Ad image

ನಿಸರ್ಗ ಸಂಪತ್ತು ಮತ್ತು ಮಾನವನ ಜವಾಬ್ದಾರಿ

Vijayanagara Vani
ನಿಸರ್ಗ ಸಂಪತ್ತು ಮತ್ತು ಮಾನವನ ಜವಾಬ್ದಾರಿ

 

ಪಂಚಮಹಾಭೂತಗಳಿಂದ ಕೂಡಿರುವ ಈ ಬ್ರಹ್ಮಾಂಡದಲ್ಲಿ ನಾವು ಭೂಮಿಯ ಮೇಲೆ ನಡೆದಾಡುವ, ಗಾಳಿಯನ್ನು ಸೇವಿಸುವ, ನೀರನ್ನು ಕುಡಿಯುವ, ಬೆಂಕಿಯನ್ನು ಬಳಸಿ ಅಡುಗೆ ಮಾಡುವ ಮತ್ತು ಆಕಾಶ ತತ್ವವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲ ನೈಸರ್ಗಿಕ ವಸ್ತುಗಳನ್ನು ನಮ್ಮದಾಗಿಸಿಕೊಂಡಿದ್ದೇವೆ, ಬಳಸುತ್ತೇವೆ ಎಲ್ಲವೂ ನಿಜ ಆದರೆ ಈ ನಿಸರ್ಗ ಸಹಜ ಸಂಪತ್ತುಗಳನ್ನು ಕೆಲವೊಮ್ಮೆ ನಾವು ದುರ್ಬಳಕೆ ಮಾಡಿಕೊಳ್ಳುವುದು ಕೂಡ ಉಂಟು.

ಇದರಲ್ಲಿ ಮುಖ್ಯವಾಗಿ ವಿದ್ಯುತ್. ಅವಶ್ಯಕತೆ ಇದ್ದಾಗ ಲೈಟ್ ಅನ್ನು ಫ್ಯಾನುಗಳನ್ನು ಹಾಕಿಕೊಂಡು ಅವಶ್ಯಕತೆ ಇಲ್ಲದಾಗ ಅವುಗಳನ್ನು ಬಂದ್ ಮಾಡುವ ಜರೂರತ್ತು ನಮಗಿದೆ. ಯಾವುದನ್ನು ನಮಗೆ ಉತ್ಪಾದಿಸಲು ಸಾಧ್ಯವಿಲ್ಲವೂ ಅದನ್ನು ಅನವಶ್ಯಕವಾಗಿ ಬಳಸುವ ಹಕ್ಕು ನಮಗಿಲ್ಲ. ಅದು ಅಲ್ಲದೆ ಅನವಶ್ಯಕವಾಗಿ ವಿದ್ಯುತ್ ಬಳಕೆಯನ್ನು ಮಾಡುವ ಮೂಲಕ ನಾವು ಹೆಚ್ಚಿನ ವಿದ್ಯುತ್ ದರವನ್ನು ನೀಡಬೇಕಾಗುತ್ತದೆ ಎಂಬುದು ನಮಗೆ ಗೊತ್ತಿರಬೇಕು.

ನಮಗೆ ಎಲ್ಲವನ್ನೂ ನೀಡುವ ಭೂಮಿ ತಾಯಿಯ ಮೇಲೆ ನಾವು ಉಗುಳುತ್ತೇವೆ.ಬಹಳಷ್ಟು ಬಾರಿ ಸಂಬಂಧಿಸದ ಸ್ಥಳಗಳಲ್ಲಿ ಕೂಡ ಸಾರ್ವಜನಿಕವಾಗಿ ರಸ್ತೆಗಳ ಮೇಲೆ ರಂಗೋಲಿ ಹಾಕಿದಂತೆ ಉಗುಳುತ್ತಾ ಓಡಾಡುವುದನ್ನು ರೂಡಿಸಿಕೊಂಡಿರುತ್ತೇವೆ. ಇದು ಎಳ್ಳಷ್ಟು ಕೂಡ ಸರಿಯಲ್ಲ.

ನಮಗೆ ಓಡಾಡಲು ಅವಕಾಶವನ್ನು ಕೊಟ್ಟಿರುವ ತನ್ನ ಮಡಿಲಲ್ಲಿ ನಮ್ಮನ್ನು ಎತ್ತಿ ಆಡಿಸುವ ಮರಳಿ ತನ್ನಲ್ಲಿ ಸೇರಿಸಿಕೊಳ್ಳುವ ಭೂಮಿ ತಾಯಿಗೆ ನಾವು ಅದೆಷ್ಟು ಕೃತಜ್ಞರಾಗಿದ್ದರು ಕಡಿಮೆಯೇ ಅಂತಹ ಭೂಮಿ ತಾಯಿಯ ಮೇಲೆ ಹೊಲಸು ಮಾಡುವ,ಉಗುಳುವ ಕಾರ್ಯಗಳು ಅಕ್ಷಮ್ಯ ಅಪರಾಧಗಳೆ ಸರಿ. ಭೂಮಿಯನ್ನು ತಾಯಿ ಎಂದು ಪೂಜಿಸುವ ನಾವುಗಳು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಬಹಳ ಜಾಗರೂಕತೆ ವಹಿಸಬೇಕು. ನಮ್ಮ ಮುಂದಿನ ಜನಾಂಗಕ್ಕೆ ನಾವು ಏನನ್ನಾದರೂ ಕೊಡಬೇಕು ಎಂದಿದ್ದರೆ ಒಳ್ಳೆಯ ಭೂಮಿಯನ್ನು, ಪರಿಸರವನ್ನು ಕಾಣಿಕೆಯಾಗಿ ನೀಡಬೇಕು.

ನೀರು ನಮ್ಮ ಬದುಕಿನ ಸರ್ವಸ್ವ. ನೀರಿಗಾಗಿ ಮೂರನೇ ಮಹಾಯುದ್ಧ ನಡೆದರೂ ನಡೆದೀತು ಎಂದು ಹೇಳುವಷ್ಟು ನೀರು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ.ನೀರಿಲ್ಲದೆ ನಮಗೆ ಬದುಕೇ ಇಲ್ಲ… ನೀರನ್ನು ಗಂಗೆ ಎಂದು ಪೂಜಿಸುವ ನಾವುಗಳು ನೀರಿನ ಆಕರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೊಳೆ, ಹಳ್ಳಗಳನ್ನು ಬರಿ ಪೂಜಿಸಿದರಷ್ಟೇ ಸಾಲದು . ಅವುಗಳಲ್ಲಿ ನೈರ್ಮಾಲ್ಯಗಳನ್ನು ಚೆಲ್ಲದೆ ಇರುವಂತೆ, ನೀರನ್ನು ಕಲುಷಿತಗೊಳ್ಳದಂತೆ ಜಾಗೃತಿ ವಹಿಸಬೇಕು

ಇನ್ನು ಸಾಲು ಸಾಲಾಗಿ ಗಿಡ ಮರಗಳ ಮಾರಣ ಹೋಮವನ್ನು ನಾವು ಕಾಣುತ್ತಿದ್ದೇವೆ. ಅದೆಷ್ಟೇ ಕೋಟಿಗಟ್ಟಲೆ ಜನರು ಮಂಡಿಯೂರಿ ಬೇಡಿಕೊಂಡರೂ ಕೂಡ ಒಂದು ಪುಟ್ಟ ಸಸಿ ಕೇವಲ ಒಂದು ದಿನದಲ್ಲಿ ಬೆಳೆದು ಗಿಡವಾಗಿ, ಹೆಮ್ಮರವಾಗಿ ನಿಲ್ಲುವುದಿಲ್ಲ. ಅದಕ್ಕೆ ಅದರದ್ದೇ ಆದ ಕಾಲಮಿತಿಯಲ್ಲಿ ಬೆಳೆದು ನಿಲ್ಲುವ ಸಾಮರ್ಥ್ಯವಿದ್ದು ಅದೇನೇ ಹೆಚ್ಚಿನ
ಪೋಷಕಾಂಶಗಳನ್ನು ಹಾಕಿ ಬೆಳೆಸಿದರೂ ಕೂಡ ಅದು ತನ್ನ ಗಾತ್ರದಲ್ಲಿ ತುಸು ಹೆಚ್ಚಿಸಿಕೊಳ್ಳಬಹುದೇ ಹೊರತು ನಿಗದಿತ ಮಟ್ಟವನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ.
ಆದ್ದರಿಂದ ಗಿಡ ಮರಗಳನ್ನು ರಕ್ಷಿಸುವ ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು.

ಪರಿಸರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಜೀವದಾಯಿನಿಯಾಗಿರುವ ಆಮ್ಲಜನಕವನ್ನು ನಮಗೆ ಸರಬರಾಜು ಮಾಡುವ, ಗಿಡ ಮರಗಳ ಉಳಿವಿನಲ್ಲಿ ಪರಿಸರದ ರಕ್ಷಣೆಯಲ್ಲಿ ನಮ್ಮ ಬದುಕಿನ ಭವಿಷ್ಯ ಅಡಗಿದೆ ಎಂಬುದನ್ನು ನಾವು ಮರೆಯಬಾರದು.

