ಶಿವಮೊಗ್ಗ ಜುಲೈ.11 ವಿಶ್ವದಲ್ಲಿ ಭಾರತ ಜನಸಂಖ್ಯೆಯಲ್ಲಿ ನಂ 1 ರಾಷ್ಟ್ರವಾಗಿದ್ದು, ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡರೆ ಅಭಿವೃದ್ಧಿ ಸಾಧ್ಯ ಎಂದು ಶಿವಮೊಗ್ಗ ವಿಧಾನ ಸಭಾ ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಶಿವಮೊಗ್ಗ, ಆರ್ಚಾಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ, ಎಫ್ಪಿಎಐ, ಐಕ್ಯೂಎಸಿ ವಿಭಾಗ, ಎನ್ ಎಸ್ ಎಸ್ ಮತ್ತು ರೆಡ್ಕ್ರಾಸ್ ವಿಭಾಗ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಎಟಿಎನ್ಸಿಸಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಹೆಣ್ಣಿರಲಿ ಗಂಡಿರಲಿ 2 ಮಕ್ಕಳು ಸಾಕು ಎಂಬ ರಸ್ತೆ ಬದಿಯಲ್ಲಿ ಹಾಕಿದ ಫಲಕಗಳ ನೆನಪು ಮಾಡಿಕೊಂಡರು. ರಾಷ್ಟ್ರವು ಕೌಟುಂಬಿಕ ಜೀವನದಿಂದ ಹೊರಬರುತ್ತಿದ್ದು, ಅದನ್ನು ತಡೆಯಬೇಕು. ನಮ್ಮ ಸಂಪ್ರದಾಯದ ಜೊತೆ ಅಣ್ಣ- ತಮ್ಮ ಅಕ್ಕ- ತಂಗಿ ಎಂಬ ಭಾಂದವ್ಯ ಮರೆಯಾಗದಂತೆ ನೋಡಿಕೊಳಬೇಕು ಎಂದರು. ಕುಟುಂಬಗಳಲ್ಲಿ ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಕೌಟುಂಬಿಕ ವ್ಯವಸ್ಥೆಯಲ್ಲಿ ಜನ್ಮ ನೀಡಿದರೆ ಜನ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯ ಎಂದರು.
ಡಿಹೆಚ್ಓ ಡಾ. ನಟರಾಜ್ ಮಾತನಾಡಿ ದೇಶದಲ್ಲಿ ಜನಸಂಖ್ಯೆಯು ಹೆಚ್ಚಾದರೆ ಬಡತನ, ಶಿಕ್ಷಣ, ನಿರುದ್ಯೋಗ ಇತರ ಸಮಸ್ಯೆಗಳು ಉಂಟಾಗುತ್ತದೆ. ಜನಸಂಖ್ಯೆಯು ಕಡಿಮೆಯಾದರೆ ಮಾನವ ಸಂಪನ್ಮೂಲ ಕೊರತೆಯನ್ನು ಎದುರಿಸಬೇಕಾಗುತ್ತದೆ. ಅದ್ದರಿಂದ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಿಕೊಂಡರೆ ಸಮಸ್ಯೆಯನ್ನು ಬಗೆಹರಿಸಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಎ.ಟಿ.ಎನ್.ಸಿ.ಸಿ ಕಾಲೇಜು ಪ್ರಾಂಶುಪಾಲರರಾದ ಪ್ರೊ.ಮಮತ ಪಿ.ಆರ್. ಮಾತನಾಡಿ ವಿದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಹಲವು ಮಾರ್ಗಗಳನ್ನು ಅನುಸರಿಸುತ್ತಿರುವುದರ ಬಗ್ಗೆ ತಿಳಿಸಿದರು. ಚೀನಾ, ಜಪಾನ್ ದೇಶಗಳು ತಂದಿರುವ ನಿಯಮಗಳ ಪರಿಣಾಮವನ್ನು ತಿಳಿಸಿದರು. ನಮ್ಮ ದೇಶದ ಸಂಪನ್ಮೂಲವೇ ದೇಶದ ಜನ ಸಂಖ್ಯೆ. ಅದನ್ನು ಸಮತೋಲನದಲ್ಲಿ ಕಾಪಾಡಬೇಕು ಹಾಗೂ ಯುವಜನತೆ ಇದರ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳು ಸ.ಪ್ರ.ದ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ರೇಷ್ಮಾ ಮಾತನಾಡಿ 1871 ರಲ್ಲಿ ಬ್ರಿಟಿಷರು ಭಾರತಕ್ಕೆ ಜನಸಂಖ್ಯಾ ಎಣಿಕೆಯ ಕಲ್ಪನೆಯನ್ನು ತಂದರು. ನಂತರ 1984 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚ ಗಣತಿಯನ್ನು ಮಾಡಿ 5 ಬಿಲಿಯನ್ ಜನಸಂಖ್ಯೆ ಹೊಂದಿದೆ ಎಂದು ವರದಿ ನೀಡಿತ್ತು. ಅಲ್ಲಿಂದ ಈ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ 8.1 ಬಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ದೇಶದಲ್ಲಿ ಜನಸಂಖ್ಯೆಯು ಹೆಚ್ಚಾದರೆ ಸಂಪನ್ಮೂಲಗಳ ಕೊರತೆಯು ಉಂಟಾಗುತ್ತದೆ. ಅದ್ದರಿಂದ ದೇಶದ ಅಭಿವೃದ್ದಿ ಕುಂಟಿತವಾಗುತ್ತದೆ. ಇದನ್ನು ತಡೆಯಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಲೈಗಿಂಕ ಶಿಕ್ಷಣದ ಕೊರತೆ ಇರುವುದು ಜನ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ. ಸರಿಯಾದ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡರೆ ಜನಸಂಖ್ಯೆಯನ್ನು ನಿಯಂತ್ರಿಸ ಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಸಿ., ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ಜಿಲ್ಲಾ ಆರ್. ಸಿ. ಹೆಚ್. ಅಧಿಕಾರಿ ಡಾ.ನಾಗರಾಜ್ ನಾಯ್ಕ್, ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರೊ.ನಾಗರಾಜ, ಚೇರ್ ಪರ್ಸನ್ ಎಫ್ಪಿಎಐ ಡಾ.ಸಾತ್ವಿಕ್ ಆರ್ ಪಿ, ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.