Ad image

ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಜನಸಂಖ್ಯೆ ಹೆಚ್ಚಳದಿಂದ ಪರಿಸರ ಮೇಲೆ ದುಷ್ಪರಿಣಾಮ

Vijayanagara Vani
ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಜನಸಂಖ್ಯೆ ಹೆಚ್ಚಳದಿಂದ ಪರಿಸರ ಮೇಲೆ ದುಷ್ಪರಿಣಾಮ
ಚಿತ್ರದುರ್ಗಜುಲೈ11:
ಜನಸಂಖ್ಯೆ ಹೆಚ್ಚಳದಿಂದಾಗಿ ಪರಿಸರ ಮೇಲೆ ಹೆಚ್ಚಿನ ದುಷ್ಪಾರಿಣಾಮ ಬೀರಿದೆ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1987 ಜುಲೈ 11 ರಿಂದ ಇಡೀ ಪ್ರಪಂಚದಾದ್ಯಂತ ವಿಶ್ವ ಜನಸಂಖ್ಯೆ ದಿನಾಚರಣೆ ಆಚರಿಸಲಾಗುತ್ತಿದೆ. ಇಡೀ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಜನಸಂಖ್ಯೆ ಸ್ಫೋಟದಿಂದ ಆಗುವ ಸಮಸ್ಯೆಗಳು ಬಹಳ ದೊಡ್ಡ ಪ್ರಮಾಣದಲ್ಲಿದೆ ಎಂದರು.
ಮನುಷ್ಯನ ಬೇಕು ಬೇಡಿಕೆಗಳನ್ನು ಈಡೇರಿಸಲುವ ಸಲುವಾಗಿ ನಾವು ಅರಣ್ಯವನ್ನು ನಾಶಪಡಿಸಲಾಗುತ್ತಿದೆ. ಕೆರೆ ಕಟ್ಟೆಗಳನ್ನು ಒತ್ತು ಮಾಡಲಾಗುತ್ತಿದೆ. ಭೂಮಿಯ ಮೇಲ್ಭಾಗದ ನೀರನ್ನು ಕಲುಷಿತಗೊಳಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಸಿಗದೇ ಇರುವುದರಿಂದ ಪ್ರಪಂಚದಲ್ಲಿ ರೋಗರುಜಿನಗಳ ಸಂಖ್ಯೆ ಏರಿಕೆಯಾಗುತ್ತಿದೆ. ರೋಗ ಹರಡಲು ಮೂಲ ಕಾರಣವೇ ನೀರು. ಕುಡಿಯಲು ಶುದ್ಧವಾದ ನೀರು ಕೊಡದೇ ಇರುವುದರಿಂದ, ಮನುಷ್ಯದ ದುರಾಸೆಯಿಂದ ಭೂಮಿಯ ಮೇಲ್ಭಾಗದ ನೀರನ್ನು ಕಲುಷಿತಗೊಳಿಸಿದ ಪರಿಣಾಮ, ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುವುದರಿಂದ ಜನರಿಗೆ ಶುದ್ಧವಾದ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಜಲಸಂಗ್ರಹಾರಗಳನ್ನು ಸ್ವಚ್ಛವಾಗಿ ಹಾಗೂ ಸುರಕ್ಷಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಅಂಕಿ ಅಂಶಗಳ ಮಾಹಿತಿ ಪ್ರಕಾರ ದೇಶದಲ್ಲಿ ಪ್ರತಿ ನಿಮಿಷಕ್ಕೆ 46 ಮಕ್ಕಳು ಜನಿಸುತ್ತಾರೆ. ಒಂದು ದಿನಕ್ಕೆ 67 ಸಾವಿರ ಮಕ್ಕಳು ಜನಿಸುತ್ತಾರೆ. ಜನಸಂಖ್ಯೆ ಸ್ಫೋಟದಿಂದಾಗಿ ಶಿಕ್ಷಣದ ಸಮಸ್ಯೆ, ಬಡತನ ಹೆಚ್ಚಳ, ವಸತಿ, ಸಾರಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಅವಶ್ಯಕ ಹಾಗೂ ಅಗತ್ಯವಾಗಿದೆ. ಜನಸಂಖ್ಯೆ ದಿನಾಚರಣೆ ಕೇವಲ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕೀಯ, ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾಥಾ ಕಾರ್ಯಕ್ರಮ ನಡೆಸಿ, ಅರಿವು ಮೂಡಿಸಬೇಕು ಎಂದು ಹೇಳಿದರು.
ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ: ಮಳೆ ನೀರು ಕೊಯ್ಲು ಪ್ರತಿಯೊಂದು ಮನೆಯಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಸಲಹೆ ನೀಡಿದರು.
