೆ ಅನುಸಾರ ಗಣಿ ಕಂಪನಿಗಳಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿಯೇ ಸ್ಥಳೀಯ ಪ್ರದೇಶ ಹಾಗೂ ಜನರ ಅಭಿವೃದ್ಧಿ ಕಾರ್ಯನಿರ್ವಹಿಸುವ ನಿಬಂಧನೆ ವಿಧಿಸಲಾಗಿರುತ್ತದೆ. ಸ್ಥಳೀಯ ಭೂಮಿ, ವಿದ್ಯುತ್, ರಸ್ತೆ, ಸಂಪತ್ತು, ಮೂಲಭೂತ ಸೌಕರ್ಯಗಳನ್ನು ಬಳಸಿ ಗಣಿಗಾರಿಕೆ ನಡೆಸುವ ಕಂಪನಿಗಳು ಸ್ಥಳೀಯ ಜನರಿಗೆ ಉದ್ಯೋಗ ನೀಡದೇ ಹೋದರೆ ಹೇಗೆ? ಸಾವಿರಾರು ಜನರು ಅದರಲ್ಲೂ ಯುವಜನರು ಉದ್ಯೋಗ ಅರಸಿಕೊಂಡು ಜಿಲ್ಲೆಯಿಂದ ಬೆಂಗಳೂರು, ಮಂಗಳೂರು, ಗೋವಾಗೆ ಗುಳೆ ಹೋಗುತ್ತಾರೆ. ಜಿಲ್ಲೆಯ ಸಂಪತ್ತು ಜನರಿಗೆ ಉಪಯೋಗವಾಗದಿದ್ದರೆ ಹೇಗೆ? ಗಣಿ ಕಂಪನಿಗಳು ಕೇವಲ ರಾಜ್ಯದ ಬೊಕ್ಕಸಕ್ಕೆ ತೆರಿಗೆ ನೀಡಿದರೆ ಸಾಲದು. ಸ್ಥಳೀಯ ಜನರ ಅಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದು ಸಂಸದ ಗೋಂವಿದ ಎಂ ಕಾರಜೋಳ ಹೇಳಿದರು.
ಇದರೊಂದಿಗೆ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೂ ಕಾನೂನು ರೂಪಿಸಲಾಗಿದೆ. ಗಣಿಗಾರಿಕೆಯಿಂದ ಉಂಟಾದ ಪ್ರಕೃತಿ ಹಾನಿಯನ್ನು ಸಮತೋಲನಗೊಳಿಸಲು ಸಹ ಗಣಿ ಕಂಪನಿಗಳು ಸರಿಯಾದ ಕೆಲಸ ಮಾಡಬೇಕು. ಗಣಿ ಕಂಪನಿಗಳ ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ) ನಿಧಿಯಲ್ಲಿ ಸಂಗ್ರಹವಾದ ಹಣವೆಷ್ಟು? ಈ ಹಣವನ್ನು ಎಲ್ಲಿ ಬಳಕೆ ಮಾಡಲಾಗಿದೆ? ಗಣಿ ಕಂಪನಿಗಳು ಕಾರ್ಪೋರೇಟ್ ಕಚೇರಿಗಳನ್ನು ಮುಂಬಯಿ, ದೆಹಲಿ ಅಥವಾ ದೂರುದ ಊರುಗಳಲ್ಲಿ ಸ್ಥಾಪಿಸಿ, ಅಲ್ಲಿ ಸಿ.ಎಸ್.ಆರ್. ನಿಧಿ ಬಳಕೆ ಮಾಡುವುದು ತರವಲ್ಲ. ಸ್ಥಳೀಯ ಜನರು ಹಾಗೂ ಪ್ರದೇಶ ಅಭಿವೃದ್ಧಿ ಬಳಸಬೇಕು. ಕುಡಿಯುವ ನೀರು, ಶಾಲೆ-ಕಾಲೇಜು, ರಸ್ತೆ, ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಗಣಿ ಕಂಪನಿಗಳು ಕೊಡುಗೆ ನೀಡಬೇಕು ಎಂದರು.
