ಸಿರುಗುಪ್ಪ, ಸೆ.12: ತಾಲೂಕಿನ ಬುದೂಗುಪ್ಪ ಗ್ರಾಮದಲ್ಲಿ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ, ದಾಖಲೆಗಳಿಲ್ಲದೆ ಹೊರರಾಜ್ಯಕ್ಕೆ ಸಾಗಿಸಲು ಸಿದ್ಧಪಡಿಸಿದ್ದ ಆರೋಪದ ಮೇರೆಗೆ ಕೃಷಿ ಅಧಿಕಾರಿಗಳು ಶುಕ್ರವಾರ ಮಿಂಚಿನ ದಾಳಿ ನಡೆಸಿ ₹1,80,880 ಮೌಲ್ಯದ 680 ಚೀಲ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.
ಬುದೂಗುಪ್ಪ ಗ್ರಾಮದ ಆನು ಆಗೋ ಕೆಮಿಕಲ್ಸ್ಗೆ ಸೇರಿದ ಸ್ಥಳದಲ್ಲಿ ರಸಗೊಬ್ಬರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದ ಕೃಷಿ ಇಲಾಖೆ ಅಧಿಕಾರಿಗಳು, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಲಾರಿಯಲ್ಲಿ ತುಂಬಲಾಗಿದ್ದ ವಿವಿಧ ರಸಗೊಬ್ಬರಗಳ 680 ಚೀಲಗಳು ಪತ್ತೆಯಾಗಿವೆ.
ಅಧಿಕಾರಿಗಳ ಪ್ರಾಥಮಿಕ ತನಿಖೆಯಂತೆ, ಆನು ಆಗೋ ಕೆಮಿಕಲ್ಸ್ನ ರಂಗನಾಥ ರೆಡ್ಡಿ ಅವರು ತೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ರಸಗೊಬ್ಬರಗಳನ್ನು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರೈತರಿಗೆ ಸರ್ಕಾರದ ನಿಯಮಾನುಸಾರ ದೊರೆಯಬೇಕಾದ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಹೊರರಾಜ್ಯಕ್ಕೆ ಸಾಗಾಟ ಮಾಡುವುದನ್ನು ತಡೆಯಲು ಕೃಷಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಕ್ರಮ ದಾಸ್ತಾನು ಹಾಗೂ ಸಾಗಾಟ ಕಂಡುಬಂದಲ್ಲಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ದಾಳಿಯಲ್ಲಿ ಜಾಗೃತದಳದ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ದಯಾನಂದ ಎಂ., ಬಳ್ಳಾರಿ ತಾಂತ್ರಿಕ ಉಪ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಮನೋಹರ ರೆಡ್ಡಿ ಹಾಗೂ ಕರೂರು ಗ್ರಾಮದ ಕೃಷಿ ಅಧಿಕಾರಿ ಪರಮೇಶ್ವರ ರೆಡ್ಡಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು