ಬೆಂಗಳೂರು ಗ್ರಾಮಾಂತರ ಜಿಲ್ಲೆ, ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಪ್ರಕೃತಿಯ ಸಮತೋಲನ ಕಾಪಾಡಲು ಗಿಡ-ಮರಗಳನ್ನು ಬೆಳೆಸಲು ನಾವೆಲ್ಲರು ಅಣಿಯಾದಾಗ ಮಾತ್ರ ಸರಿಯಾದ ಸಮಯಕ್ಕೆ ಮಳೆ, ಬೆಳೆ, ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾದ ‘ವನ ಮಹೋತ್ಸವ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ತಮ್ಮ ಜಮೀನುಗಳಲ್ಲಿ ಮೂರನೇ ಒಂದು ಭಾಗ ಮಾವು, ತೆಂಗು, ಹಲಸು, ನೇರಳೆ ಮುಂತಾದ ಆದಾಯದ ಗಿಡ-ಮರಗಳನ್ನು ಬೆಳೆಸಿದರೆ ಆದಾಯದ ಜೊತೆಗೆ ಪರಿಸರ ಸಮತೋಲನ ನಿರ್ಮಾಣವಾಗುತ್ತದೆ. ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವುದರಿಂದ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುವುದನ್ನು ತಪ್ಪಿಸಬಹುದು. ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಸ್ತೆಗಳ ಎರಡು ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಗಳ ಸುತ್ತಮುತ್ತ ಗಿಡ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ವಾತಾವರಣದ ಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್ ಅವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು 2,298 ಕಿ.ಮೀ ವ್ಯಾಪ್ತಿ ಹೊಂದಿದ್ದು 22,800 ಹೆಕ್ಟೇರ್ ಭೂ ವಿಸ್ತೀರ್ಣ ಹೊಂದಿದೆ. 203.89 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಒಟ್ಟು ಭೂ ಪ್ರದೇಶದಲ್ಲಿ ಶೇಕಡ 8.8 ರಷ್ಟು ಅರಣ್ಯ ಭೂಮಿ ಆವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ ಅರಣ್ಯೀಕರಣ, ವನ್ಯಜೀವಿ ಸಂರಕ್ಷಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿದೆ.
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ 2400 ಹೆಕ್ಟೇರ್ ನೆಡುತೋಪು ಮಾಡಲಾಗಿದೆ. 383 ರೈತ ಫಲಾನುಭವಿಗಳಿಗೆ 16 ಲಕ್ಷ ಸಸಿಗಳನ್ನು ವಿತರಿಸಲಾಗಿದ್ದು ಗಿಡಗಳನ್ನು ಬೆಳೆಸಿ ಪೋಷಿಸಲು ಇದುವರೆಗೆ 74 ಲಕ್ಷ ರೂ.ಗಳ ಹಣ ರೈತ ಫಲಾನುಭವಿಗಳಿಗೆ ನೀಡಲಾಗಿದೆ.
ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ 3065 ಫಲಾನುಭವಿಗಳಿಗೆ ಸಸಿ ವಿತರಿಸಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. 2024 ನೇ ಸಾಲಿನಲ್ಲಿ 251 ಲಕ್ಷ ರೂ.ಗಳ ಯೋಜನಾ ವೆಚ್ಚ ರೂಪಿಸಲಾಗಿದ್ದು 165 ಕಿಲೋ ಮೀಟರ್ ನೆಡುತೋಪು ನಿರ್ಮಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ಸಚಿವರು ಪ್ರಶಂಸೆ ಪತ್ರ ವಿತರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜಣ್ಣ, ಕುಂದಾಣ ಗ್ರಾ.ಪಂ ಅಧ್ಯಕ್ಷರಾದ ನೇತ್ರಾವತಿ ಎ.ಆರ್, ಉಪಾಧ್ಯಕ್ಷರಾದ ನೀಲಮ್ಮ, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧಾ, ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್. ಪಿ.ಎನ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಬಾಲಕೃಷ್ಣ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು