Ad image

ಗ್ರಂಥ ಪಾಲಕನ ಪುಸ್ತಕ ಪ್ರೀತಿ

Vijayanagara Vani
ಗ್ರಂಥ ಪಾಲಕನ ಪುಸ್ತಕ ಪ್ರೀತಿ
ಮೊರೊಕ್ಕೋ ದೇಶದ ರಬಾತ್ ಎಂಬ ಸ್ಥಳದಲ್ಲಿ ವಾಸವಾಗಿರುವ 72 ವರ್ಷದ ಮೊಹಮ್ಮದ್ ಅಜೀಜ್ ಎಂಬ ಗ್ರಂಥಪಾಲಕನ ಕುರಿತು ಜಗತ್ತಿನ
ಬಹುತೇಕ ಗ್ರಂಥಪ್ರಿಯರು ಅರಿಯಬೇಕಾದ ವಿಷಯ ಬಹಳಷ್ಟು ಇದೆ.
26 ಪ್ರತಿಶತದಷ್ಟು ಜನ ಅನಕ್ಷರಸ್ತರನ್ನು ಹೊಂದಿರುವ ಮೊರೊಕ್ಕೋ ದೇಶದಲ್ಲಿ ಓದುವಿಕೆಯ ಮೂಲಕ ಜೀವನವನ್ನು ಬದಲಿಸಬಹುದು ಎಂಬ ಸತ್ಯವನ್ನು ಅರಿಯದ, ತಮ್ಮ ದೇಶದ ಸಂಸ್ಕೃತಿ ಮತ್ತು ಜಾಗತಿಕ ಸಂಬಂಧಗಳನ್ನು ಅರಿಯದ ದೇಶದಲ್ಲಿ ಪುಸ್ತಕ ಮಾರಾಟ ಮಾಡುವುದು ಅಷ್ಟೇನು ಸುಲಭವಲ್ಲ.
ಆರನೇ ವಯಸ್ಸಿನಲ್ಲಿ ಅನಾಥನಾದ ಅಜೀಜ್ ಜೀವನ ಅಷ್ಟೇನೂ ಸುಲಭವಾಗಿರಲಿಲ್ಲ. ಬದುಕನ್ನು ನಿರ್ವಹಿಸುವುದೇ ಕಷ್ಟಕರವಾದಾಗ ಶಾಲಾ ಪುಸ್ತಕಗಳಿಗೆ ಹಣ ಹಾಕಲು ಅಜೀಜಗೆ ಸಾಧ್ಯವಿಲ್ಲದ ಕಾರಣ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪೂರೈಸಲಾಗಲಿಲ್ಲ.
1963 ರಲ್ಲಿ ತನ್ನ 15ನೇ ಹರೆಯದಲ್ಲಿ ಆತ ಮರವೊಂದರ ಕೆಳಗೆ ಚಾಪೆಯನ್ನು ಹಾಸಿ ಕೇವಲ ಒಂಬತ್ತು ಪುಸ್ತಕಗಳನ್ನು ಜೋಡಿಸಿಟ್ಟು ತನ್ನ ಗ್ರಂಥ ಪಾಲಕನ ವೃತ್ತಿಯನ್ನು ಆರಂಭಿಸಿದ. ಇದೀಗ ಆತನ ಪುಸ್ತಕದ ಅಂಗಡಿ ಸಾವಿರಾರು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದು ಇಂದಿಗೂ ಪುಸ್ತಕದ ಕಥೆಗಳ ಲೋಕದಲ್ಲಿ ತನ್ನನ್ನು ತಾನು ಮುಳುಗಿಸಿಕೊಂಡಿದ್ದು ಪುಸ್ತಕಗಳ ಕುರಿತ ಆತನ ಅತೀವ ಮೋಹ ಕಮ್ಮಿಯಾಗಿಲ್ಲ.
ಪ್ರತಿದಿನ ಆರರಿಂದ ಎಂಟು ಗಂಟೆಗಳಷ್ಟು ಕಾಲ ಪುಸ್ತಕ ಲೋಕದಲ್ಲಿ ಮುಳುಗೇಳುವ ಆತ ಆಹಾರ ಸೇವಿಸಲು, ಪ್ರಾರ್ಥನೆಯ ಸಮಯ, ಧೂಮ್ರಪಾನ ಮತ್ತು ತನ್ನ ಅಂಗಡಿಗೆ ಬರುವ ಗ್ರಾಹಕರಿಗೆ ಸಹಾಯ ಮಾಡಲು ಮಾತ್ರ ಏಳುತ್ತಾನೆ.ಉಳಿದ ಸಮಯದಲ್ಲಿ ಆತ ತನ್ನ ಸುತ್ತಮುತ್ತಲಿನ ಅಂಗಡಿಗಳಲ್ಲಿ ತನ್ನ ಅಂಗಡಿಯಲ್ಲಿ ಮಾರಾಟ ಮಾಡಲು ಬಯಸುವ ಪುಸ್ತಕಗಳನ್ನು ಹುಡುಕಾಡುತ್ತಾನೆ.
