ಕಾರಟಗಿ07: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಇಂದಿರಾನಗರದಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಕಕ್ಕರಗೋಳ ಗ್ರಾಮದ ಒಂದೇ ಕುಟುಂಬದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಕಕ್ಕರಗೋಳದಲ್ಲಿರುವ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗುಡ್ಡ ಕುಸಿತದಲ್ಲಿ ಮಲ್ಲಿಕಾರ್ಜುನ, ಅವರ ಪತ್ನಿ ನಾಗವೇಣಿ ಹಾಗೂ ಪುತ್ರ ಸಂತೋಷ ಮೃತಪಟ್ಟಿದ್ದರು. ದುರಂತದಿಂದ ಆಘಾತಕ್ಕೊಳಗಾಗಿರುವ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಸಚಿವರು, ಸಂತ್ರಸ್ತರ ನೋವನ್ನು ಆಲಿಸಿ ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಅವರು, “ಇಂತಹ ದುರ್ಘಟನೆ ನಡೆಯಬಾರದಿತ್ತು. ಆದರೆ ನಡೆದುಹೋಗಿದೆ. ಕುಟುಂಬಕ್ಕೆ ಉಂಟಾಗಿರುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ.ಈಗಾಗಲೇ ಸರಕಾರದಿಂದ ನೆರವು ಒದಗಿಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ ” ಎಂದು ತಿಳಿಸಿದರು.
ಪುತ್ರಿಯರ ಭವಿಷ್ಯಕ್ಕೆ ಸರಕಾರದ ನೆರವು :
ಮೃತ ಮಲ್ಲಿಕಾರ್ಜುನ ಅವರ ಪುತ್ರಿಯರಾದ ಮಹಾಲಕ್ಷ್ಮಿ ಮತ್ತು ದಿವ್ಯಾ ಅವರ ಭವಿಷ್ಯದ ಹಿತದೃಷ್ಟಿಯಿಂದ ಇಬ್ಬರಿಗೂ ತಲಾ 7.5 ಲಕ್ಷದಂತೆ ಒಟ್ಟು 15 ಲಕ್ಷ ಹಣವನ್ನು ಸರಕಾರದಿಂದ ನೀಡಲಾಗುವುದು. ಈ ಹಣವನ್ನು ಶೀಘ್ರವೇ ಅಧಿಕಾರಿಗಳ ಮೂಲಕ ಮಕ್ಕಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಮಕ್ಕಳ ಶಿಕ್ಷಣಕ್ಕೂ ಸರಕಾರ ಆದ್ಯತೆ ನೀಡಲಿದೆ. ಕುಟುಂಬಸ್ಥರು ಒಪ್ಪಿಗೆ ನೀಡಿದಲ್ಲಿ ಮಕ್ಕಳನ್ನು ಬಾಲಮಂದಿರಕ್ಕೆ ದಾಖಲಿಸಿ, ಅವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಸಚಿವರು ಹೇಳಿದರು.
ಇದಲ್ಲದೆ, ಮಕ್ಕಳಲ್ಲಿ ಒಬ್ಬರಿಗೆ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯಡಿ 1 ಲಕ್ಷ ನೆರವು ದೊರೆಯಲಿದೆ. ಪ್ರಾಯೋಜಕತ್ವ ಯೋಜನೆಯಡಿ ಇಬ್ಬರು ಮಕ್ಕಳಿಗೂ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ತಲಾ 3 ಸಾವಿರ ನೆರವು ನೀಡಲಾಗುವುದು ಎಂದು ತಿಳಿಸಿದರು.
ಮನೆ ನಿರ್ಮಾಣಕ್ಕೂ ಭರವಸೆ : ಕುಟುಂಬಕ್ಕೆ ವಾಸದ ಸಮಸ್ಯೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು, ಮುಖಂಡರಾದ ಶರಣೇಗೌಡ ಮಾಲಿ ಪಾಟೀಲ್, ಶರಣಪ್ಪ ಸಾಹುಕಾರ, ಹನುಮಂತಪ್ಪ ಶಾಲಿಗನೂರು, ಚಿಕ್ಕ ಅಯ್ಯಪ್ಪ ಸಂಗಟಿ, ಮುದಿಯಪ್ಪ ನಾಯಕ, ಬಸವರಾಜ ಸಾಹುಕಾರ,ತಿಮ್ಮನಗೌಡ ವಕೀಲರು ಬಿ. ಬಸವರಾಜಪ್ಪ, ಶಿವರೆಡ್ಡಿ ನಾಯಕ, ಜನಗಂಡೆಪ್ಪ ಪೂಜಾರಿ ಹನುಮಂತಪ್ಪ ನಾಯಕ, ಸೇರಿ ಅನೇಕ ಮುಖಂಡರು, ಮೃತ ಮಲ್ಲಿಕಾರ್ಜುನ ಕುಟುಂಬಸ್ಥರು ಇದ್ದರು.