ಅಮೆರಿಕಾದ ಓರ್ವ ನಟ ಸಂಗೀತಗಾರ ಮತ್ತು ಚಿತ್ರ ನಿರ್ಮಾಪಕನಾಗಿ ಪ್ರಸಿದ್ಧನಾದ ವಿಲ್ ಸ್ಮಿತ್ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ.
ವಿಲ್ ಸ್ಮಿತ್ ಒಂದು ಬಾರಿ ಹೀಗೆ ಹೇಳಿದ “ನನ್ನ ಇಡೀ ಜೀವನದಲ್ಲಿ ನಾನು ಹಣ ಮಾಡಲು ಪ್ರಯತ್ನಿಸಿದೆ. ನನಗೆ ಬೇಕಾದ ಎಲ್ಲಾ ಐಷಾರಾಮಿ ವಸ್ತುಗಳನ್ನು ಖರೀದಿಸಿದ ನಂತರ ಒಂದು ಹಂತದಲ್ಲಿ ನಾನು ಎಲ್ಲವನ್ನು ಹಂತಹಂತವಾಗಿ ಕೊಡಲಾರಂಭಿಸಿದೆ. ಕಾರಣ… ನನಗೆ ಈ ಎಲ್ಲಾ ವಸ್ತುಗಳ ನಶ್ವರತೆಯ ಅರಿವಾಯಿತು.
ಐಹಿಕ ಸುಖ ಭೋಗಗಳು ಎಂದೂ ನಮ್ಮನ್ನು ತೃಪ್ತ ರಾಗಿಸಲು ಸಾಧ್ಯವಿಲ್ಲ. ನಮ್ಮ ಸಂಬಂಧಗಳು ನಮ್ಮಲ್ಲಿರುವ ಹಣ, ಆಸ್ತಿ, ಅಂತಸ್ತು ಇದಾವುದರಿಂದಲೂ ನಮಗೆ ತೃಪ್ತಿ ಸಿಗುವುದಿಲ್ಲ…. ಇನ್ನೂ ಹೇಳಬೇಕೆಂದರೆ ನಾವು ಅತ್ಯಂತ ಪ್ರೀತಿಯಿಂದ ಜನ್ಮ ನೀಡಿದ ನಮ್ಮ ಮಕ್ಕಳಿಂದಲೂ ನಮಗೆ ಸುಖ ನೆಮ್ಮದಿ ಸಂತಸ ಸಿಗಲು ಸಾಧ್ಯವಿಲ್ಲ… ಕಠೋರ ಎಂದೆನಿಸಿದರೂ ಇದು ಸತ್ಯ.
ನಿಜವಾದ ಸಂತಸ, ನೆಮ್ಮದಿ ಮತ್ತು ತೃಪ್ತಿ ನಮಗೆ ದೊರೆಯುವುದು ನಮ್ಮ ಮನಸ್ಸಿನ ಆನಂದದಿಂದ ನಮ್ಮ ಹೃದಯ ತುಂಬಿದ ಅನುಭವದಿಂದ.
ನಮ್ಮ ಬದುಕಿನಲ್ಲಿ ನಾವು ಹುಡುಕುವ ಬಹಳಷ್ಟು ವಿಷಯಗಳು ನಮ್ಮೊಳಗೆ ಅಡಗಿವೆ. ಗುಡಿ ಗುಂಡಾರಗಳಲ್ಲಿ, ಮಂದಿರಗಳಲ್ಲಿ,ಶಿಲಾಮೂರ್ತಿಗಳಲ್ಲಿ, ಚಿತ್ರಪಟಗಳಲ್ಲಿ ದೇವರನ್ನು ಹುಡುಕುವ ನಾವುಗಳು
ನಮ್ಮ ಹೃದಯದಲ್ಲಿನ ಆಳವಾದ ಆತ್ಮವಿಶ್ವಾಸವನ್ನು ಧೈರ್ಯವನ್ನು ಅರಿಯದೆ ಹೋಗುತ್ತೇವೆ. ದೇವರನ್ನು ನಮ್ಮ ಹೃದಯದಲ್ಲಿಟ್ಟು ನಮ್ಮ ಅಂತರಾತ್ಮವನ್ನು ಮರೆತುಬಿಡುತ್ತೇವೆ…. ಇದಲ್ಲವೇ ನಮ್ಮೆಲ್ಲರ ಬದುಕಿನ ವಿಪರ್ಯಾಸ!
