ತೊಟ್ಟಿಯಿಂದ ಅಗಸದವರೆಗೆ….. ಲಿಸಾ ಸ್ಥಲೇಕರ್

Vijayanagara Vani
ತೊಟ್ಟಿಯಿಂದ ಅಗಸದವರೆಗೆ….. ಲಿಸಾ ಸ್ಥಲೇಕರ್

ಹುಟ್ಟಿದ ಕೂಡಲೇ ಕಸದ ತೊಟ್ಟಿಗೆ ಎಸೆಯಲ್ಪಟ್ಟ ಆಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಳು.

- Advertisement -
Ad imageAd image

1973ರ ಅಗಸ್ಟ್ 13…..ಆಗತಾನೆ ಹುಟ್ಟಿದ ಆ ಮಗುವನ್ನು ಪುಣೆಯ ಶ್ರೀವಾಸ್ತವ ಅನಾಥಾಲಯದ ಹೊರಗೆ ಆಕೆಯನ್ನು ಹೆತ್ತವರು ಬಿಟ್ಟು ಹೋಗಿದ್ದರು.
ಅನಾಥಾಶ್ರಮದ ಮುಖ್ಯಸ್ಥ ಆ ಮಗುವನ್ನು ಆಶ್ರಮಕ್ಕೆ ಕರೆತಂದು ಲೈಲಾ ಎಂದು ಪ್ರೀತಿಯಿಂದ ಹೆಸರಿಟ್ಟರು.
ಅನಾಥಾಶ್ರಮದ ಉಳಿದೆಲ್ಲ ಮಕ್ಕಳಂತೆ ಆಕೆ ಬೆಳೆಯತೊಡಗಿದಳು.

ಅದೊಂದು ದಿನ ಅಮೆರಿಕಾದ ದಂಪತಿಗಳಾದ ಹರೇನ ಮತ್ತು ಸೂ ಶ್ರೀವಾಸ್ತವ ಅನಾಥಾಶ್ರಮಕ್ಕೆ ಭೇಟಿಕೊಟ್ಟರು. ಅವರಿಗೆ ಈಗಾಗಲೇ ಓರ್ವ ಪುಟ್ಟ ಮಗಳಿದ್ದು, ಗಂಡು ಮಗುವನ್ನು ದತ್ತು ಪಡೆಯಬೇಕೆಂಬ ಆಕಾಂಕ್ಷೆ ಅವರದಾಗಿತ್ತು. ಮುದ್ದಾದ ಗಂಡು ಮಗುವಿನ ಹುಡುಕಾಟದಲ್ಲಿ ಬಂದ ಆ ದಂಪತಿಗಳಿಗೆ ಗಂಡು ಮಗು ದೊರೆಯಲಿಲ್ಲ, ಆದರೆ ಸೂ ಳ ಕಣ್ಣು ಮುಗ್ಧ ಮುಖದ ಕಂದುವರ್ಣದ ಅರಳು ಕಂಗಳ ಪುಟ್ಟ ಬಾಲಕಿ ಲೈಲಾ ಮೇಲೆ ಬಿದ್ದು ಮೊದಲ ನೋಟದಲ್ಲಿಯೇ ಆಕೆಯ ಪ್ರೀತಿಗೆ ಬಿದ್ದಳು.

ಕಾನೂನು ಪ್ರಕ್ರಿಯೆಗಳ ಮೂಲಕ ಲೈಲಾಳನ್ನು ದತ್ತು ತೆಗೆದುಕೊಂಡ ಅಮೆರಿಕನ್ ಪಾಲಕರು ಆಕೆಗೆ ಲಿಜ್(ಲೀಸಾ)ಎಂದು ಹೆಸರನ್ನು ಬದಲಾಯಿಸಿದರು. ಮುಂದೆ ಅಮೆರಿಕಾಗೆ ಮಗುವಿನೊಂದಿಗೆ ಪಯಣ ಬೆಳೆಸಿದ ಅವರು ಕೆಲ ವರ್ಷಗಳ ನಂತರ ಆಸ್ಟ್ರೇಲಿಯಾಗೆ ತೆರಳಿ ಅಲ್ಲಿಯೇ ವಾಸಿಸಲಾರಂಭಿಸಿದರು.