ಆಹಾರವನ್ನು ಪೋಲು ಮಾಡಬಾರದು. ಒಂದು ರೊಟ್ಟಿ ತಯಾರಾಗಲು ಅದೆಷ್ಟೋ ಸಾವಿರ ಜೋಳದ ಕಾಳುಗಳು ಹಿಟ್ಟಾಗಬೇಕು ಒಂದು ತೆನೆಯಲ್ಲಿ ಜೋಳದ ಕಾಳುಗಳು ಮೂಡಲು ಅದೆಷ್ಟೋ ದಿನಗಳ ಕಾಲಾವಕಾಶ ಬೇಕು. ಹಾಗೆ ಜೋಳದ ಬೀಜವನ್ನು ಬಿತ್ತಿ ಬೆಳೆ ತೆಗೆಯಲು ರೈತನ ಶ್ರಮ ಬೇಕು. ಹೀಗೆ ಹಲವಾರು ಜನರ ಶ್ರಮದ ಫಲವಾಗಿ ನಮ್ಮ ತಟ್ಟೆಗೆ ಬಂದು ಬೀಳುವ ಒಂದು ರೊಟ್ಟಿಯನ್ನು ನಾವು ನಿರ್ಲಕ್ಷತೆಯಿಂದ ಹಾಳು ಮಾಡಿದರೆ ಅದು ನಾವು ಆಹಾರಕ್ಕೆ ಮತ್ತು ಈ ನಿಸರ್ಗಕ್ಕೆ ಮಾಡುವ ಅಪಚಾರವಾಗುತ್ತದೆ. ನಮ್ಮ ಒಂದು ಹೊತ್ತಿನ ಊಟ ಎಷ್ಟೋ ಜನರ ಕನಸಿನ ಆಹಾರವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.

ಕೇವಲ ಮೂರು ನಾಲ್ಕು ದಶಕಗಳ ಹಿಂದೆ ನೀರು ನಮಗೆ ಸುಲಭವಾಗಿ ದಕ್ಕುತ್ತಿರಲಿಲ್ಲ. ಕೆರೆಗಳಲ್ಲಿ ಎಷ್ಟೋ ಗಂಟೆಗಳ ಕಾಲ ತಗ್ಗನ್ನು ತೋಡಿ ಅಲ್ಲಿ ಬರುವ ಒರತೆ ನೀರನ್ನು ಸಣ್ಣ ಪಾತ್ರೆಗಳಲ್ಲಿ ಹಿಡಿದು ಕೊಡಕ್ಕೆ ತುಂಬಿಸಿಕೊಂಡು ಮನೆಗೆ ತಂದು ಸೋಸಿ ಕುಡಿಯುವ ಪರಿಸ್ಥಿತಿ ನಮ್ಮ ಹಿರಿಯರದಾಗಿತ್ತು. ಊರ ಮುಂದಿನ ಹೊಳೆ ಹಳ್ಳಗಳು ಪುರುಷರ ಸ್ನಾನಕ್ಕೆ, ಮನೆಯ ಬಟ್ಟೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು, ದನ ಕರುಗಳ ಕುಡಿಯುವ ನೀರಿಗೆ, ಅವುಗಳ ಮೈ ತೊಳೆಯಲು ಬಳಸಲಾಗುತ್ತಿತ್ತು. ಇದೀಗ ಮನೆಯಲ್ಲಿ ಹಲವಾರು ಬಚ್ಚಲು ಮನೆಗಳಿದ್ದು ನಲ್ಲಿಯನ್ನು ತಿರುವಿದರೆ ನೀರು ಧಾರಾಕಾರವಾಗಿ ಸುರಿಯುತ್ತದೆ. ದಿನದ 24 ಗಂಟೆಯೂ ಇರುವ ನೀರಿನ ಲಭ್ಯತೆ ನಮಗೆ ಅದರ ಮಹತ್ವವನ್ನು ಕಡೆಗಣಿಸುವಂತೆ ಮಾಡಿದೆ ಎಂದರೆ ತಪ್ಪಿಲ್ಲ. ನಮ್ಮ ಮುಂದಿನ ಪೀಳಿಗೆಗೆ ನಾವು ನೀರನ್ನು ಉಳಿಸಲೇಬೇಕಾಗಿರುವುದು ಅತ್ಯವಶ್ಯಕವಾಗಿದೆ.

ಇನ್ನು ಕಾಡನ್ನು ಕಡಿದು ನಾಡನ್ನು ಮಾಡುವ ಪ್ರಕ್ರಿಯೆಯಲ್ಲಿ ಪ್ರತಿ ಹಳ್ಳಿ ನಗರಗಳು ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿವೆ. ನಮ್ಮ ಮಕ್ಕಳಿಗೆ ಮನೆ ಮಾಡಿ ಕೊಡುವ, ಸೈಟುಗಳನ್ನು ಖರೀದಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿರುವ ನಾವುಗಳು ನಮ್ಮ ಮಕ್ಕಳ ಆಹಾರ ಭದ್ರತೆಯ ಕುರಿತು ಕೂಡ ಯೋಚಿಸಬೇಕಾಗಿದೆ. ಎಲ್ಲವೂ ಕಾಂಕ್ರೀಟ್ ಮಯವಾಗಿದ್ದರೆ ನಮ್ಮ ಮಕ್ಕಳು ತಿನ್ನುವುದಾದರೂ ಏನನ್ನು?

