ಬಳ್ಳಾರಿ,ಜ.19
ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು, ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ಮಹಾಯೋಗಿ ವೇಮನ ಅವರ ಬದುಕು, ಬರಹ ಸ್ಫೂರ್ತಿದಾಯಕ. ಅವರ ವಚನಗಳ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ಡಿ ಸಮುದಾಯದವರು ಆರ್ಥಿಕವಾಗಿ ಸಬಲರು. ಸಂಕಷ್ಟ ದಲ್ಲಿರುವ ಜನರಿಗೆ ತಕ್ಷಣ ಆರ್ಥಿಕವಾಗಿ ನೆರವಾಗುವ ಸಹಾಯ ಮನೋಭಾವನೆ ಮತ್ತು ನಾಯಕತ್ವದ ಗುಣ ರೆಡ್ಡಿ ಸಮುದಾಯವರು ಹೊಂದಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೆ ಇತರೆ ಸಮಾಜಗಳಂತೆ ರೆಡ್ಡಿ ಸಮುದಾಯದವರ ಸಹಕಾರವೂ ಇದೆ ಎಂದರು.
ನಗರದ ತಾಳೂರು ರಸ್ತೆಗೆ ಮಹಾಯೋಗಿ ವೇಮನರ ಹೆಸರು ನಾಮಕರಣ ಮಾಡುವ ಕುರಿತು ಈಗಾಗಲೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಆದಷ್ಟು ಶೀಘ್ರವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಬಳ್ಳಾರಿಯಲ್ಲಿ ರೆಡ್ಡಿ ಸಮುದಾಯದ ಹೆಣ್ಣುಮಕ್ಕಳಿಗೆ ವಸತಿ ನಿಲಯ ನಿರ್ಮಿಸಲು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ನಗರದಲ್ಲಿ ರೆಡ್ಡಿ ಭವನದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಮಾತನಾಡಿ, 15 ನೇ ಶತಮಾನದ ವಚನಕಾರರಾದ ಮಹಾಯೋಗಿ ವೇಮನ ವಚನಗಳು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿವೆ ಹಾಗೂ ಅವರ ತತ್ವಗಳನ್ನು ನಾವೆಲ್ಲರ ಪಾಲಿಸೋಣ ಎಂದರು.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಅಲ್ಲಂ ಭಾಷ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜನಸಾಮಾನ್ಯ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧ ಶ್ರದ್ಧೆ, ಮೇಲು-ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು ಮತ್ತು ಅಪೂರ್ವ ಸಮಾಜ ಸುಧಾರಕರು ಎಂದು ತಿಳಿಸಿದರು.
ಆಂಧ್ರಪ್ರದೇಶದ ಗುಂಟೂರ ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಕ್ರಿ.ಶ. 1412ರಲ್ಲಿ ತಂದೆ ಕುಮಾರ ಗಿರಿರೆಡ್ಡಿ ಹಾಗೂ ತಾಯಿ ರಾಣಿ ಮಲ್ಲಮಾಂಬೆ ಇವರ ಮಗನಾಗಿ ಜನಿಸಿದವರು. ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿಕೊಂಡಿದ್ದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಎನ್.ಬಸವರಾಜು ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ವೇಮನ ಪದ್ಯಗಳನ್ನು ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ರೆಡ್ಡಿ ಜನಸಂಘ ಜಿಲ್ಲಾ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ, ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
*ಸಂಭ್ರಮದ ಮೆರವಣಿಗೆ:*
ಮಹಾಯೋಗಿ ವೇಮನ ಜಯಂತಿಯ ಅಂಗವಾಗಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ರೆಡ್ಡಿ ಜನ ಸಂಘ ಭವನದ ಆವರಣದಿಂದ ಆಯೋಜಿಸಿದ್ದ ಮೆರವಣಿಗೆಯು ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ ವಾದ್ಯ ಸೇರಿದಂತೆ ಇತರೆ ಸಾಂಸ್ಕçತಿಕ ಕಲಾತಂಡಗಳಿಂದ ಅದ್ದೂರಿ ಮೆರವಣಿಗೆ ನಡೆಯಿತು.
ಮೆರವಣಿಗೆಯು ರೆಡ್ಡಿ ಜನ ಸಂಘ ಭವನದ ಆವರಣದಿಂದ ಆರಂಭವಾಗಿ ಇಂದಿರಾ ವೃತ್ತದಿಂದ, ಗಡಗಿ ಚೆನ್ನಪ್ಪ ವೃತ, ಬೆಂಗಳೂರು ರಸ್ತೆ, ತೇರು ಬೀದಿ, ಜೈನ್ ಮಾರ್ಕೆಟ್, ಹೆಚ್.ಆರ್.ಗವಿಯಪ್ಪ ವೃತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿ ಸಂಪನ್ನಗೊಂಡಿತು.
——–