ಹಣದಿಂದ ಸಂತೋಷವನ್ನು ಕೊಳ್ಳಲು ಸಾಧ್ಯವಿದ್ದರೆ ಅತ್ಯಂತ ಶ್ರೀಮಂತ ವ್ಯಕ್ತಿ ಅತ್ಯಂತ ನೆಮ್ಮದಿಯ, ಸಂತಸದ ಜೀವನವನ್ನು ನಡೆಸುತ್ತಿದ್ದ…. ಆದರೆ ಸತ್ಯ ಹಾಗಿಲ್ಲ ಎಂಬ ವಾಸ್ತವದ ಬದುಕನ್ನು ವಿಲ್ ಸ್ಮಿತ್ ನ ಜೊತೆಗೆ ಸಾಕಷ್ಟು ಜನ ಅನುಭವಿಸುತ್ತಿದ್ದಾರೆ. ಹೇರಳವಾಗಿ ಸಂಪಾದಿಸಿದ ಆಸ್ತಿ,ಅಂತಸ್ತು, ಅಧಿಕಾರಿಗಳು ನಮಗೆ ಬದುಕಿನಲ್ಲಿ ಒಂದು ಸ್ಪಷ್ಟತೆಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತವೆ.. ಪ್ರಸ್ತುತ ನಮಗೆ ಸಿಕ್ಕಿರುವ ಗೌರವ ಅಭಿಮಾನಗಳು ಕೆಲ ಕಾಲದ ಮಟ್ಟಿಗೆ ನಮಗೆ ಖುಷಿ ಮತ್ತು ಸಂತಸವನ್ನು ತಂದುಕೊಡಬಹುದು. ಆದರೆ ಅದು ಶಾಶ್ವತವಲ್ಲ ಎಂಬ ಸತ್ಯದ ಬಗ್ಗೆ ನಮಗೆ ಅರಿವಿರಬೇಕು. ನಿಜವಾದ ಆತ್ಮತೃಪ್ತಿ, ಮಾನಸಿಕ ನೆಮ್ಮದಿ ದೊರೆಯುವುದು ನಮ್ಮ ಅರಿವನ್ನು ಹೆಚ್ಚಿಸಿಕೊಂಡಾಗ.. ನಮ್ಮ ಬಾಂಧವ್ಯಗಳಲ್ಲಿ ನಿರೀಕ್ಷೆಗಳನ್ನು ತೊರೆದಾಗ ಮತ್ತು ಅಂತಿಮವಾಗಿ ಮಾನಸಿಕ ನೆಮ್ಮದಿಯನ್ನು ದೈಹಿಕ ಸುಖಗಳಲ್ಲಿ ಹುಡುಕುವುದನ್ನು ನಿಲ್ಲಿಸಿದಾಗ. ನಮ್ಮೊಳಗೆ ಅಡಗಿರುವ ಅಪಾರ ಮಾನಸಿಕ ತೃಪ್ತಿಯ ಸಂಪತ್ತನ್ನು ನಾವು ಅರಿತುಕೊಳ್ಳಬೇಕು.