ತನ್ನ ಕಷ್ಟಕರ ಬಾಲ್ಯ ಮತ್ತು ಬಡತನಕ್ಕೆ ಸವಾಲು ಇದು ಎಂದು ಹೇಳುವ ಆತ ಇದುವರೆಗೂ ಅರೇಬಿಕ್, ಫ್ರೆಂಚ್,ಇಂಗ್ಲಿಷ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿನ ನಾಲ್ಕು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದಾನೆ.4000ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿರುವ ನಾನು 4000ಕ್ಕೂ ಹೆಚ್ಚು ಜೀವಿತಗಳನ್ನು ಜೀವಿಸಿದ್ದೇನೆ ಎಂದು ಹೇಳುವ ಆತ ಕೇವಲ ಎರಡು ದಿಂಬು ಮತ್ತು ಒಂದು ಪುಸ್ತಕ ತನ್ನಿಡೀ ದಿನದ ಸಂತೋಷವನ್ನು ಪಡೆಯಲು ಸಾಕು ಎಂದು ಹೇಳುತ್ತಾನೆ. ಎಲ್ಲರಿಗೂ ಬದುಕಿನಲ್ಲಿ ಓದುವ ಅವಕಾಶಗಳು ದೊರೆಯಬೇಕು ಎಂಬುದನ್ನು ಒತ್ತುಕೊಟ್ಟು ಹೇಳುವ ಆತ ನನ್ನ ಬಳಿ ಇರುವ ಪುಸ್ತಕಗಳ ಸಂಖ್ಯೆಯನ್ನು ಕೇಳಿದರೆ ಅಷ್ಟೇನೂ ಇಲ್ಲ ಎಂದು ಉತ್ತರಿಸುತ್ತಾನೆ
ಸುಮಾರು 43 ವರ್ಷಗಳಿಂದ ಒಂದೇ ಸ್ಥಳದಲ್ಲಿ ಪುಸ್ತಕದ ಮಳಿಗೆಯನ್ನು ಹೊಂದಿರುವ ಆತನ ಪುಸ್ತಕದ ಅಂಗಡಿ ಜಗತ್ತಿನ ಅತಿ ಹಳೆಯ ಪುಸ್ತಕದ ಅಂಗಡಿಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ.
ಪುಸ್ತಕದ ಮಳಿಗೆಗೆ ಎಂದೂ ಬೀಗ ಹಾಕದೆ ಅಲ್ಲಿಯೇ ಬಿಟ್ಟು ಹೋಗುವ ಆತನನ್ನು ಯಾಕೆ ಹೀಗೆ ಮಾಡುತ್ತೀರಿ, ಯಾರಾದರೂ ಕಳವು ಮಾಡುವುದಿಲ್ಲವೇ? ಎಂದು ಕೇಳಿದಾಗ ಆತ ಹೇಳುವುದು ಹೀಗೆ “ಪುಸ್ತಕ ಓದಲು ಸಾಧ್ಯವಿಲ್ಲದವರು ಕಳ್ಳತನ ಮಾಡುವುದಿಲ್ಲ, ಮತ್ತು ಪುಸ್ತಕ ಓದಲು ಇತರ ತೆಗೆದುಕೊಂಡು ಹೋಗುವವರು ಕಳ್ಳರಲ್ಲ.”
ಅಬ್ದುಲ್ ಆಜೀಜ್ ತನ್ನಿಡಿ ಜೀವನವನ್ನು ಪುಸ್ತಕಗಳನ್ನು ಓದುವ, ಸಂಗ್ರಹಿಸುವ ಮತ್ತು ಮಾರುವ ಕೆಲಸಗಳಲ್ಲಿಯೇ ತೊಡಗಿಕೊಂಡಿದ್ದು ಇಂದಿಗೂ ಇಂತಹವರು ಇದ್ದಾರೆ ಎಂಬುದು ಪುಸ್ತಕ ಸಂಸ್ಕೃತಿಯ ಉಳಿವನ್ನು ಸೂಚಿಸುತ್ತದೆ.
ಪುಸ್ತಕವು ನಮ್ಮ ಮಸ್ತಕವನ್ನು ಆಳುತ್ತದೆ. ಪುಸ್ತಕವನ್ನು ಓದುವ ವ್ಯಕ್ತಿ ಲೋಕಜ್ಞಾನವನ್ನು ಪಡೆಯುವ ಮೂಲಕ ತನ್ನ ಬದುಕಿನ ಮೌಲ್ಯಗಳನ್ನು
ಹೆಚ್ಚಿಸಿಕೊಳ್ಳುತ್ತಾನೆ. ಪುಸ್ತಕ ತಂದೆಯಂತೆ ನಮ್ಮನ್ನು ಸಲಹುತ್ತದೆ ತಾಯಿಯಂತೆ ಪ್ರೀತಿಸುತ್ತದೆ ಗುರುವಿನಂತೆ ಬೋಧಿಸುತ್ತದೆ ಮತ್ತು ಸ್ನೇಹಿತನಂತೆ ಬುದ್ಧಿ ಹೇಳುತ್ತದೆ. ಓದುವಿಕೆಯು ನಮ್ಮನ್ನು ಅಗಾಧ ವಿಸ್ಮಯಗಳಿಗೆ, ಜ್ಞಾನಕ್ಕೆ,ಕುತೂಹಲಕ್ಕೆ ಈಡು ಮಾಡುವುದಲ್ಲದೆ ಪ್ರಾಪಂಚಿಕ ಬದುಕಿನ ಸವಾಲುಗಳಿಗೆ, ಪ್ರಸ್ತುತ ಬದುಕಿನ ಎಲ್ಲ ಜಂಜಡಗಳಿಗೆ ನಾವು ಪುಸ್ತಕಗಳಲ್ಲಿ ಉತ್ತರ ಹುಡುಕಬಹುದು.
ಏನಂತೀರಾ ಸ್ನೇಹಿತರೇ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
Share This Article
error: Content is protected !!
";