ಧಾರವಾಡ ಜ. 18: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2025 ರ ಉದ್ಘಾಟನಾ ಕಾರ್ಯಕ್ರಮವನ್ನು ಧಾರವಾಡ (ಪಶ್ಚಿಮ) ಉಪ ಸಾರಿಗೆಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಇಂದು (ಜ.18) ಮಧ್ಯಾಹ್ನ ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದಲ್ಲಿ ಆಯೋಜಿಸಲಾಗಿತ್ತು.
ಉಪಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಮೊಹಮ್ಮದ್ ಬಾಷಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ರಸ್ತೆ ಅಪಘಾತಕ್ಕೆ ಕಾರಣ ಹಾಗೂ ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಪೋಷಕರು ತಮ್ಮ ಮಕ್ಕಳಿಗೆ 18 ವರ್ಷ ವಯೋಮಿತಿ ಮೀರಿದ ನಂತರವೇ ವಾಹನ ಚಲಾಯಿಸುವಂತೆ ನೋಡಿಕೊಳ್ಳಬೇಕು. ಎಲ್.ಎಲ್.ಆರ್. ಹಾಗೂ ಡಿ.ಎಲ್. ಪಡೆದ ನಂತರವೇ ವಾಹನವನ್ನು ಚಲಾಯಿಸಲು ವಾಹನವನ್ನು ನೀಡಿದಲ್ಲಿ ಕಾನೂನು ನಿಯಮಗಳನ್ನು ಪಾಲಿಸಿದಂತಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಕುರಿತಾದ ಸ್ಟಿಕ್ಕರ್ಗಳನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಡಿ.ಬಿ ಕರಡೋಣಿ ಅವರು ರಸ್ತೆ ಸುರಕ್ಷತೆ ಕುರಿತಾದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ಅವರು ಮಾತನಾಡಿ, ದಿನನಿತ್ಯದ ಜೀವನದಲ್ಲಿ ಗಮನಿಸಿದಂತೆ ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದು, ಸದರಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಅಪಘಾತಗಳು ನಡೆಯದಂತೆ ವಾಹನಗಳನ್ನು ಜಾಗೃತಿಯಿಂದ ಚಲಾಯಿಸುವಂತೆ ತಿಳುವಳಿಕೆ ನೀಡಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕೆ ಇವರು ಮಾತನಾಡಿ, ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಲು ವಾಹನ ಚಾಲನೆಯಲ್ಲಿನ ಅಜಾಗರೂಕತೆ ಕಾರಣವಾಗಿದ್ದು, ಪ್ರತಿಯೊಬ್ಬ ಚಾಲಕನು ರಸ್ತೆ ನಿಯಮಾವಳಿಗಳನ್ನು ಹಾಗೂ ರಸ್ತೆ ಸುರಕ್ಷತೆಯ ಎಲ್ಲಾ ಮಾನದಂಡಗಳನ್ನು ಪಾಲಿಸಿ ವಾಹನ ಚಲಾಯಿಸಿದಲ್ಲಿ ರಸ್ತೆ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿಗಳಾದ ಮಹೇಶ ಮಠಪತಿ, ಹಿಮೋವಾನಿ, ಎಂ.ಎಫ್. ಬನಹಟ್ಟಿ, ಅಧೀಕ್ಷಕ ಸಂಜೀವ್ ಹೊಂಡೇದ್, ಸಚಿನ್ ಹುಲಕೋಟಿ, ವಿಜಯಲಕ್ಷ್ಮೀ ರಟಕಲ್, ಪದ್ಮಾ ಮರೆಣ್ಣವರ ಹಾಗೂ ಆಶಾ ಹಜಾರೆ ಅವರು ಪಾಲ್ಗೋಂಡಿದ್ದರು.