ಇಡೀ ಪ್ರಪಂಚವನ್ನು ಗೆದ್ದೆ ಎಂದುಕೊಂಡ ವ್ಯಕ್ತಿ ಗ್ರೀಸ್ ನ ಅಲೆಕ್ಸಾಂಡರ್ ದ ಗ್ರೇಟ್…. ಭಾರತ ದೇಶಕ್ಕೆ ದಂಡ ಯಾತ್ರೆಗೆಂದು ಬಂದಾಗ ಅತ್ಯಂತ ಪುಟ್ಟ ರಾಜ್ಯದ ಪುರೂರವ ಎಂಬ ಮಹಾರಾಜ ಆತನನ್ನು ತಡೆದನು. ತನಗಿಂತಲೂ ಹತ್ತು ಪಟ್ಟು ಹೆಚ್ಚು ಸೈನ್ಯ ಬಲವನ್ನು ಹೊಂದಿದ ಅಲೆಕ್ಸಾಂಡರ್ ನನ್ನು ಎದುರು ಹಾಕಿಕೊಂಡದ್ದಲ್ಲದೆ ತಾನು ಸೆರೆ ಸಿಕ್ಕುವವರೆಗೆ ವಿರೋಚಿತವಾದ ಹೋರಾಟ ನಡೆಸಿದನು.
ಸೆರೆ ಸಿಕ್ಕ ಪುರೂರವ ಮಹಾರಾಜನನ್ನು ಸಾಮ್ರಾಟ ಅಲೆಕ್ಸಾಂಡರ್ ನ ಮುಂದೆ ತಂದು ನಿಲ್ಲಿಸಿದಾಗ ನಾಡಿನ ಕುರಿತಾದ ಆತನ ಅಭಿಮಾನ ತನ್ನ ನಾಡಿನ ಜನರಿಗಾಗಿ ಮಿಡಿಯುವ ಶೌರ್ಯ ಮತ್ತು ತನ್ನ ನಾಡಿನ ರಕ್ಷಣೆಗಾಗಿ ಜೀವವನ್ನು ಒತ್ತೆ ಇಡುವ ಗಂಡಾಂತರಕ್ಕೆ ಈಡಾಗುವ ಪುರೂರವ ಮಹಾರಾಜನನ್ನು ಮೆಚ್ಚಿ ಅಲೆಕ್ಸಾಂಡರ್ ಸ್ನೇಹ ಹಸ್ತವನ್ನು ಚಾಚಿದ.
ಇಷ್ಟು ಪುಟ್ಟ ರಾಜ್ಯದ ಪುರುರವ ಮಹಾರಾಜನೇ ತನ್ನ ನಾಡಿನ ರಕ್ಷಣೆಗಾಗಿ ಕಂಕಣ ಬದ್ಧನಾಗಿ ನಿಂತಿದ್ದರೆ ಇನ್ನು ಅಗಾಧ ಸೈನ್ಯವನ್ನು ಹೊಂದಿರುವ ಮಗಧದ
ಸಾಮ್ರಾಟ ಹರ್ಷವರ್ಧನ ಇನ್ನೆಷ್ಟು ಆತ್ಮಭಿಮಾನಿಯಾಗಿರಬೇಕು ಎಂಬುದನ್ನು ಯೋಚಿಸಿಯೇ ಅಲೆಕ್ಸಾಂಡರ್ ಭಾರತವನ್ನು ಬಿಟ್ಟು ತೆರಳಲು ನಿಶ್ಚಯಿಸಿದ.
ಹಾಗೆ ಅಲೆಕ್ಸಾಂಡರ್ ಭಾರತವನ್ನು ಬಿಟ್ಟು ತೆರಳುವ ಮುನ್ನ ತನ್ನ ಸೈನ್ಯದಿಂದ ದೂರ ಏಕಾಂಗಿಯಾಗಿ ಕಾಡಿನಲ್ಲಿ ಬೇಟೆಯಾಡಲು ಬಂದಿದ್ದ ಆತನಿಗೆ ಬಾಯಾರಿಕೆಯಿಂದ ಜೀವ ಹೋಗುವಂತಾಗಿತ್ತು.
