ಸಿರುಗುಪ್ಪ : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಲು ಭಾರತೀಯರನ್ನು ಒಗ್ಗೂಡಿಸಲು ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ರವರು ಸಾರ್ವಜನಿಕವಾಗಿ ಗಣೇಶ ಹಬ್ಬದ ಆಚರಣೆ ಆರಂಭಿಸಿದರು. ಇದು ಸರ್ವ ಜನಾಂಗದ ಒಗ್ಗಟ್ಟಿನ ಐಕ್ಯತೆಯ ಪ್ರತೀಕವಾಗಿತ್ತು. ನೀವು ಆಚರಿಸುವ ಶ್ರೀ ಗೌರಿ ಗಣೇಶ ಹಬ್ಬವನ್ನು ಪೊಲೀಸ್ ಇಲಾಖೆಯ ನಿಯಮಗಳಿಗನುಸಾರವಾಗಿ ಸೂಕ್ತ ಕ್ರಮಗಳೊಂದಿಗೆ ಶಾಂತಿಯುತವಾಗಿ ಆಚರಿಸಬೇಕು. ಭಾವೈಕ್ಯತೆಯನ್ನು ಕಾಪಾಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ. ಶಾಂತಿಯುತವಾದ ಹಬ್ಬದ ಆಚರಣೆಗೆ ಇಲಾಖೆಯ ಸಹಕಾರ ಯಾವಾಗಲೂ ಇರುತ್ತದೆ. ಗೌರಿ ಗಣೇಶ ಹಬ್ಬ ಹಾಗೂ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಶಾಂತಿಯ ಹಿತದೃಷ್ಟಿಯಿಂದ ಡಿ.ಜೆ. ಹಾಗೂ ಹೈ ಬೇಸ್ ಸೌಂಡ್ ಸಿಸ್ಟಮ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಗಲಾಟೆ, ಗುಂಪು ಘರ್ಷಣೆ, ತೊಂದರೆಗಳಾಗದಂತೆ ಹಬ್ಬ ನಡೆಯಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡು ಮತ್ತು ನೃತ್ಯಗಳು ಕೋಮು ಸೌಹಾರ್ದತೆಗೆ ಧಕ್ಕೆ ತರದಂತೆ ಇರಲಿ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಕೋಮು ಸೌಹಾರ್ದತೆ, ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ. ಪನ್ನೇಕರ್ ರವರು ತಿಳಿಸಿದರು.
ಸಿರುಗುಪ್ಪ ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿರುಗುಪ್ಪ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತ ರಾಜೇಶ್ ರವರು ಗಣೇಶ ಹಬ್ಬವನ್ನು ಶಾಂತಿ ಸಹ ಬಾಳ್ವೆಯೊಂದಿಗೆ ಆಚರಿಸಿ, ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ಮಾಡುವವರು ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಅನುಮತಿ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಏಕ ಗವಾಕ್ಷಿ ಯೋಜನೆ ಅಡಿ ಒಂದೇ ಕಡೆ ಅನುಮತಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ಕಟ್ಟಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ. ಆದಷ್ಟು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯ ಬೇಕು ಎಂದರು.

ಸಿರುಗುಪ್ಪ ಸಿ.ಪಿ.ಐ ವೈ.ಹನುಮಂತಪ್ಪ ರವರು ಪ್ರಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತೆ ರಸ್ತೆಗೆ ಅಡ್ಡಲಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಇಲಾಖೆಯ ಅನುಮತಿಯನ್ನು ಪಡೆಯಲೇಬೇಕು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಐದು ಜನ ವ್ಯವಸ್ಥಾಪಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗಣೇಶ ಪ್ರತಿಷ್ಠಾಪಿಸುವ ದಿನಗಳ ಸಂಖ್ಯೆಯ ಮಾಹಿತಿಯನ್ನು ಸಲ್ಲಿಸಬೇಕು. ಸೂಕ್ತವಾದ ಬೆಳಕಿನ ವ್ಯವಸ್ಥೆ ಮಾಡಬೇಕು. ದರ್ಶನಕ್ಕಾಗಿ ಮಹಿಳೆಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಇರಬೇಕು. ದೇಶದ ಭಾವೈಕ್ಯತೆಗೆ ಧಕ್ಕೆತರುವ ಹಾಡುಗಳನ್ನು ಧ್ವನಿವರ್ಧಕದಲ್ಲಿ ಹಾಕುವಂತಿಲ್ಲ. ಇಲಾಖೆ ಸೂಚಿಸಿರುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಹಬ್ಬವನ್ನು ಆಚರಿಸಬೇಕು ಎಂದರು.
ಸಿರುಗುಪ್ಪ ಉಪ ವಿಭಾಗದ ಡಿ.ವೈ.ಎಸ್ಪಿ ಮಾಲತೇಶ ಕೂನಬೇವು ಮಾತನಾಡಿ ಗಣೇಶ ಹಬ್ಬವನ್ನು ಇಲಾಖೆಯ ನಿಯಮಗಳನ್ನು ಪಾಲನೆ ಮಾಡಿ ಆಚರಿಸಬೇಕು. ಧ್ವನಿವರ್ಧಕದಿಂದ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕೋಮು ಸೌಹಾರ್ದತೆಯನ್ನು ಕದಡುವ ಯಾವುದೇ ಹಾಡು, ನೃತ್ಯಗಳ ಪ್ರದರ್ಶನ ಇರಬಾರದು. ಸಾಮಾಜಿಕ ಮಾಧ್ಯಮದಲ್ಲಿ ಕೋಮು ಸೌಹಾರ್ದತೆ ಕದಡುವ ಯಾವುದೇ ಅಂಶಗಳನ್ನು ಪ್ರಚಾರ ಮಾಡುವಂತಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆ ಎಲ್ಲಾ ನಿಟ್ಟಿನಲ್ಲಿ ನಿಗಾ ವಹಿಸಿರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಹಬ್ಬವನ್ನು ಆಚರಣೆ ಮಾಡಿ, ಅನವಶ್ಯಕವಾಗಿ ಶಾಂತಿ ವ್ಯವಸ್ಥೆಗೆ ಧಕ್ಕೆ ತಂದು ತಮ್ಮ ಭವಿಷ್ಯವನ್ನು ಹಾಳು ಮಾಡಿ ಕೊಳ್ಳುವಂತೆ ಆಗಬಾರದು. ಶಾಂತಿಯುತ ಆಚರಣೆಗೆ ನಮ್ಮ ಇಲಾಖೆಯ ಸಹಕಾರ ಇರುತ್ತದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ಸದರಿ ಸಭೆಯಲ್ಲಿ ಸಿರುಗುಪ್ಪ ತಹಶೀಲ್ದಾರರಾದ ಗೌಸಿಯಾ ಬೇಗಂ, ತೆಕ್ಕಲಕೋಟೆ ಸಿ.ಪಿ.ಐ ಚಂದನ್ ಗೋಪಾಲ್, ಎಸ್.ಐ.ಗಳಾದ ಪರಶುರಾಮ್, ಸದ್ದಾಂ ಹುಸೇನ್, ಕುಮಾರಸ್ವಾಮಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ವಲಯ ಅರಣ್ಯ ಅಧಿಕಾರಿ ಬಸವನಗೌಡ, ನಗರಸಭೆ, ಕೆ.ಇ.ಬಿ, ಅಗ್ನಿಶಾಮಕ ದಳ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಹ ಪಡೆಯಲಾಯಿತು. ಸಭೆಯಲ್ಲಿ ವಿವಿಧ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು