ಕಾರವಾರ ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರ ಕುಟುಂಬಗಳ 59 ಜನರಿಗೆ ರೂ. 25000 ದಂತೆ 14,75,000 ಮೊತ್ತದ ಚೆಕ್ನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶನಿವಾರ ವಿತರಿಸಿದರು.
ಗುಡ್ಡಕುಸಿತದಿಂದ ಹಾನಿಯಾದ ಉಳುವರೆ ಗ್ರಾಮದ ಮೀನುಗಾರರಿಗೆ ಸರ್ಕಾರದ ವತಿಯಿಂದ ಎಲ್ಲಾ ಅಗತ್ಯ ನೆರವು ಒದಗಿಸಲು ಬದ್ದವಾಗಿದ್ದು, ಈಗಾಗಲೇ ಇಲ್ಲಿನ ಜನರಿಗೆ ಅಗತ್ಯ ನಿವೇಶನ ನೀಡಲು ಸ್ಥಳ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಪ್ರಸ್ತುತ ತುರ್ತು ಕ್ರಮವಾಗಿ ಮೀನು ಬಲೆ, ದೋಣಿ ದುರಸ್ತಿ ಮತ್ತಿತರ ಕಾರ್ಯಗಳಿಗಾಗಿ ರೂ.25000 ದ ಪರಿಹಾರ ವಿತರಿಸಲಾಗಿದ್ದು, ಈ ಅವಘಡದಲ್ಲಿ ಮನೆ ಕಳೆದುಕೊಂಡವರಿಗೆ 1.20 ಲಕ್ಷ ಮತ್ತು ಮೃತಪಟ್ಟ ಕುಟುಂಬದ ವಾರಿಸುದಾರರಿಗೆ 5 ಲಕ್ಷ ರೂ. ಗಳ ಚಕ್ ವಿತರಿಸಲಾಗಿದ್ದು, ಮೀನುಗಾರಿಕಾ ಇಲಾಖೆ ವತಿಯಿಂದ ಇನ್ನೂ ಹೆಚ್ಚಿನ ಪರಿಹಾರ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಈ ಭಾಗದ ಸಂತ್ರಸ್ತರಿಗೆ ಶಾಸಕರು ಮತ್ತು ತಾವು ರೂ.10000 ಗಳ ವೈಯಕ್ತಿಕ ನೆರವು ಸಹ ಒದಗಿಸಲಾಗಿದ್ದು, ಇಲ್ಲಿನ ಜನತೆಯ ಸಂಕಷ್ಟಕ್ಕೆ ಪಕ್ಷ ಬೇಧ ಮರೆತು ಸದಾ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇರ್ಶಕ ಬಬಿನ್ ಬೋಪಣ್ಣ, ಉಪ ನಿರ್ದೇಶಕ ಪ್ರತೀಕ್, ಅಂಕೋಲಾ ತಹಶೀಲ್ದಾರ್ ಅನಂತ ಶಂಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.