ಇನ್ನೊಂದು ರೀತಿಯ ಕೆಡಿಸುವಿಕೆಯನ್ನು ನಾವು ಕಾಣಬಹುದು.. ಬಹಳಷ್ಟು ಬಾರಿ ಹೆಚ್ಚೆಚ್ಚು ಹಣ್ಣು ತರಕಾರಿಗಳನ್ನು, ದವಸ ಧಾನ್ಯಗಳನ್ನು ತಂದು ಅವುಗಳನ್ನು ಶೇಖರಿಸಿ ನಾವು ಇಡುತ್ತೇವೆ. ಹೀಗೆ ಶೇಖರಿಸಿ ಇಟ್ಟ ಎಷ್ಟೋ ಪದಾರ್ಥಗಳು ಬಳಸದೆ ಕೊಳೆತು ಹೋಗುವ ಸಂಭವಗಳು ಹೆಚ್ಚು. ತಂದು ಬಳಸದೆ ಕೆಡಿಸುವುದು ಒಂದು ಕಡೆಯಾದರೆ ಮತ್ತೊಂದೆಡೆ ಅಡುಗೆ ಮಾಡಿ ಅದನ್ನು ತಿನ್ನದೇ ಕೆಡಿಸುವುದು. ಇದರ ಜೊತೆ ಮತ್ತೊಂದು ತಪ್ಪನ್ನು ನಾವು ಕಾಣಬಹುದು ಅದೆಂದರೆ ಬೇಕು ಬೇಕೆಂದು ಹೆಚ್ಚೆಚ್ಚು ಆಹಾರವನ್ನು ತಟ್ಟೆಗೆ ಬಡಿಸಿಕೊಂಡು ಅದನ್ನು ತಿನ್ನದೇ ತಟ್ಟೆಯಲ್ಲಿ ಹಾಗೆಯೇ ಬಿಟ್ಟು ಕೈ ತೊಳೆದು ಆಹಾರವನ್ನು ಪೋಲು ಮಾಡುತ್ತೇವೆ. ನಮ್ಮ ಆಹಾರವನ್ನು ನಾವು ಖರೀದಿಸುತ್ತೇವೆ ನಿಜ ಆದರೆ ಆಹಾರವನ್ನು ನಿಸರ್ಗದ ಸಂಪನ್ಮೂಲ ಎಂದು ನಾವು ಭಾವಿಸಿರುವುದರಿಂದ ನಿಸರ್ಗದ ಸಂಪನ್ಮೂಲವನ್ನು ಬಳಸಲು ನಮಗೆ ಹಕ್ಕಿದೆಯೇ ಹೊರತು ಅದನ್ನು ಹಾಳು ಮಾಡಲು ಅಲ್ಲ ಎಂಬ ಸೂಕ್ಷ್ಮಪ್ರಜ್ಞೆ ನಮಗೆ ಇರಬೇಕು.

ನಿಸರ್ಗ ಸಂಪತ್ತನ್ನು ನಾವು ರಕ್ಷಿಸಬೇಕು. ಈ ನಿಟ್ಟಿನಲ್ಲಿ ನಾವು ಉಳಿತಾಯ ಪ್ರವೃತ್ತಿಯನ್ನು ಕಲಿಯುತ್ತೇವೆ. ನಮ್ಮ ಪರಿಸರವು ನಮಗೆ ನಮ್ಮ ಹಕ್ಕುಗಳ ಜೊತೆ ಜೊತೆಗೆ ನಮ್ಮ ಕರ್ತವ್ಯವನ್ನು ಕೂಡ ನೆನಪಿಸುತ್ತದೆ. ನಮ್ಮ ಜೀವದಾಯಿನಿಯಾಗಿರುವ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವು ಅಹರ್ನಿಶಿ ಶ್ರಮಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಮನುಷ್ಯ ಮಾತ್ರರಾದ ನಾವುಗಳು ನಿಸರ್ಗದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜೀವಿಗಳ ಪ್ರಭೇದಗಳನ್ನು ಉಳಿಸುವ, ರಕ್ಷಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಕರ್ತವ್ಯಬದ್ಧರಾಗಬೇಕು ಎಂಬುದನ್ನು ಮಕ್ಕಳಿಗೆ ತಿಳಿ ಹೇಳುವ ಮತ್ತು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಅರಿವು ಮೂಡಿಸಬೇಕು.

ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ, ಗದಗ

Share This Article
error: Content is protected !!
";