Ad image

78ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ.ಕೆ.ಜಿ ಶಾಂತಿ ಕರೆ ದೇಶದ ಒಳಿತಿಗಾಗಿ ಒಟ್ಟಾಗಿ ಶ್ರಮಿಸೋಣ

Vijayanagara Vani
78ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ.ಕೆ.ಜಿ ಶಾಂತಿ ಕರೆ ದೇಶದ ಒಳಿತಿಗಾಗಿ ಒಟ್ಟಾಗಿ ಶ್ರಮಿಸೋಣ
ಬಳ್ಳಾರಿ,ಆ.15
ಭವ್ಯ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಏಕತೆಯಿಂದ ಒಗ್ಗಟ್ಟಾಗಿ ದೇಶದ ಒಳಿತಿಗಾಗಿ ಶ್ರಮಿಸೋಣ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ ಶಾಂತಿ ಅವರು ಕರೆ ನೀಡಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಬಳ್ಳಾರಿ ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ನೌಕರರ ಸಂಘ ಮತ್ತು ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹೊಸ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 78 ನೇ ಸ್ವಾತಂತ್ರೋತ್ಸವವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ “ಏಕ್ ಪೇಡ್ ಮಾ ಕೇ ನಾಮ್” ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ದಿನ ಸಂಭ್ರಮದ ಹಬ್ಬವನ್ನಾಗಿ ಆಚರಿಸುವುದರ ಹಿಂದೆ ದೇಶದ ಸ್ವಾತಂತ್ರೋತ್ಸವಕ್ಕಾಗಿ ಮಡಿದ ಮಹಾತ್ಮ ಗಾಂಧಿ, ಡಾ.ಬಿರ್.ಆರ್.ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಯ್ ಪಾಟೀಲ್, ಜವಾಹರ್‌ಲಾಲ್ ನೆಹರು, ಲಾಲ್ ಬಹುದ್ದೂರ್ ಶಾಸ್ತಿ, ಲಾಲ್ ಲಜಪತ್ ರಾಯ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷಿö್ಮ ಬಾಯಿ, ಸರೋಜಿನಿ ನಾಯ್ಡು, ಮತ್ತು ಹಲವಾರು ಮಹಿನೀಯರ ಶ್ರಮವಿದೆ ಎಂದು ತಿಳಿಸಿದರು.
ಇಂದು ದೇಶಕ್ಕಾಗಿ ಹೋರಾಡಿದ ಎಲ್ಲಾ ಹಿರಿಯರನ್ನು ಸ್ಮರಿಸಿ, ಅವರ ತ್ಯಾಗ, ಬಲಿದಾನ, ಸಾಧನೆಯ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಶದ ಸರ್ವೊತೋಮುಖ ಬೆಳವಣಿಗೆಗೆ ಚಿಂತನೆ ಮಾಡಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ನಾನು ನನ್ನದು ಎನ್ನುವ ನಮ್ಮೊಳಗಿನ ಸ್ವಯಂ ವ್ಯಕ್ತಿತ್ವವನ್ನು ಹಿಮ್ಮೆಟ್ಟಿಸಿ, ಸುಭದ್ರ ದೇಶ ಕಟ್ಟುವಲ್ಲಿ ದಿಟ್ಟ ನಿರ್ಧಾದೊಂದಿಗೆ ದೇಶದ ಭದ್ರತೆಗಾಗಿ ಪಣ ತೊಡಬೇಕು ಎಂದು ತಿಳಿಸಿದರು.
ಸ್ವಾತಂತ್ರೋತ್ಸವದಿನಾಚರಣೆಯನ್ನು ಸಾಂಕೇತಿಕವಾಗಿ ಈ ದಿನ ಮಾತ್ರ ಹಿರಿಯರಿಗೆ ಗೌರವ ಸೂಚಿಸುವುದರೊಂದಿಗೆ ಸೀಮಿತಗೊಳಿಸದೆ, ದಿನ ನಿತ್ಯ ದೇಶದ ಅಭಿವೃದ್ಧಿಗಾಗಿ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಭಾರತ ದೇಶವು ಆರ್ಥಿಕತೆ, ವೈದ್ಯಕೀಯ, ವೈಜ್ಞಾನಿಕ, ಶಿಕ್ಷಣ, ಕ್ರೀಡೆ, ಉದ್ಯಮ, ತಾಂತ್ರಿಕತೆ, ಕೃಷಿ, ಬಲಿಷ್ಠ ಸೇನಾ ಪಡೆ, ಸೇವಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ದೇಶದ ರಕ್ಷಣೆ, ಭದ್ರತೆ ಮತ್ತು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ, ಕಾನೂನು, ರಾಜಕಾರಣಿ, ಅಧಿಕಾರಿಗಳಿಂದ ಮಾತ್ರವಲ್ಲದೆ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಸಹ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ದೇಶದ ಹಿತ ರಕ್ಷಣೆ ಕಾಪಾಡಬೇಕು ಎಂದು ತಿಳಿಸಿದರು.
ನೈಸರ್ಗಿಕ ಸಂಪನ್ಮೂಲಗಳನ್ನು ಒಳ್ಳೇ ರಿತಿಯಿಂದ ಸದುಪಯೋಗ ಪಡೆದುಕೊಂಡು, ಮುಂದಿನ ಪೀಳಿಗೆಗೆ ಪರಿಸರದ ಮಹತ್ವದ ಅರಿವು ಮೂಡಿಸಬೇಕು. “ಏಕ್ ಪೇಡ್ ಮಾ ಕೇ ನಾಮ್” ಅಭಿಯಾನದಡಿ ತಾಯಿಯ ಹೆಸರಿನಡಿ ಗಿಡ ನೆಟ್ಟಿ, ತಾಯಿಯಂತೆ ಪೋಷಿಸಿ ಅರಣ್ಯ ರಕ್ಷಿಸಬೇಕು ಎಂದು ತಿಳಿಸಿದರು.
ಹಿರಿಯ ನಿವೃತ್ತ ವಕೀಲರು ಹಾಗೂ ಮಾಜಿ ವಿಧಾನ ಪರಿಷತ್ ಶಾಸಕರಾದ ಎನ್.ತಿಪ್ಪಣ್ಣ ಅವರು ಮಾತನಾಡಿ, ತಮ್ಮ ವೃತ್ತಿಯ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ, ಅನುಭವದ ಕಾರ್ಯ ವೈಖರಿಯನ್ನು ತಿಳಿಸಿದರು.
ವಕೀಲರಾದವರು ಸತ್ಯದ ಪರ ಕಾನೂನಿನಡಿ ಕಾರ್ಯ ನಿರ್ವಹಿಸಬೇಕು, ಹಿರಿಯ ವಕೀಲರು, ಕಿರಿಯ ವಕೀಲರನ್ನು ಶ್ರೇಷ್ಟ ವಕೀಲರನ್ನಾಗಿಸಲು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ ವತಿಯಿಂದ ಸಂಗೀತ ಗಾಯನ ಕೇಳುಗರಲ್ಲಿ ದೇಶಪ್ರೇಮ ಹೆಚ್ಚಸಿತು. ಹಾಗೂ ಸಿಬ್ಬಂದಿಯಾದ ರೇಣುಕಾ ಮತ್ತು ವೀರೇಶ್ ಅವರ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟೀಷ್ ಅಧಿಕಾರಿಯೊಂದಿಗೆ ನಡೆದ ಮನ್ರೋ ಒಪ್ಪಂದದ ಅಭಿನಯದ ತುಣುಕು ನೆರೆದಿದ್ದವರಲ್ಲಿ ರೋಮಾಂಚನ ಮೂಡಿಸಿತು.
ಇದೇ ವೇಳೆ “ಏಕ್ ಪೇಡ್ ಮಾ ಕೇ ನಾಮ್” ಅಭಿಯಾನದಡಿ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಜೇಶ್ ಎನ್.ಹೊಸಮನೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮ ಸೇರಿದಂತೆ ನ್ಯಾಯಾಲಯದ ನ್ಯಾಯಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾವಾಧಿಗಳು, ಸಿಬ್ಬಂದಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು
Share This Article
error: Content is protected !!
";