ಚಿತ್ರದುರ್ಗ ಜುಲೈ14:
ನಗರದ ರೈಲ್ವೇ ನಿಲ್ದಾಣದ ಹತ್ತಿರದ ಚಿತ್ರದುರ್ಗ-ದಾವಣಗೆರೆ ರಸ್ತೆಯಲ್ಲಿ ದ್ವೀಪಥ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ರೈಲ್ವೇ ಇಂಜಿನಿಯರಿಂಗ್ ವಿಭಾಗದಿಂದ ಶೀಘ್ರವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವುದಾಗಿ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈಲ್ವೇ ಮೇಲ್ಸೇತುವೆ ಹಾಗೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ನಡೆಸಿ ಅವರು ಮಾತನಾಡಿದರು.
ಚಿತ್ರದುರ್ಗ ನಗರದಿಂದ ದಾವಣಗೆರೆ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ರೈಲ್ವೆ ನಿಲ್ದಾಣದ ಬಳಿ ರೈಲ್ವೇ ಗೇಟ್ ನಂ.15 ರಲ್ಲಿ ರೈಲುಗಳ ಓಡಾಟದ ಸಮಯದಲ್ಲಿ ದಿನಕ್ಕೆ 30 ಬಾರಿ ರೈಲ್ವೇ ಗೇಟ್ ಹಾಕಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ, ಆಂಬುಲೆನ್ಸ್ ವಾಹನಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ದ್ವೀಪಥ ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸೂಚಿಸಿದ್ದೇನೆ. ನಾಲ್ಕು ಪಥದ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂಸ್ವಾಧೀನ ನಡೆಸಬೇಕಾಗುತ್ತದೆ. ಇದರ ಜೊತೆಗೆ ನಿರ್ಮಾಣದ ವೆಚ್ಚವನ್ನು ಸಹ ಭರಿಸಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗಲಿದೆ. ಹೀಗಾಗಿ ಇದರ ಬದಲಿಗೆ, ದ್ವೀಪಥ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಭಾರತ ಸರ್ಕಾರವೇ ಶೇ.100 ರಷ್ಟು ಕಾಮಗಾರಿ ವೆಚ್ಚವನ್ನು ಭರಿಸಲಿದೆ. ಈ ಹಿನ್ನಲೆಯಲ್ಲಿ ನಾಲ್ಕುಪಥ ಮೇಲ್ಸೇತುವೆ ನಿರ್ಮಾಣ ಪ್ರಸ್ತಾವನೆಯನ್ನು ಸದ್ಯಕ್ಕೆ ರದ್ದು ಪಡಿಸಿ, ದ್ವೀಪಥ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ರೈಲ್ವೇ ಮುಖ್ಯ ಇಂಜನಿಯರ್, ಜಿಲ್ಲಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಇದರಿಂದಾಗಿ ಭೂಸ್ವಾಧೀನ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ. ಇದೇ ಮಾದರಿಯಲ್ಲಿ ಜಿಲ್ಲೆಯ ಇತರೆ ಭಾಗದ ಎರಡು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ. ತಾಂತ್ರಿಕ ಅನುಮೋದನೆಗಳನ್ನು ಪೂರ್ಣಗೊಳಿಸಿ ನಿರ್ಮಾಣ ಕಾಮಗಾರಿಯ ಟೆಂಡರ್ ಕರೆಯಲಾಗುವುದು. ಒಂದು ವರ್ಷದಲ್ಲಿಯೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ. ಇದಕ್ಕೆ ಅಗತ್ಯ ಇರುವ ಭೂಮಿಯನ್ನು ರಾಜ್ಯ ಸರ್ಕಾರ ಈಗಾಗಲೇ ನೀಡಿದೆ. ಚಿಕ್ಕಪುರ ಗ್ರಾಮದ ಸರ್ವೇ ನಂ 101 ರಲ್ಲಿ 9 ಎಕೆರೆ 30 ಗುಂಟೆ ಜಾಗ ಮಂಜೂರಾಗಿದೆ. ಪ್ರಸಕ್ತ ವರ್ಷದಿಂದಲೇ ತಾತ್ಕಾಲಿಕವಾಗಿ ಶಾಲೆಯನ್ನು ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ. ವಿದ್ಯಾಲಯ ಸ್ಥಾಪನೆ ಕುರಿತು ಕೇಂದ್ರೀಯ ವಿದ್ಯಾಲಯ ಸಮಿತಿ ವೀಕ್ಷಣಾ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಉಲ್ಲೇಖಿಸಿದ ಆಕ್ಷೇಪಣೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಜುಲೈ 18 ರಂದು ಮತ್ತೊಮ್ಮೆ ಸಮಿತಿ ಆಗಮಿಸಿ ವೀಕ್ಷಣೆ ನಡೆಸಲಿದೆ. ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಶಾಲೆ ಆರಂಭಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಹಾಗೂ ನಿರ್ಮಿತಿ ಕೇಂದ್ರದಿಂದ ಮಾಡಿಕೊಡಲಾಗುವುದು. ಜಿಲ್ಲೆಗೆ ಮಂಜೂರಾಗಿರುವ ಕೇಂದ್ರೀಯ ವಿದ್ಯಾಯಲ ಕೈ ತಪ್ಪಿ ಹೋಗಬಾರದು. ವಿದ್ಯಾಲಯ ಸ್ಥಾಪನೆಯಿಂದ ಜಿಲ್ಲೆಯ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿಯಡಿ ದೊರಕಲಿದೆ ಎಂದು ಗೋವಿಂದ ಎಂ ಕಾರಜೋಳ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್.ಬಿ, ಪೊಲೀಸ್ ಉಪಾಧೀಕ್ಷಕ ಪಿ.ಕೆ. ದಿನಕರ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪೌರಾಯುಕ್ತೆ ರೇಣುಕಾ.ಎಂ, ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕ ಮಂಜುನಾಥ.ಬಿ.ಎನ್. ಪಿ.ಯು. ಉಪನಿರ್ದೇಶಕ ತಿಪ್ಪಮ್ಮ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ರವಿಕಾಂತ.ಎಂ.ಎನ್ ಸಭೆಯಲ್ಲಿ ಭಾಗವಹಿಸಿದ್ದರು.