ಇನ್ನೂ ಮುಂದೆ ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಮೊದಲು ಕಡ್ಡಾಯವಾಗಿ ಮಳೆ ನೀರು ಕೊಯ್ಲ ಅಳವಡಿಸಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಮನೆ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಮಳೆ ನೀರು ಸ್ವಚ್ಛ ಹಾಗೂ ಶುದ್ಧವಾಗಿದ್ದು, ಕುಡಿಯಲು ಬಹಳ ಯೋಗ್ಯವಾದ ನೀರು. ಭೂಮಿ ಮೇಲ್ಭಾಗದಲ್ಲಿ ನೀರು ಹಿಡಿದಿಡಲು ನಾವು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜನಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ಆದರೆ ಭೂಮಿ ಇದ್ದಷ್ಟೇ ಇದೆ. ಜನಸಂಖ್ಯಾ ಹೆಚ್ಚಳದಿಂದ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗುವುದಲ್ಲದೇ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಜನಸಂಖ್ಯೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಆದರೆ ನಿಯಂತ್ರಿಸಬಹುದು. ಈ ಹಿನ್ನಲೆಯಲ್ಲಿ ಸರ್ಕಾರವು ಕುಟುಂಬ ಕಲ್ಯಾಣ ಯೋಜನೆಗಳಂತಹ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದಾಗಿದೆ. ಇದೆಲ್ಲದಕ್ಕೂ ಶೈಕ್ಷಣಿಕ ಕೊರತೆ ಮುಖ್ಯ ಕಾರಣ. ಆದ್ದರಿಂದ ಬಹುಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿದರೆ ಜನಸಂಖ್ಯೆಯನ್ನು ಸುಧಾರಿಸಬಹುದು ಎಂದು ಹೇಳಿದರು.
ಜಿಲ್ಲೆಯ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳಲ್ಲಿ ಬಾಲ ಗರ್ಭಿಣಿಯರು ಕಂಡು ಬರುತ್ತಿರುವುದು ಅಮಾನವೀಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಈ ಬಗ್ಗೆ ಗಮನಹರಿಸಬೇಕು. ಜನಸಂಖ್ಯೆಯು ನಿಯಂತ್ರಣದಲ್ಲಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜನಸಂಖ್ಯಾ ನಿಯಂತ್ರಣದ ಕುರಿತು ಅರಿವು ಮೂಡಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಹೆರಿಗೆ ವಾರ್ಡ್ ಮತ್ತು ಉತ್ತಮ ಹೆರಿಗೆ ಶಸ್ತ್ರಚಿಕಿತ್ಸೆ ಕೊಠಡಿ ನಿರ್ವಹಣೆಗಾಗಿ ಡಾ.ರವೀಂದ್ರ ಹಾಗೂ ಡಾ.ಪವಿತ್ರ ಲಕ್ಷಾ ಪ್ರಶಸ್ತಿ ನೀಡಲಾಯಿತು. ಕುಟುಂಬ ಯೋಜನೆ ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸೆಗಾಗಿ ಡಾ.ಸಾಲಿಮಂಜಪ್ಪ, ಡಾ.ಅಭಿನವ್ ಅವರಿಗೂ ಪ್ರಶಸ್ತಿ ನೀಡಲಾಯಿತು.
ಜಾಥಾ ಕಾರ್ಯಕ್ರಮ: ಜನಸಂಖ್ಯಾ ದಿನಾಚರಣೆ ಅಂಗವಾಗಿ ನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಅವರು ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ “ಮನೆಗೊಂದು ಮಗು ಮನೆತುಂಬಾ ನಗು”, “ನಾವಿಬ್ಬರು ನಮಗೊಬ್ಬರು”, “ಜನಸಂಖ್ಯಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ”, “ಚಿಕ್ಕ ಕುಟುಂಬ ಚೊಕ್ಕ ಸಂಸಾರ”, “ಕುಟುಂಬ ಯೋಜನೆ ಅನುಸರಿಸಿ ಜನಸಂಖ್ಯೆ ನಿಯಂತ್ರಿಸಿ” ಎಂಬ ಘೋಷಣೆಗಳನ್ನು ಕೂಗಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಆಸ್ಪತ್ರೆ ಆವರಣದಿಂದ ಪ್ರಾರಂಭವಾದ ಜಾಥಾವು ಜೋಗಿಮಟ್ಟಿ ರಸ್ತೆ, ಮದಕರಿ ವೃತ್ತದ ಮೂಲಕ ತ.ರಾ.ಸು ರಂಗಮಂದಿರವರೆಗೂ ನಡೆಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರೇಖಾ, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶೀ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಆಸ್ಪತ್ರೆಯ ಹೆರಿಗೆ ತಜ್ಞರಾದ ಡಾ.ಪವಿತ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಇದ್ದರು.
Share This Article
error: Content is protected !!
";