ಲಿಜ್ ಗೆ ಆಕೆಯ ಸಾಕು ತಂದೆ ಕ್ರಿಕೆಟ್ ಕಲಿಸಲಾರಂಭಿಸಿದ. ಮನೆಯ ಅಂಗಳದಲ್ಲಿ, ಹತ್ತಿರದ ಪಾರ್ಕಿನಲ್ಲಿ ಆರಂಭವಾದ ಆಕೆಯ ಕ್ರಿಕೆಟ್ ಕಲಿಕೆ ಮುಂದೆ ಓಣಿಯ ಗಂಡು ಮಕ್ಕಳೊಡನೆ ಆಡುವಲ್ಲಿಯವರೆಗೆ ಮುಂದುವರೆಯಿತು. ತನ್ನ ವಿದ್ಯಾಭ್ಯಾಸದ ಜೊತೆ ಜೊತೆಗೆ ಕ್ರಿಕೆಟನಲ್ಲಿಯೂ ಮುಂದುವರೆದ ಆಕೆ ಎರಡರಲ್ಲೂ ಅಷ್ಟೇ ಸಮಾನ ಆಸಕ್ತಿಯನ್ನು ಹೊಂದಿದ್ದಳು. ಒಂದು ಹಂತದ ಓದನ್ನು ಪೂರೈಸಿದ ನಂತರ ಆಕೆ ಸಂಪೂರ್ಣವಾಗಿ ಕ್ರಿಕೆಟ್ ನ ಸಾಧನೆಯಲ್ಲಿ ತಲ್ಲೀನಳಾದಳು.

ಮೊದಮೊದಲು ಕೇವಲ ಆಕೆ ಮಾತನಾಡಿದರೆ ನಂತರ ಆಕೆಯ ಬ್ಯಾಟ್ ಮಾತನಾಡಲಾರಂಭಿಸಿತು… ಪರಿಣಾಮವಾಗಿ ಆಕೆಯ ಕ್ರಿಕೆಟ್ ಆಟದ ದಾಖಲೆಗಳು ಜೋರಾಗಿ ಸದ್ದು ಮಾಡತೊಡಗಿದವು. ಶೇಕರ್ ( ಅಲುಗಾಡಿಸುವವಳು) ಎಂಬ ನಿಕ್ ನೇಮ್ ಆಕೆಯದಾಗಿತ್ತು ರೈಟ್ ಹ್ಯಾಂಡೆಡ್ ಬ್ಯಾಟ್ಸ ವುಮನ್ ಆಗಿದ್ದ ಆಕೆ ಲೆಫ್ಟ್ ಹ್ಯಾಂಡ್ ಆಫ್ ಸ್ಪಿನ್ನರ್ (ಬೌಲರ್) ಕೂಡ ಆಗಿದ್ದಳು.

1997 ರಲ್ಲಿ ನ್ಯೂ ಸೌತ್ ವೇಲ್ಸ್ ನ ಪರವಾಗಿ ಮೊದಲ ಪಂದ್ಯವನ್ನು ಆಡಿದ ಆಕೆ ಹಿಂತಿರುಗಿ ನೋಡಲೇ ಇಲ್ಲ. ಮೊದಲ ಬಂದಿದೆ ಆಕೆಯ ಸಹಾಯಕರನ್ಗಳ ಮೊತ್ತ ಮತ್ತು ವಿಕೆಟ್ಗಳ ಪರಿಣಾಮವಾಗಿ ಆ ವರ್ಷದ ಕಪ್ಪನ್ನು ಆಕೆಯ ತಂಡ ಗೆದ್ದುಕೊಂಡಿತು. ಮುಂದಿನ ಐದು ವರ್ಷ ಕೂಡ ಆಕೆಯ ರನ್ಗಳ ಸುರಿಮಳೆ ಮತ್ತು ವಿಕೆಟ್ಗಳ ಪತನದಿಂದ ನ್ಯೂ ಸೌತ್ ವೇಲ್ಸ್ ಮೊದಲ ಸ್ಥಾನ ಗೆದ್ದುಕೊಂಡಿತು.

2001ರಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಮೊದಲ ಒನ್ ಡೇ ಕ್ರಿಕೆಟ್ ಪಂದ್ಯವನ್ನು ಆಡಿದ ಆಕೆ 2003ರಲ್ಲಿ ಮೊದಲ ಟೆಸ್ಟ್ ಮ್ಯಾಚ್ ನ ಮೂಲಕ ಟೆಸ್ಟ್ ಮ್ಯಾಚ್ ಗಳಿಗೆ ಅಡಿಯಿರಿಸಿದಳು.

2005ರಲ್ಲಿ ಮೊದಲ ಮಹಿಳಾ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಆಡಲು ಆರಂಭಿಸಿದ ಆಕೆ ದಾಖಲೆಯ ಮೊತ್ತವನ್ನು
ಪೇರಿಸಿದಳು.