ನೀರನ್ನು ಅರಸುತ್ತಾ ಬಂದ ಆತನಿಗೆ ಅತ್ಯಂತ ನೆಮ್ಮದಿಯ ಮುಖ ಮುದ್ರೆಯನ್ನು ಹೊಂದಿದ್ದ ಓರ್ವ ಸನ್ಯಾಸಿ ಕಾಣಿಸಿದ. ಕೇವಲ ಕಾಷಾಯ ವಸ್ತ್ರವನ್ನು ಧರಿಸಿ ಕೈಯಲ್ಲೊಂದು ಕಮಂಡಲ ಮತ್ತು ದಂಡವನ್ನು ಹಿಡಿದಿದ್ದ ಸಂತನ ಮುಖದಲ್ಲಿ ಇದ್ದ ಆತ್ಮ ತೃಪ್ತಿಯನ್ನು ನೋಡಿ ಅಲೆಕ್ಸಾಂಡರನಿಗೆ ಆಶ್ಚರ್ಯವಾಯಿತು.
ಆ ಸನ್ಯಾಸಿಯನ್ನು ಮಾತನಾಡಿಸಿದ ಅಲೆಕ್ಸಾಂಡರ್ ಮಹಾರಾಜನು ಬಾಯಾರಿಕೆಯಿಂದ ಪ್ರಾಣ ಹೋಗುತ್ತಿದೆ ನೀರನ್ನು ಕೊಟ್ಟು ಉಪಕರಿಸಿ ಎಂದು ಹೇಳಿದನು. ತನ್ನ ಕಮಂಡಲಿನಿಂದ ಆತನಿಗೆ ನೀರುಣಿಸಿದ ಸನ್ಯಾಸಿಗೆ ಕೃತಜ್ಞತೆ ಹೇಳಿದ ಅಲೆಕ್ಸಾಂಡರ್ ಆತನೊಂದಿಗೆ ವಾರ್ತಾಲಾಪದಲ್ಲಿ ತೊಡಗಿದನು. ತನ್ನೊಂದಿಗೆ ಗ್ರೀಸ್ ಸಾಮ್ರಾಜ್ಯಕ್ಕೆ ಬಂದರೆ ತನ್ನ ಅರ್ಧ ರಾಜ್ಯವನ್ನು ಕೊಡುವುದಾಗಿ ಹೇಳಿದನು. ಆಗ ಸಂತನ ಮುಖದಲ್ಲಿ ಹೊಮ್ಮಿದ ನಗೆಯನ್ನು ಕಂಡು ಬಹುಶಹ ಆತನಿಗೆ ಅರ್ಧ ಸಾಮ್ರಾಜ್ಯದಲ್ಲಿ ಆಸಕ್ತಿ ಇಲ್ಲ ಎಂದು ಭಾವಿಸಿ, ನನ್ನ ಇಡೀ ಸಾಮ್ರಾಜ್ಯವನ್ನು ನಿನಗೆ ಬಿಟ್ಟು ಕೊಡುವೆ ನನ್ನೊಂದಿಗೆ ಬಾ ಎಂದು ಹೇಳಿದನು.
ನಿನ್ನ ಒಂದಿಡಿ ಸಾಮ್ರಾಜ್ಯದ ಕಿಮ್ಮತ್ತು ಕೇವಲ ಒಂದು ಲೋಟ ನೀರು. ನನ್ನ ಬಳಿ ಇಡೀ ನದಿಯೇ ಹರಿಯುತ್ತಿದೆ. ನಾನಿಲ್ಲಿ ನೆಮ್ಮದಿಯಾಗಿದ್ದೇನೆ…. ಹೋಗಿ ಬಾ ಮಹಾರಾಜ ಎಂದು ಹೇಳಿದ.
