Ad image

ಖಾಯಂ ಜನತಾ ನ್ಯಾಯಾಲಯದ ಮೊರೆ ಹೋಗಲು ಕರೆ- ನ್ಯಾ. ಸದಾನಂದ ನಾಗಪ್ಪ ನಾಯಕ್

Vijayanagara Vani
ಕೊಪ್ಪಳ ಆಗಸ್ಟ್ 19 ಸಾರ್ವಜನಿಕರು ಪ್ರಕರಣಗಳನ್ನು ದಾಖಲಿಸಿದಾಗ ವಿಳಂಬವಾಗುವುದನ್ನು ತಡೆಯಲು ಖಾಯಂ ಜನತಾ ನ್ಯಾಯಾಲಯದ ಮೋರೆ ಹೋಗಲು ಗಂಗಾವತಿಯ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರು ಮಾಜಿ ದೇವದಾಸಿ ಮಹಿಳೆಯರಿಗೆ ಕರೆ ನೀಡಿದರು.
ಅವರು ಶನಿವಾರ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗಂಗಾವತಿ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನೆ, ಗಂಗಾವತಿ ತಾಲೂಕ ಪಂಚಾಯತಿ, ಪೋಲಿಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಚಿಕ್ಕಜಂತಕಲ್ ಗ್ರಾಮ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ತಾಲೂಕಾ ಮಟ್ಟದ ಕಾನೂನು ಅರಿವು ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಟಾಟಿಸಿ ಮಾತನಾಡಿದರು.
ಸಾರ್ವಜನಿಕರು ತಮಗೆ ತೊಂದರೆಯಾದಾಗ ಕಾನೂನಿನ ಮೊರೆ ಹೋಗುವುದು ಸಹಜ. ನ್ಯಾಯಾಲಯದಿಂದ ತೀರ್ಪು ಬರುವಷ್ಟರಲ್ಲಿ ಸಾಕಷ್ಟು ವಿಳಂಬವಾಗಿರುತ್ತದೆ. ಈ ಕಾಲ ವಿಳಂಬವನ್ನು ತಡೆಯಲು ಈಗ ಖಾಯಂ ಜನತಾ ನ್ಯಾಯಾಲಯ ಜಾರಿಯಲ್ಲಿದ್ದು, ಪ್ರಕರಣದ ಎರಡು ಕಡೆಯವರು ಅಹಂಕಾರ, ದರ್ಪವನ್ನು ಬಿಟ್ಟು ಸೌಹಾರ್ದಯುತವಾಗಿ ರಾಜಿಸಂಧಾನದ ಮೂಲಕ ಬಂದರೆ ಬೇಗ ನ್ಯಾಯ ಸಿಗಬಹುದು. ನೆಮ್ಮದಿಯ ಜೀವನ ನಡೆಸಬಹುದಾಗಿರುತ್ತದೆ ಎಂದು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ ಅವರು ಮಾತನಾಡಿ, ದೇವದಾಸಿ ಪದ್ಧತಿ ಎನ್ನುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಅನಿಷ್ಟ ಪದ್ಧತಿಯಾಗಿದ್ದು, ಇದರಿಂದ ಮಹಿಳೆಯರ ಮೇಲೆ ಲೈಂಗಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಶೋಷಣೆಯಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಕರ್ನಾಟಕ ದೇವದಾಸಿ (ಸಮರ್ಪಣಾ) ನಿಷೇಧ ಕಾಯ್ದೆ-1982 ಹಾಗೂ ತಿದ್ದುಪಡಿ ಅಧಿನಿಯಮ 2009ರ ಪ್ರಕಾರ ಇದು ಜಾಮೀನುರಹಿತ ಅಪರಾಧವಾಗಿರುತ್ತದೆ. ಯಾವುದೇ ಹೆಣ್ಣು ಮಗುವನ್ನು ಈ ಪದ್ಧತಿಗೆ ದೂಡಿದರೆ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಈಗ 2025ರಲ್ಲಿ ಈ ಕಾನೂನು ಇನ್ನಷ್ಟು ಕಠಿಣವಾಗಲಿದ್ದು, ಮಗುವಿನ ತಂದೆ ಯಾರೆಂದು ಡಿ.ಎನ್.ಎ ಪರೀಕ್ಷೆ ಮೂಲಕ ಪತ್ತೆ ಹಚ್ಚಲು ಅವಕಾಶ ನೀಡಲಾಗುತ್ತದೆ. ಆದರಿಂದ ಇಡಿ ಸಮಾಜ ದೇವದಾಸಿ ಪದ್ಧತಿಯಿಂದ ಮುಕ್ತಗೊಳ್ಳಬೇಕೆಂದರು.
ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನೆ ಯೋಜನಾಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಮಾಜಿ ದೇವದಾಸಿ ಮಹಿಳೆಯರ ಮರು ಸಮಿಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಮಾಜಿ ದೇವದಾಸಿ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಮಾಹಿತಿಯನ್ನು ದಾಖಲಿಸಬಹುದು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಸುಮಾರು 120 ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೇತ್ರಾವತಿ ಗಂಡ ವೆಂಕೋಬ ಭಂಗಿ, ಗಂಗಾವತಿ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ, ಸದಸ್ಯ ಕಾರ್ಯದರ್ಶಿಗಳಾದ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮೇಘಾ ಸೋಮಣ್ಣನವರ್, ತಹಶೀಲ್ದಾರ ರವಿ ಅಂಗಡಿ, ಪೋಲಿಸ್ ಉಪವಿಭಾಗಾಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ್, ವಕೀಲರ ಸಂಘದ ಅಧ್ಯಕ್ಷರಾದ ಶರಣಬಸಪ್ಪ ನಾಯಕ್, ಉಪಾಧ್ಯಕ್ಷರಾದ ಪ್ರಕಾಶ ಎಂ. ಕುಸಬಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸ್ ಇನ್ಪೇಕ್ಟರ್ ರಂಗಪ್ಪ ದೊಡ್ಡಮನಿ, ಮುಸ್ಟೂರು ಪಿ.ಹೆಚ್.ಸಿ.ಯ ವೈಧ್ಯಾಧಿಕಾರಿ ಡಾ. ಶೇರಿನಾ ಫಾತಿಮಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೃತಿ, ಅಕ್ಷರ ದಾಸೋಹದ ಎ.ಡಿ. ರೋಷನ್, ಪಿ.ಡಿ.ಓ. ಮಲ್ಲಿಕಾರ್ಜುನ ಕಡಿವಾಲರ, ಮೇಲ್ವಿಚಾರಕಿ ನಿಂಗಮ್ಮ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣವೇಣಿ ಪ್ರಾರ್ಥಿಸಿದರು, ಕಾರ್ಯದರ್ಶಿ ರವಿಂದ್ರ ಅವರು ಸ್ವಾಗತಿಸಿದರು. ಭೀಮಣ್ಣ ಅವರು ನಿರೂಪಿಸಿದರು.

Share This Article
error: Content is protected !!
";