ಹಗರಿಬೊಮ್ಮನಹಳ್ಳಿ, ಏಪ್ರಿಲ್ 30:
ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ತೀವ್ರ ರಾಜಕೀಯ ಕಾಳಗ ನಡೆಯುತ್ತಿದ್ದಂತೆ, ಕೊನೆಯ ಕ್ಷಣದವರೆಗೂ ಕುತೂಹಲ ಕೆರಳಿಸಿದ ಪೈಪೋಟಿಯಲ್ಲಿ ಕಾಂಗ್ರೆಸ್ ಪಕ್ಷದ ರೇಷ್ಮಾ ಸಿಕಂದರ್ ಅವರು ಮತ್ತೆ ಅಧಿಕಾರದ ಕುರ್ಚಿ ಅಲಂಕರಿಸಿದ್ದಾರೆ.
ಒಟ್ಟು 23 ಸದಸ್ಯರ ಪುರಸಭೆಯಲ್ಲಿ ಕಾಂಗ್ರೆಸ್ ತನ್ನ ಬಲವನ್ನು ಸಾಬೀತುಪಡಿಸಿ 13 ಮತಗಳನ್ನು ಕಲೆಹಾಕಿತು. ಬಿಜೆಪಿ ಪಾಳಯದಲ್ಲಿ 3 ಸದಸ್ಯರ ಗೈರುಹಾಜರಾತಿ ತೀವ್ರ ಹಿನ್ನಡೆಯಾಗಿ ಪರಿಣಮಿಸಿ, ಸುರೇಶ್ ಬಣಕಾರ ಅವರಿಗೆ ಕೇವಲ 9 ಮತಗಳು ಲಭಿಸಿ ಸೋಲು ಅನುಭವಿಸಬೇಕಾಯಿತು.
ಅಂತಿಮ ಕ್ಷಣದವರೆಗೂ ಟೆನ್ಷನ್!
ಮತದಾನದ ಮೊದಲು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎರಡೂ ಪಾಳಯಗಳು ತೀವ್ರ ಲಾಬಿ ನಡೆಸಿದವು. ಕೊನೆಗೂ ಕಾಂಗ್ರೆಸ್ ತನ್ನ ಬಲವನ್ನು ಉಳಿಸಿಕೊಂಡು ಗೆಲುವಿನ ಮುತ್ತಿಗೆ ಹಾಕಿತು.
ಪೋಲಿಸ್ ಕಾವಲು – ಕಣ್ಣಿಗೆ ಕಟ್ಟಿದ ಭದ್ರತೆ
ಚುನಾವಣೆ ವೇಳೆ ಯಾವುದೇ ಗಲಭೆ ಉಂಟಾಗದಂತೆ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮತ್ತು ಸಿಪಿಐ ವಿಕಾಸ್ ಲಮಾಣಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ, ಬಿಜೆಪಿಯಲ್ಲಿ ನಿರಾಸೆ
ಗೆಲುವಿನೊಂದಿಗೆ ಕಾಂಗ್ರೆಸ್ ಮುಖಂಡರು ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಬಿಜೆಪಿ ಪಾಳಯದಲ್ಲಿ ನಿರಾಸೆಯ ವಾತಾವರಣ ಕಂಡುಬಂತು. ಅನೇಕ ಪ್ರಮುಖ ಮುಖಂಡರು ಸ್ಥಳದಲ್ಲಿ ಹಾಜರಿದ್ದು ರಾಜಕೀಯ ಚಟುವಟಿಕೆಗಳು ಜೋರಾಗಿದ್ದವು

