ನಾರಿ ಶಿರೊಮಣಿ ಜಗದಂಬಾ ಸರಸ್ವತಿ

Vijayanagara Vani
ನಾರಿ ಶಿರೊಮಣಿ ಜಗದಂಬಾ ಸರಸ್ವತಿ

“ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರಾ! ನಿಮಗಾಗಿ ಸತ್ತವರನಾರನೂ ಕಾಣೆ”
ಅಲ್ಲಮಪ್ರಭುಗಳ ಈ ವಚನವು ಎಷ್ಟು ವಾಸ್ತವಿಕವಾಗಿದೆ. ಆಧುನಿಕಯುಗದ ಈ ವೈಭೋಗದಲ್ಲಿ, ಸಾಧನಗಳ ತೂಗುಯ್ಯಾಲೆಯಲ್ಲಿ ತೂಗುತ್ತಾ ಸಾಧನೆಯನ್ನೇ ಮರೆತು ವಿಷಯ-ಲೋಲರಾಗಿರುವ ವರ್ತಮಾನದ ಜನತೆಗೆ ಈ ವಚನವು ಜನರ ಮಾನಸಿಕತೆಯನ್ನು ತೋರಿಸುತ್ತದೆ. ಆದರೆ ಅಕ್ಕಮಹಾದೇವಿಯಂತಹ ವೀರಶಿರೋಮಣಿ ಇದಕ್ಕೆ ವಿರುದ್ಧ. ತನ್ನ ಜೀವನನ್ನೇ ಶಿವನಿಗಾಗಿ ಮುಡುಪಾಗಿಟ್ಟು ಶಿವಸಾನಿಧ್ಯವನ್ನು ಸೇರಿದಳು. 12 ಶತಮಾನದ ಶಿವ-ಶರಣ ಶಿವ-ಶರಣೆಯರು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಎಲ್ಲೆಡೆ ಪಸರಿಸಲು ಪ್ರಯತ್ನಿಸಿದರು. ಅವರ ನಂತರ ಅನೇಕ ಋಷಿ-ಮುನಿಗಳು ವಿಶ್ವದಾದ್ಯಂತ ಜ್ಞಾನದ ಪ್ರಕಾಶವನ್ನು ಪಸರಿಸಿ ಆಧ್ಯಾತ್ಮಿಕತೆಯ ಅವಶ್ಯಕತೆಯನ್ನು ವಿಶ್ವದಾದ್ಯಂತ ಸಾರುತ್ತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವಿಜ್ಞಾನವನ್ನೇ ಸರ್ವಸ್ವವೆಂದು ನಂಬಿ ವೈಜ್ಞಾನಿಕ ಸಾಧನಗಳಲ್ಲಿಯೇ ಲೀನರಾಗಿದ್ದು ತಮ್ಮ ಅಸ್ತಿತ್ವ ಹಾಗೂ ಭಗವಂತನ ಅಸ್ತಿತ್ವದ ಅರಿವೇ ಇಲ್ಲದೇ ರೇಷ್ಮೆ ಹುಳವು ತನ್ನ ಸುತ್ತ ತಾನೇ ಬಲೆಯನ್ನು ಹೆಣೆದುಕೊಂಡಂತೆ ಅಜ್ಞಾನದ ಬಲೆಯನ್ನು ತಾವೇ ಹೆಣಿದುಕೊಂಡಿದ್ದಾರೆ. ಇದಕ್ಕೆ ಭಾರತೀಯರು ಹೊರತಾಗಿಲ್ಲ. ವಿಜ್ಞಾನವು ಶಕ್ತಿಯನ್ನು ನೀಡುತ್ತದೆಯೋ ಹೊರತು ಶಾಂತಿಯನ್ನಲ್ಲ. ಶಾಂತಿಯನ್ನು ನೀಡುವ ಕೆಲಸವನ್ನು ಆಧ್ಯಾತ್ಮಿಕತೆಯು ಮಾಡುತ್ತದೆ. ಹಾಗಾಗಿ ಭಾರತವನ್ನು ಶಾಂತಿಪ್ರಿಯ ದೇಶವೆಂದು ಹೇಳಲಾಗುತ್ತದೆ.
ಜಗತ್ತಿನಾದ್ಯಂತ ಅನೇಕ ಮಹಾಮಾತೆಯರು, ವೀರಮಾತೆಯರು, ತಪಸ್ವಿನಿಯರು, ಶಿವಶರಣೆಯರು ಆಗಿಹೋಗಿದ್ದಾರೆ. ಆದರೆ ಈಶ್ವರೀಯ ವಿಶ್ವ ವಿದ್ಯಾಲಯದ ಇತಿಹಾಸದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವು `ಜಗದಂಬಾ ಸರಸ್ವತಿ’ ಅವರಿಗೆ ಸಲ್ಲುತ್ತದೆ.
ವೇದಗಳಲ್ಲಿ ಮಾತೆಗೆ ನಿರ್ಮಾತೆ ಎಂದು, ಕುರಾನ್ನಲ್ಲಿ ತಾಯಿಯ ಹೆಜ್ಜೆಯಲ್ಲಿ ಸ್ವರ್ಗವಿದೆ ಎಂದು ಹೇಳಲಾಗಿದೆ. ಮಾತಾ-ಪಿತರನ್ನು ಗೌರವದಿಂದ ಕಾಣಬೇಕೆಂದು ಬೈಬಲ್ನಲ್ಲಿ ಇದೆ. ಗುರುಗ್ರ್ರಂಥಸಾಹೇಬದಲ್ಲಿ ಮಾತೆಗೆ ಮಾನ್ಯತೆ ನೀಡಲಾಗಿದೆ. ಭೂಮಿಗಿಂತಲೂ ಮಾತೆಯೇ ಮಹಾನ್ ಎಂದು ವೇದವ್ಯಾಸರು ಹೇಳಿದ್ದಾರೆ. ಮಾತೆಯೇ ಮೊದಲ ಗುರು ಎಂಬ ಮಹಿಮೆ ಇದೆ. ಪುತ್ರನು ಕುಪುತ್ರನಾಗಬಲ್ಲನು, ಆದರೇ ಮಾತೆ ಕುಮಾತೆ ಆಗುವದಿಲ್ಲ ಎಂಬ ಗಾದೆ ಮಾತು ಇದೆ.

ಜಗದಂಬಾ ಸರಸ್ವತಿ ಅವರ ಜನ್ಮವು 1919 ರಲ್ಲಿ ಅಮೃತಸರದಲ್ಲಿ ಆಯಿತು. ಅವರ ಲೌಕಿಕ ಹೆಸರು `ರಾಧ’. ಅವರ ತಂದೆಯ ಹೆಸರು `ಪೊಕರದಾಸ’ ಮತ್ತು ತಾಯಿಯ ಹೆಸರು `ರೋಚಾ’. ಅವರ ತಂದೆ ಬೆಳ್ಳಿ ಬಂಗಾರದ ವ್ಯಾಪಾರದ ಜೊತೆಗೆ ತುಪ್ಪದ ಹೋಲ್ಸೇಲ್ ವ್ಯಾಪಾರಿ ಆಗಿದ್ದರು. ಅವರ ವ್ಯಾಪಾರವು ಮುಂಬಯಿ, ಚೆನ್ನೈ ಮತ್ತು ಶ್ರೀಲಂಕಾದಲ್ಲಿ ನಡೆಯತ್ತಿತ್ತು. ಆಕಸ್ಮಿಕವಾಗಿ ಹೃದಯಘಾತದಿಂದ ಅವರ ನಿಧನವಾಯಿತು. ನಂತರ ರಾಧೆ ತನ್ನ ಸಹೋದರಿ ಗೋಪಿ ಮತ್ತು ತಾಯಿಯ ಜೊತೆಗೆ ಸಿಂಧ್ ಹೈದರಾಬಾದ್ನಲ್ಲಿರುವÀ ತಮ್ಮ ಅಜ್ಜಿಯ ಮನೆಗೆ ಬಂದಳು. ಅಲ್ಲಿಯೇ ಅವರು ಕುಂದನಮಲ್ ಮಾಡೆಲ್ ಸ್ಕೂಲ್ನಲ್ಲಿ ಮೆಟ್ರಿಕ್ ತನಕ ಓದಿದರು. ಲೌಕಿಕ ವಿದ್ಯೆಯ ಜೊತೆಗೆ ಹಾಡುಗಾರಿಕೆ ಮತ್ತು ನೃತ್ಯದಲ್ಲಿಯೂ ಅವರು ಪ್ರಥಮ ಸ್ಥಾನ ಪಡೆಯತ್ತಿದ್ದರು. ಅವರ ವ್ಯಕ್ತಿತ್ವವನ್ನು ನೋಡಿದಾಗ ದಿವ್ಯಲೋಕದಿಂದ ಬಂದಿರುವ ದೇವಿಯಂತೆ ಭಾಸವಾಗುತ್ತಿತ್ತು. ಅವರು ಪ್ರತಿಭಾವಂತ ಹಾಗೂ ಚಮತ್ಕಾರಿ ಬುದ್ಧಿಯುಳ್ಳವವರಾಗಿದ್ದರು. ವೀಣಾವಾದನ ಹಾಗೂ ಗಾಯನ ಕಲೆಯಲ್ಲಿ ನಿಪುಣರಾಗಿದ್ದರು.
1937 ರಲ್ಲಿ ದಾದಾ ಲೇಖರಾಜ ಅವರ ಮೂಲಕ ನಿರಾಕಾರ ಶಿವ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾಪನೆ ಮಾಡಿದರು. ಆಗ ಅವರ ಮನೆಯಲ್ಲಿ ನಡೆಯುವ ಸತ್ಸಂಗಕ್ಕೆ ತಾಯಿಯ ಜೊತೆ `ರಾಧ’ ಹೋಗುತ್ತಿದ್ದರು. ಸತ್ಯ ಜ್ಞಾನವನ್ನು ಕೇಳಿದ ನಂತರ ಅಜೀವನ ಬ್ರಹ್ಮಚರ್ಯದ ಪಾಲನೆ ಮತ್ತು ಈಶ್ವರೀಯ ಸೇವೆ ಮಾಡುವ ನಿರ್ಣಯಕ್ಕೆ ಬಂದರು. ಅವರು ತಮ್ಮ ಸರ್ವಸ್ವವನ್ನು ಪ್ರಭುವಿಗೆ ಅರ್ಪಣೆ ಮಾಡಿದರು. 1937 ರ ಅಕ್ಟೋಬರ ತಿಂಗಳಲ್ಲಿ `ರಾಧ’ ಅವರ ಜೊತೆಗೂಡಿ ಅನ್ಯ ಜ್ಞಾನ ಪಾರಂಗತ ಕನ್ಯೆಯರು, ಮಾತೆಯರು, ಈಶ್ವರೀಯ ಕಾರ್ಯದಲ್ಲಿ ತನ್ನ ತನು-ಮನ-ಧನವನ್ನು ಸರ್ಮಪಣೆ ಮಾಡಿ, ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದರು. ಕನ್ಯೆಯಾಗಿರುವ ರಾಧ ಅವರು ಸುಮಾರು 350ಕ್ಕು ಹೆಚ್ಚು ಯಜ್ಞವತ್ಸರನ್ನು, ಸಾವಿರಾರು ಬ್ರಹ್ಮಾವತ್ಸರನ್ನು ಮಮತೆಯ ತಾಯಿಯಾಗಿ, ಪಾಲನೆ ನೀಡಿ, ಜ್ಞಾನ-ಯೋಗದಿಂದ, ದೈವಿ ಗುಣಗಳಿಂದ ಶೃಂಗರಿಸಿ, ಯೋಗಿಗಳಾಗಿ ಮಾಡಿದರು.
`ರಾಧ’ ಅವರಿಗೆ ಮಧುರ ಹಾಗೂ ಪ್ರಭಾವಶಾಲಿ ವಾಣಿಯ ವರದಾನವು ಜನ್ಮದಿಂದಲೇ ಪ್ರಾಪ್ತವಾಗಿತ್ತು. ಅವರ ಮುಖಕಮಲದಿಂದ ಬಂದಿರುವ ವರದಾನಿ ಮಹಾವಾಕ್ಯಗಳಿಂದ ಅನೇಕರಲ್ಲಿ ಪರಿವರ್ತನೆ ಕಂಡುಬರುತಿತ್ತು. ಅವರು ನಿಜವಾಗಿಯೂ ಜ್ಞಾನದ ಸತ್ಯದೇವಿ ಆಗಿದ್ದರು. ತ್ಯಾಗ, ತಪಸ್ಸು, ಸೇವೆಯ ಪ್ರತೀಕವಾಗಿದ್ದರು. `ರಾಧ’ ಅವರು ತಮ್ಮ ವಿಶಾಲ ಬುದ್ಧಿಯಿಂದ ಪರಮಾತ್ಮನ ದಿವ್ಯ ಸಂದೇಶವನ್ನು ಮಾತೃವಾತ್ಸಲ್ಯದಿಂದ ನೀಡಿದರು. ಆಗ ಅವರಲ್ಲಿ ಇರುವ ಮಾತಾಸ್ವರೂಪವನ್ನು ಕಂಡು ಜನರು `ಮಮ್ಮಾ’ ಎಂಬ ಬಿರುದನ್ನು ನೀಡಿದರು. ಪರಮಪಿತ ಪರಮಾತ್ಮನು ಅವರಿಗೆ `ಜಗದಂಬಾ ಸರಸ್ವತಿ’ ಎಂಬ ಅಮರ ವರದಾನವನ್ನು ನೀಡಿ `ಜಗನ್ಮಾತೆ’ `ಜಗತ್ಜನನಿ’ ಎಂಬ ಬಿರುದು ನೀಡಿದರು. ಅವರಲ್ಲಿ ಇರುವ ಗಂಭೀರತೆ, ಮಧುರತೆ, ಹರ್ಷಿತಮುಖತೆಯಿಂದ ಮಾತೆಯ ಮಮತೆ ಅನುಭವಾಗುತಿತ್ತು. ಅವರು ಕುಶಲ ಆಡಳಿತಗಾರರು ಆಗಿದ್ದರು. ಕರ್ಮಯೋಗಿಯ ಜೀವನದಲ್ಲಿ ಎರಡು ನಿಯಮಗಳ ಪಾಲನೆಯ ಕಡೆಗೆ ಅವರು ವಿಶೇಷ ಗಮನ ಹರಿಸಿದರು. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು, ಭಗವಂತನ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಸಂಪೂರ್ಣ ಪಾಲಿಸುವುದು.
ಮಮ್ಮಾರವರ ಜೀವನದಲ್ಲಿ ಜೀವನ ಪರಿವರ್ತನೆ ಮಾಡುವ ಅನೇಕ ಸತ್ಯ ಘಟನೆಗಳು ನಡೆದವು. ಅದರಲ್ಲಿ ಒಂದು ಘಟನೆ ಈ ರೀತಿಯಾಗಿದೆ. ಒಬ್ಬ ಜಾಗತಿಕ ಮಟ್ಟದ ಶ್ರೀಮಂತ ವ್ಯಾಪಾರಿ ಪಾರ್ಟಿಗಳಲ್ಲಿ ದುಂದು ವೆಚ್ಚ ಮಾಡುತ್ತಿದ್ದರು. ಅವರು ಸತ್ಸಂಗಕ್ಕೆ ಬರಲು ಅರಂಭಿಸಿದರು. ಮಮ್ಮಾರವರು ಜ್ಞಾನದ ತರಗತಿಗಳನ್ನು ನೀಡಿದರು. ‘ನಿಮ್ಮ ಶರೀರ ಮಂದಿರವಾಗಿದೆ, ನೀವು ಅದರಲ್ಲಿರುವ ಚೈತನ್ಯ ಮೂರ್ತಿ ಆಗಿದ್ದೀರಿ. ಮಂದಿರದಲ್ಲಿ ಇರುವ ಮೂರ್ತಿಗಳಗೆ ನೀವು ಪವಿತ್ರ ಶುದ್ಧ ನೈವೆದ್ಯ ನೀಡುತ್ತೀರಿ. ಆದರೆ ನಿಮ್ಮ ಶರೀರದಲ್ಲಿ ಇರುವ ಮೂರ್ತಿಗೆ ಯಾವ ನೈವೇದ್ಯ ಅರ್ಪಣೆ ಮಾಡುವಿರಿ?’ ಈ ಹಿತವಚನಗಳ ಪ್ರಭಾವದಿಂದ ಅವರು ಅಂದಿನಿಂದ ಎಲ್ಲ ದುಶ್ಚಟಗಳನ್ನು ಬಿಟ್ಟರು. ಮಮ್ಮಾರವರಿಗೆ ನಾನು ಸತ್ತುಹೋದರೂ ಚಿಂತೆಯಿಲ್ಲ, ಮತ್ತೆ ಹಳೆಯ ಮಾರ್ಗದಲ್ಲಿ ನಡೆಯುವದಿಲ್ಲ’ ಎಂದು ವಚನ ನೀಡಿದರು. ಒಂದು ಸಾರಿ ಕಾಯಿಲೆ ಬಂದಾಗ ವೈದ್ಯರು ಅವರಿಗೆ ಧೂಮ್ರಪಾನ ಮತ್ತು ಮದ್ಯಪಾನ ಮಾಡಲು ಸಲಹೆ ನೀಡಿದರು. ಇಲ್ಲವಾದರೆ ನೀವು ಸಾಯುತ್ತಿರಿ ಎಂದು ಹೇಳಿದರು. ಆದರೆ ಅವರು ಸಲಹೆ ನಿರಾಕರಿಸಿದರು. ತಮ್ಮ ಶುಭ ಸಂಕಲ್ಪದಿಂದಲೇ ಸ್ವಲ್ಪ ಸಮಯದಲ್ಲಿ ಗುಣಮುಖರಾದರು.
ಈಶ್ವರೀಯ ನಿಯಮಗಳ ಪಾಲನೆ ಮಾಡುವರಲ್ಲಿ ಕಾಳಿ ಹಾಗೂ ಶೀತಲಾದೇವಿ ರೂಪವನ್ನು ಅವರು ತಾಳಿದರು. ಸರ್ವರ ಮನೋಕಾಮನೆಗಳನ್ನು ಪೂರ್ಣಗೊಳಿಸಿ ಅನ್ಯರಿಗೆ ಮಹಾದಾನಿ-ವರದಾನಿ ಆಗಿ, ವಿಷಯ-ವಿಕಾರಗಳಿಂದ ಮುಕ್ತ ಮಾಡಿದರು. ಮಧುರತೆ, ಕೋಮಲತೆ, ಸ್ನೇಹ, ನಿರ್ಮಲತೆ, ಸರಳತೆ, ನಮ್ರತೆ, ಶಾಂತತೆ, ಪವಿತ್ರತೆ, ಮುಂತಾದ ದೈವಿಗುಣಗಳು ಹಾಗೂ ಕಲೆಗಳನ್ನು ಕಲಿಯಲು ಅವರ ಜೀವನ ಅನೇಕರಿಗೆ ಪ್ರೇರಣಾದಾಯಕವಾಗಿದೆ. `ಜಗದಂಬ ಸರಸ್ವತಿ’ ಅವರು 24-06-1965 ರಂದು ತಮ್ಮ ಸಾಕಾರ ದೇಹವನ್ನು ತ್ಯಜಿಸಿದರು.
ಆವರ 59 ನೆ ಪುಣ್ಯತಿಥಿಯು ವಿಶ್ವದಾದ್ಯಂತ ಜೂನ 24 ರಂದು 8500 ಸೇವಾಕೇಂದ್ರಗಳಲ್ಲಿ ಶಕ್ತೀದಿನವೆಂದು ಆಚರಿಸಲಾಗಿತ್ತದೆ.

–ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್

WhatsApp Group Join Now
Telegram Group Join Now
Share This Article
error: Content is protected !!