Ad image

ಭದ್ರಾ ಮೇಲ್ದಂಡೆ ಯೋಜನೆ : ಕೇಂದ್ರ ಸರ್ಕಾರ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳಲಿ ರೂ.5300 ಕೋಟಿ ಅನುದಾನ ಬಿಡುಗಡೆಗೆ ಸಚಿವ ಡಿ.ಸುಧಾಕಾರ್ ಒತ್ತಾಯ

Vijayanagara Vani
ಭದ್ರಾ ಮೇಲ್ದಂಡೆ ಯೋಜನೆ : ಕೇಂದ್ರ ಸರ್ಕಾರ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳಲಿ ರೂ.5300 ಕೋಟಿ ಅನುದಾನ ಬಿಡುಗಡೆಗೆ ಸಚಿವ ಡಿ.ಸುಧಾಕಾರ್ ಒತ್ತಾಯ
ಚಿತ್ರದುರ್ಗಜುಲೈ.30:
ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ಈ ಭಾಗದ ರೈತರ ಜೀವನಾಡಿಯಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರಾಷ್ಟಿಯ ಮಹತ್ವದ ಯೋಜನೆಯನ್ನಾಗಿ ಘೋಷಿಸಿ ರೂ.5300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಕೊಟ್ಟ ಆಶ್ವಾಸನೆಯನ್ನು ಉಳಿಸಿಕೊಂಡು ಶೀಘ್ರ ರೂ.5300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಒತ್ತಾಯಿಸಿದರು.
ನಗರದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿ ಸಭಾಂಗಣದಲ್ಲಿ ಮಂಗಳವಾರದAದು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಇತ್ತೀಚಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಗರಕ್ಕೆ ಭೇಟಿ ನೀಡಿದಾಗ, ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೇಳಿದ ತಾಂತ್ರಿಕ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಉತ್ತರ ನೀಡಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಆದರೆ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಅವರು ಕಳೆದ ಜೂನ್ 29 ರಂದು ನವದೆಹಲಿಯ ಜಲಶಕ್ತಿ ಮಂತ್ರಾಲಯದ ರಾಜ್ಯ ಯೋಜನೆಗಳ ಆಯುಕ್ತರೊಂದಿಗೆ ಚರ್ಚಿಸಿದಾಗ, ಯೋಜನೆಯಲ್ಲಿ ಯಾವುದೇ ಸಮಸ್ಯೆ ಹಾಗೂ ತಾಂತ್ರಿಕ ಅಸಮರ್ಪಕತೆ ಇಲ್ಲ ಎಂಬುದು ತಿಳಿದು ಬಂದಿದೆ. ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ಯಾವುದೇ ಆಕ್ಷೇಪಣೆ ಅಥವಾ ತಾಂತ್ರಿಕ ಅಸಮರ್ಪಕತೆಗಳ ಕುರಿತು ರಾಜ್ಯ ಸರ್ಕಾರಕ್ಕೂ ಯಾವುದೇ ಪತ್ರ ಸ್ವೀಕೃತವಾಗಿಲ್ಲ, ಆದಾಗ್ಯೂ 5300 ಕೋಟಿ ರೂ. ನಲ್ಲಿ ಯಾವುದೇ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಸಚಿವ ಡಿ.ಸುಧಾಕರ್ ಸ್ಪಷ್ಟ ಪಡಿಸಿದರು.
ರಾಷ್ಟಿಯ ಯೋಜನೆಯನ್ನಾಗಿ ಘೋಷಿಸುವ ಎಲ್ಲಾ ಮಾನದಂಡಗಳನ್ನು ಭದ್ರಾ ಮೇಲ್ದಂಡೆ ಯೋಜನೆ ಪೂರೈಸಿರುವುದರಿಂದಲೇ ಜಲಶಕ್ತಿ ಮಂತ್ರಾಲಯದ 14ನೇ ಉನ್ನತ ಸಮಿತಿ ರಾಷ್ಟಿಯ ಯೋಜನೆಯಾಗಿ ಪರಿಗಣಿಸಲು ಶಿಘಾರಸ್ಸು ನೀಡಿತ್ತು. ಇದರ ಆಧಾರದ ಮೇಲೆಯೇ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೂ.5300 ಕೋಟಿ ಹಣಕಾಸಿನ ನೆರವು ಘೋಷಿಸಲಾಗಿತ್ತು. ಆದರೆ ಇದುವರೆಗೂ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಧನ ಸಹಾಯ ಬಿಡುಗಡೆಗೊಳ್ಳದೇ ಇರುವುದರಿಂದ ಯೋಜನೆ ಪ್ರಗತಿ ಕುಂಠಿತವಾಗಿದೆ. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ, ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಅನುದಾನದ ಲಭಿಸದಿರುವುದು ಬರ ಪೀಡಿತ ಜಿಲ್ಲೆಗೆ ದುರದೃಷ್ಟಕರ ಎನಿಸಿದೆ. ಕೇಂದ್ರ ಸರ್ಕಾರದ ಸಚಿವ ಸಂಪುಟದ ಮುಂದೆ ವಿಷಯ ಬಂದರೂ ಯಾವುದೇ ತೀರ್ಮಾನ ತೆಗದುಕೊಂಡಿಲ್ಲ ಎಂದು ಸಚಿವ ಡಿ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಈ ಹಿಂದಿನ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ರಾಷ್ಟಿçÃಯ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು. ಈ ಹಿಂದೆ ಚಿತ್ರದುರ್ಗ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಎ. ನಾರಾಯಣಸ್ವಾಮಿ ಅವರು ಕೂಡ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ರಾಷ್ಟಿಯ ಯೋಜನೆಯಡಿ ಅನುದಾನ ಬಿಡುಗಡೆ ಕಷ್ಟವಾದರೆ, ಬದಲಿ ಯೋಜನೆಯಡಿ ಅನುದಾನ ನೀಡುವಂತೆ ಕೋರಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಸಹ ಪ್ರಕಟವಾಗಿದ್ದವು. ಆದರೂ ಕೇಂದ್ರದಿAದ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಭದ್ರಾ ಭರ್ತಿ: ವಿವಿ ಸಾಗರಕ್ಕೆ ಪ್ರತಿ ದಿನ 700 ಕ್ಯೂಸೆಕ್ಸ್ ನೀರು:
ಭದ್ರಾ ಜಲಾಶಯ ಭರ್ತಿಯಾಗಿದ್ದು, ಜುಲೈ 31 ರಿಂದಲೇ ವಿ.ವಿ. ಸಾಗರಕ್ಕೆ (ವಾಣಿ ವಿಲಾಸ ಸಾಗರ) ಪ್ರತಿ ದಿನ 700 ಕ್ಯೂಸೆಕ್ ನಂತೆ ನೀರು ಹರಿಸುವುದಾಗಿ ಸಚಿವ ಡಿ.ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಒಟ್ಟು 12.5 ಟಿ.ಎಂ.ಸಿ ನೀರು ಹಂಚಿಕೆ ಮಾಡಲಾಗಿದೆ. ಭದ್ರಾ ಮೇಲ್ದಂಡೆಯ ಎಲ್ಲಾ ಯೋಜನೆಗಳು ಪೂರ್ಣಗೊಳ್ಳದೇ ಇರುವುದರಿಂದ ಈ 12.5 ಟಿ.ಎಂ.ಸಿ ನೀರನ್ನು ವಿ.ವಿ. ಸಾಗರದಲ್ಲಿ ಸಂಗ್ರಹಿಸಲು ಕೋರಲಾಗಿದೆ. ಪ್ರತಿ ದಿನ 700 ಕ್ಯೂಸೆಕ್ ನೀರನ್ನು 03 ತಿಂಗಳ ಕಾಲ ಜಲಾಶಯಕ್ಕೆ ಹರಿಸಲಾಗುವುದು ಎಂದರು.
ಕೇ0ದ್ರ ಹಣಕಾಸು ಸಚಿವರ ಭೇಟಿ :
ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಜುಲೈ 31 ರಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಲಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ಮಂಜೂರು ಮಾಡುವಂತೆ ಈ ಸಂದರ್ಭದಲ್ಲಿ ಕೋರಿಕೆ ಸಲ್ಲಿಸಲಿದ್ದಾರೆ. ಇದರಲ್ಲಿ ಭದ್ರಾ ಮೇಲ್ದಂಡೆಯ ರೂ.5300 ಕೋಟಿ ಅನುದಾನದ ಬಗ್ಗೆಯೂ ಪ್ರಸ್ತಾಪಿಸಲಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಅವರು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯ ವಿವಿಧ ಕಾಮಗಾರಿಗಳ ರೂ.2300 ಕೋಟಿ ಬಿಲ್ ಪಾವತಿಯಿದೆ. ಇದನ್ನು ಹಂತ ಹಂತವಾಗಿ ಪಾವತಿ ಮಾಡಲಾಗುವುದು. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ರೂ.1500 ಕೋಟಿ ಅನುದಾನವನ್ನು ಮೀಸಲಿರಿಸಿದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಪೂರಕ ಬಜೆಟ್‌ನಲ್ಲಿ ಹಂಚಿಕೆ ಮಾಡಲಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ಅಧೀಕ್ಷಕ ಅಭಿಯಂತರ ಮಧುಕುಮಾರ್, ಕಾರ್ಯಪಾಲಕ ಅಭಿಯಂತರರಾದ ಚಂದ್ರಪ್ಪ ಬಾರಿಕೇರ ಹಾಗೂ ಹರೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
error: Content is protected !!
";