ಶಿವಮೊಗ್ಗ ಜು.01
ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವವಾದದ್ದು. ಭಾರತ ರತ್ನ ಡಾ|| ಬಿದಾನ್ ಚಂದ್ರ ರಾಯ್ ತಮ್ಮ ನಿಸ್ವಾರ್ಥ ಸೇವೆಯಿಂದ ವೈದ್ಯ ವೃತ್ತಿಯ ಘನತೆಯನ್ನು ಎತ್ತಿ ಹಿಡಿದವರು. ಅವರು ವೈದ್ಯ ಕ್ಷೇತ್ರಕ್ಕೆ ನೀಡಿದ ನಿಸ್ವಾರ್ಥ ಸೇವೆ ಮತ್ತು ಕೊಡುಗೆ ಸ್ಮರಣಾರ್ಥ ಅವರ ಜನ್ಮ ದಿನವಾದ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಅವರ ಸೇವೆ ಮತ್ತು ಸಾಮಾಜಿಕ ಕಳಕಳಿ ಹಾಗೂ ಹೃದಯವಂತಿಕೆ ನಮ್ಮ ವೈದ್ಯ ಸಮೂಹಕ್ಕೆ ಆದರ್ಶವಾಗಲಿ ಎಂದು ಹಾರೈಸುತ್ತಾ ಜಿಲ್ಲೆಯ ಎಲ್ಲಾ ವೈದ್ಯ ಸಮೂಹಕ್ಕೆ ವೈದ್ಯರ ದಿನಾಚರಣೆಯ ಹಾರ್ಧಿಕ ಶುಭಾಶಯ ಕೋರುತ್ತೇನೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ತಿಳಿಸಿದ್ದಾರೆ.
ಪ್ರಸಕ್ತ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಿರುವುದರಿಂದ ಅಲ್ಲಲ್ಲಿ ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿದೆ. ಇದರಿಂದ ಈ ದಿನಗಳಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಿರುತ್ತದೆ. ಸೋಂಕಿತ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ, ಚಿಕೂನ್ಗುನ್ಯ, ಮಲೇರಿಯಾ, ಪೈಲೇರಿಯಾ, ಜೆ.ಇ ಇತರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ.
ಇತ್ತಿಚೀನ ದಿನಗಳಲ್ಲಿ ಡೆಂಗ್ಯೂ ಮತ್ತು ಚಿಕೂನ್ಗುನ್ಯ ಕಾಯಿಲೆಗಳಿಗೆ ಹೆಚ್ಚು ಜನರು ತುತ್ತಾಗುತ್ತಿದ್ದಾರೆ. ಸೋಂಕಿತ ಈಡೀಸ್ ಈಜಿಪ್ಟೆ ಸೊಳ್ಳೆಗಳು ಕಚ್ಚುವುದುರಿಂದ ಈ ಕಾಯಿಲೆ ಬರುತ್ತದೆ. ಇದರ ಬಗ್ಗೆ ನಿರ್ಲಕ್ಷತೆವಹಿಸಿದರೆ ಅಥವಾ ಸಕಾಲದಲ್ಲಿ ಚಿಕಿತ್ಸೆ ಪಡೆಯದೇ ಹೋದಲ್ಲಿ ಇದು ಮಾರಣಾಂತಿಕವೂ ಹೌದು. ಮನೆಯ ಒಳಗೆ ಅಥವಾ ಹೊರಗೆ ಶೇಖರಣೆಯಾಗುವ ತಿಳಿ ನೀರಿನಲ್ಲಿ ಈ ಸೊಳ್ಳೆಗಳು ಸಂತಾನಾಭಿವೃದ್ಧಿ ಹೊಂದಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಹಾಗಾಗಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು.
ಆರೋಗ್ಯ ಇಲಾಖೆ ಈಗಾಗಲೇ ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಎಲ್ಲಾ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಆರೋಗ್ಯ ಇಲಾಖೆಯಿಂದ ಮಾತ್ರ ಈ ಕಾಯಿಲೆ ನಿಯಂತ್ರಣಕ್ಕೆ ತರುವುದು ಸಾಧ್ಯವಾಗಲಾರದು. ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಇತರೆ ಇಲಾಖೆಗಳ ಸಹಕಾರದಿಂದ ಮಾತ್ರ ಕಾಯಿಲೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ಸನ್ನು ಕಾಣಬಹುದು.
ಎಲ್ಲರೂ ತಮ್ಮ ಮನೆಯ ಸುತ್ತ-ಮುತ್ತಲೂ ತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಮನೆಯ ಒಳಾಂಗಣ, ಹೊರಾಂಗಣಗಳಲ್ಲಿ ಸಂಗ್ರಹಿಸುವ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಆಗದಂತೆ ನಿಗಾ ವಹಿಸಬೇಕು. ಚರಂಡಿ, ರಸ್ತೆ, ಗುಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಸೊಳ್ಳೆಗಳು ಕಡಿಯದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ಪಂಚಾಯತ್ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇತರೆ ಇಲಾಖೆಗಳು, ಆರೋಗ್ಯ ಇಲಾಖೆ ಮತ್ತು ಸಿಬ್ಬಂದಿಗಳೊಂದಿಗೆ ಕೈ ಜೋಡಿಸಬೇಕು. ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇಲಾಖೆಯಿಂದ ನೀಡುವ ಮಾಹಿತಿಯನ್ನು, ನಿಯಮಗಳನ್ನು ಪರಿಪಾಲನೆ ಮಾಡಿದಾಗ ಮಾತ್ರ ನಾವು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾದಿತು ಎಂದು ಆಶಿಸುತ್ತೇನೆ. ಶೀತ, ಜ್ವರ, ಕೆಮ್ಮು ಇತರೆ ಲಕ್ಷಣಗಳು ಕಂಡುಬಂದಲ್ಲಿ ತಪ್ಪದೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು, ಆರೋಗ್ಯ ಸಿಬ್ಬಂದಿ ಅಥವಾ ವೈದ್ಯರನ್ನು ಭೇಟಿ ಮಾಡಿ ಎಂದು ಅವರು ತಿಳಿಸಿದ್ದಾರೆ.