ಆಡಿದ ಒಟ್ಟು ಎಂಟು ಟೆಸ್ಟ್ ಮ್ಯಾಚ್ಗಳಲ್ಲಿ 416 ರನ್ನುಗಳು 23 ವಿಕೆಟ್ಗಳನ್ನು ಪಡೆದಿರುವ ಆಕೆ 125 ಒಂದು ದಿನದ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ
2,728 ರನ್ಗಳನ್ನು 146 ವಿಕೆಟ್ಗಳನ್ನು ಪಡೆದಳು.
54 ಟಿ 20 ಪಂದ್ಯಗಳನ್ನು ಆಡಿರುವ ಆಕೆ 764 ರನ್ನುಗಳನ್ನು ಕಲೆ ಹಾಕಿದ್ದು 60 ವಿಕೆಟ್ಗಳನ್ನು ಪಡೆದಿದ್ದಾಳೆ.

ಸಾವಿರಕ್ಕೂ ಹೆಚ್ಚು ರನ ಗಳನ್ನು ಗಳಿಸಿರುವ ಮತ್ತು ನೂರಕ್ಕೂ ಹೆಚ್ಚು ವಿಕೆಟಗಳನ್ನು ಒಂದು ದಿನದ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಗಳಿಸಿರುವ ವಿಶ್ವದ ಮೊತ್ತ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆ ಆಕೆಯ ಪಾಲಿಗಿದೆ.

ಆಗ ತಾನೇ ಶುರುವಾಗಿದ್ದ ಐಸಿಸಿ ರ‍್ಯಾಂಕಿಂಗ್ ನ ಪ್ರಕಾರ ಮಹಿಳಾ ಕ್ರಿಕೆಟ್ ನಲ್ಲಿ ಜಗತ್ತಿನ ಮೊಟ್ಟ ಮೊದಲ ಆಲ್-ರೌಂಡರ್ ಕ್ರಿಕೆಟ್ ಆಟಗಾರ್ತಿ ಆಕೆಯೇ ಆಗಿದ್ದಳು.

ನಾಲ್ಕು ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ, ಮತ್ತು ಟಿ ಟ್ವೆಂಟಿ ಪಂದ್ಯಾವಳಿಗಳಲ್ಲಿ ಆಡಿರುವ ಆಕೆ ಪೇರಿಸಿರುವ ದಾಖಲೆಗಳು ಅಷ್ಟಿಷ್ಟಲ್ಲ.
2013ರ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಗೆಲುವಿನ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಲಿಜಾ ಸ್ಥಲೇಕಾರ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ತನ್ನ ಹಾಲ್ ಆಫ್ ಫೇಮ್ ನಲ್ಲಿ ಸೇರ್ಪಡೆಗೊಳಿಸಿದೆ.

ಸ್ನೇಹಿತರೆ, ಈ ಬದುಕು ನಮಗೆ ಹತ್ತು ಹಲವು ಅವಕಾಶಗಳನ್ನು ನೀಡುತ್ತದೆ ಹಾಗೆಯೇ ಕೆಲವಷ್ಟನ್ನು ಕಸಿಯುತ್ತದೆ ಕೂಡ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆಯುವ ಜಾಣ್ಮೆ ನಮ್ಮಲ್ಲಿರಬೇಕು. ಒಂದೊಮ್ಮೆ ನಮ್ಮ ಬೆಳವಣಿಗೆ ಕುಂಠಿತವಾದರೆ ಎಲ್ಲಿ ತಪ್ಪುಗಳಾಗುತ್ತಿವೆ ಎಂಬುದನ್ನು ಅರಿತು ಆ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ನಮ್ಮ ತಪ್ಪುಗಳಿಂದಲೇ ಪಾಠ ಕಲಿಯುವ ಆ ಮೂಲಕ ಬದುಕಿನಲ್ಲಿ ಮುನ್ನಡೆಯಬೇಕು.
ನಮ್ಮ ಪ್ರಸ್ತುತ ಲೇಖನದಲ್ಲಿನ ಲಿಸಾ ಎಂಬ ಮಹಿಳೆ ಕಸದ ತೊಟ್ಟಿಯಲ್ಲಿ ಸಿಕ್ಕು ಆಗಸವನ್ನು ಮುಟ್ಟಲು ಪ್ರಯತ್ನಿಸಿ ಯಶಸ್ವಿಯಾಗಿದ್ದು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";