ಮುಂದೆ ಅಲೆಕ್ಸಾಂಡರ್ ತನ್ನ ದೇಶವನ್ನು ತಲುಪುವ ಮುನ್ನವೇ ಅಸ್ವಸ್ಥತೆಗೆ ಈಡಾಗಿ ಉಸಿರು ಚೆಲ್ಲುವ ಮುನ್ನ ನನ್ನ ಪಾರ್ಥಿವ ಶರೀರವನ್ನು ಗ್ರೀಸ್ ದೇಶಕ್ಕೆ ಕೊಂಡೊಯ್ಯುವ ಮುನ್ನ ಶವದ ಎರಡು ಕೈಗಳನ್ನು ಜನರ ಕಣ್ಣಿಗೆ ಕಾಣುವಂತೆ ಅಂಗೈಯನ್ನು ಮೇಲೆ ಮುಖ ಮಾಡಿ ಖಾಲಿ ಕೈ ಕಾಣುವಂತೆ ಇಡಬೇಕು…ಇಡೀ ಜಗತ್ತನ್ನು ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ಹೊರಟ ಅಲೆಕ್ಸಾಂಡರ್ ಕೂಡ ಈ ಪ್ರಾಪಂಚಿಕ ಜಗತ್ತಿನಿಂದ ಏನನ್ನು ಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂಬುದು ಜಗತ್ತಿಗೆ ಅರಿವಾಗಲಿ ಎಂದು ಹೇಳಿದ.
ನೋಡಿದಿರಾ ಸ್ನೇಹಿತರೆ! ಆಧ್ಯಾತ್ಮದ ಆತ್ಮವನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ಇಂದಿಗೂ ಕೂಡ ಜಗತ್ತಿನ ಎಲ್ಲ ಒಳ್ಳೆಯ ವಿಚಾರಗಳಿಗೆ ಸ್ವಾಗತವಿದೆ.ಹಂಚಿ ತಿನ್ನುವ ದಾಸೋಹ ಪದ್ಧತಿ ನಮ್ಮದು. ತನಗಿಂತ ಕಡಿಮೆ ಅವಕಾಶವುಳ್ಳವರಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡುವ ಮುಯ್ಯಿ ಪದ್ಧತಿ ನಮ್ಮದು. ಇದನ್ನು ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹೇಳಿದರೂ ಉದ್ದೇಶ ಮಾತ್ರ ಸ್ಪಷ್ಟ ನಿನ್ನ ಮನೆಯ ಮಂಗಳ ಸಮಾರಂಭಕ್ಕೆ ನನ್ನ ಕಾಣಿಕೆ….. ಇದು ನಿನ್ನ ಹೊರೆಯನ್ನು ಇಳಿಸಿದರೆ ಸಾಕು ಎಂಬ ಪ್ರೀತಿಯ ಭಾವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದೆ. ಸಹಬಾಳ್ವೆ ಸಾಮರಸ್ಯ ಸಾಮಾಜಿಕ ಒಡನಾಟಗಳಲ್ಲಿ ಮನುಷ್ಯ ಧೈರ್ಯ, ಮಾನಸಿಕ ಬೆಂಬಲಗಳನ್ನು ಪಡೆಯುತ್ತಾನೆ. ಬೇರೆಯವರಿಗೆ ಕೊಡುವ ಮೂಲಕ ತಾನು ಸಂತೃಪ್ತಿಯನ್ನು ಅನುಭವಿಸುತ್ತಾನೆ.
ಒಂದೇ ಮಾತಿನಲ್ಲಿ ಹೇಳುವುದಾದರೆ ಜೀವನ ಎನ್ನುವುದು ಹೆಚ್ಚು ಸಂಗ್ರಹಿಸುವುದರಲ್ಲಿಲ್ಲ… ಜೀವನ ಎನ್ನುವುದು ಹೆಚ್ಚು ಅರಿತುಕೊಳ್ಳುವುದರಲ್ಲಿ ಇದೆ.
ಈ ಸತ್ಯವನ್ನು ಅರಿತು ಸಂತೃಪ್ತಿಯನ್ನು ನಮ್ಮ ಬದುಕಿಗೆ
ತಂದುಕೊಳ್ಳೋಣ…. ಏನಂತೀರಾ ಸ್ನೇಹಿತರೇ?
ವೀಣಾ ಹೇಮಂತ ಗೌಡ ಪಾಟೀಲ್, ಮುಂಡರಗಿ, ಗದಗ್