ಗಣಿ ಅಧಿಕಾರಿಗಳು ರಾಜಸ್ವ ಬೊಕ್ಕಸಕ್ಕೆ ಹಣ ತುಂಬವ ಕೆಲಸ ಮಾಡುವದರ ಜೊತೆಗೆ ಗಣಿ ಕಂಪನಿಗಳ ಸಿ.ಎಸ್.ಆರ್. ನಿಧಿ ಬಳಕೆ ಕುರಿತು ನಿಗಾ ವಹಿಸಬೇಕು. ಮುಂದಿನ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗಣಿ ಕಂಪನಿಗಳ ಮುಖ್ಯಸ್ಥರು ಸಿ.ಎಸ್.ಆರ್. ನಿಧಿ ಬಳಕೆ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ತಪ್ಪದೇ ಭಾಗವಹಿಸುವಂತೆ ಸೂಚನೆ ನೀಡಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಎಂಇಆರ್ಸಿ ನಿಧಿ ಬಳಕೆಗೆ ಒತ್ತು: ಜಿಲ್ಲೆಗೆ ಕೆಎಂಇಆರ್ಸಿ ಅಡಿ ರೂ.3792 ಕೋಟಿ ಅನುದಾನ ಲಭ್ಯವಿದ್ದು, ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಗಣಿ ಭಾಧಿತ ಪ್ರದೇಶಗಳು ಹಾಗೂ ಇತರೆ ಸ್ಥಳಗಳಲ್ಲಿಯೂ ಅಭಿವೃದ್ಧಿ ಮಾಡಲು ಒತ್ತು ನೀಡಲಾಗುವುದು. ಕೆಎಂಇಆರ್ಸಿ ನಲ್ಲಿ ಪರಿಸರ ಪುನರ್ಸ್ಥಾಪನೆಗೆ 555.64 ಕೋಟಿ ರೂ., ಕೃಷಿ ಆಧಾರಿತ ಚಟುವಟಿಕೆಗೆ -391.04 ಕೋಟಿ ರೂ., ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣ ರಸ್ತೆ- 978.68 ಕೋಟಿ, ಆರೋಗ್ಯ ಕ್ಷೇತ್ರ -255.94 ಕೋಟಿ, ಶಿಕ್ಷಣ-330.58 ಕೋಟಿ, ವಸತಿ-106.88 ಕೋಟಿ, ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆ-620.2 ಕೋಟಿ, ನೀರಾವರಿ-154.70 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಿಗಾಗಿ ಒಟ್ಟು 3792. 30 ಕೋಟಿ ರೂ. ನಿಧಿಯನ್ನು ಹಂಚಿಕೆ ಮಾಡಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಈ ಕುರಿತು ರೂಪಿಸಲಾಗಿರುವ ಕ್ರಿಯಾ ಯೋಜನೆಯನ್ನು ಮುಂದಿನ ಸಭೆಯಲ್ಲಿ ಮಂಡಿಸಿ, ಅಗತ್ಯವಿದ್ದಲ್ಲಿ, ಕ್ರಿಯಾಯೋಜನೆಯಲ್ಲಿ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಜಿಲ್ಲೆಯ ಕುರಿತು ಚರ್ಚಿಸಿದ್ದೇನೆ. ಅವರ ಸಮ್ಮುಖದಲ್ಲಿಯೇ ಎಲ್ಲಾ ಗಣಿ ಕಂಪನಿಗಳ ಮುಖ್ಯಸ್ಥರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಗಣಿ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್, ಹಿರಿಯ ಭೂವಿಜ್ಞಾನಿ ನಾಗೇಂದ್ರಪ್ಪ ಸೇರಿಂದತೆ ಮತ್ತಿರರು ಇದ್ದರು.

Share This Article
error: Content is protected !!
";