ಒಬ್ಬ ಬರಹಗಾರ ಎಷ್ಟು ಪುಸ್ತಕ ಬರೆಯಬಹುದು? ಹತ್ತು, ಇಪ್ಪತ್ತು, ತುಂಬಾ ಹೆಚ್ಚೆಂದರೆ ನೂರು. ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಬೆ.ಗೋ. ರಮೇಶ್ ಎಂಬ ಹೆಸರೊಂದು ಈ ಎಲ್ಲ ಮಿತಿಗಳನ್ನು ಮೀರಿ ನಿಂತಿದೆ. ಅವರು ಬರೆದು ಪ್ರಕಟಿಸಿದ ಕೃತಿಗಳ ಸಂಖ್ಯೆ ಬರೋಬ್ಬರಿ ಎಂಟುನೂರಿನ ಸಮೀಪ. ಯಂತ್ರದಿAದ ತಂತ್ರಜ್ಞಾನದವರೆಗೆ, ಕೂದಲಿನಿಂದ ಕೋವಿಯವರೆಗೆ, ಸಾಮಾಜಿಕದಿಂದ ವೈದ್ಯಕೀಯದವರೆಗೆ, ನಿಘಂಟಿನಿAದ ಕಥೆ-ಕಾದಂಬರಿವರೆಗೆ – ಅವರು ಸ್ಪರ್ಶಿಸದ ಕ್ಷೇತ್ರವೇ ಇಲ್ಲ. ವೃತ್ತಿಯಿಂದ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದರೂ, ಪ್ರವೃತ್ತಿಯಿಂದ ಅವರು ಸಾಹಿತಿ, ಗಮಕಿ, ಪ್ರಕೃತಿ ಚಿಕಿತ್ಸಕ ಎಂಬ ಹತ್ತುಮುಖ ವ್ಯಕ್ತಿತ್ವವನ್ನು ಹೊಂದಿದ್ದಾರೆ. ನಾವಿನ್ನೂ ಇಂದಿಗೂ ೮ ಪುಸ್ತಕಗಳನ್ನು ಕೂಡ ಸರಿಯಾಗಿ ಓದಿದ್ದೇವೋ ಇಲ್ಲವೋ ಎಂಬ ಅನುಮಾನ ನಮ್ಮೊಳಗಿದೆ. ಆದರೆ ಇಲ್ಲೊಬ್ಬ ಕನ್ನಡದ ಬರಹಗಾರ, ಬರೆದುಬಿಟ್ಟಿರುವ ಪುಸ್ತಕಗಳ ಸಂಖ್ಯೆ ಎಂಟುನೂರಿನ ಸಮೀಪ! ನಂಬಲಾದೀತೆ? ಖಂಡಿತ ನಂಬಲೇಬೇಕು.
ಅಷ್ಟೊAದು ಅಪಾರ ಕೃತಿಗಳನ್ನು ಸೃಷ್ಟಿಸುವಲ್ಲಿ ಬೆ.ಗೋ. ರಮೇಶ್ ಅವರಲ್ಲಿ ಎಷ್ಟೊಂದು ಶ್ರದ್ಧೆ, ಪರಿಶ್ರಮ, ತ್ಯಾಗ, ಸಾಹಿತ್ಯಾಭಿಮಾನ ತುಂಬಿ ತುಳುಕುತ್ತಿದೆಯೋ ಅದನ್ನು ಕಲ್ಪನೆಗೂ ತರಲಾಗದು. ನಿಜವಾಗಿಯೂ ಅವರು ಗಿನ್ನಿಸ್ ದಾಖಲೆಗಳಲ್ಲಿ ಸೇರಬಹುದಾದ ಸಾಹಿತ್ಯದ ಅದ್ಭುತ ಶಿಲ್ಪಿ.
ಕೆಲವರು ಬದುಕಿನಲ್ಲಿ ಒಂದೇ ವೃತ್ತಿಗೆ ಅಂಟಿಕೊಳ್ಳುತ್ತಾರೆ, ಆದರೆ ಕೆಲವರು ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯ ಮೂಲಕವೂ ಅಪಾರ ಸಾಧನೆ ಮಾಡುತ್ತಾರೆ. ಇಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಕನ್ನಡದ ಖ್ಯಾತ ಸಾಹಿತಿ, ಗಮಕಿ ಮತ್ತು ಎಂಜಿನಿಯರ್ ಬೆ. ಗೋ. ರಮೇಶ್ ಅಗ್ರಗಣ್ಯರು. ವೃತ್ತಿಯಿಂದ ಎಂಜಿನಿಯರ್ ಆಗಿದ್ದರೂ, ತಮ್ಮ ಪ್ರವೃತ್ತಿಯಾದ ಬರವಣಿಗೆಯನ್ನು ಅಕ್ಷರಶಃ ಉಸಿರಾಗಿಸಿಕೊಂಡವರು. ೮೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಇವರು, ತಮ್ಮ ಬಹುಮುಖಿ ಪ್ರತಿಭೆಯಿಂದಲೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದಾರೆ. ಸಾಹಿತ್ಯದಲ್ಲಿ ಇಂತಹ ಅಪಾರ ಉತ್ಪಾದನೆ ತೀರಾ ಅಪರೂಪ. ಅಷ್ಟು ಕೃತಿಗಳನ್ನು ಬರೆಯಲು ಬೇಕಾದ ಶ್ರಮ, ಸಮಯ, ಅಭ್ಯಾಸ, ಕುತೂಹಲ – ಇವುಗಳೆಲ್ಲ ಒಟ್ಟಾಗಿ ಅವರ ವ್ಯಕ್ತಿತ್ವವನ್ನು ವಿಶಿಷ್ಟಗೊಳಿಸಿದೆ.
ಜನನ ಮತ್ತು ಬಾಲ್ಯ : ೧೯೪೫ರ ಆಗಸ್ಟ್ ೨೨ರಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ದೊಡ್ಡ ಹನಸೋಗೆ ಎಂಬ ಗ್ರಾಮದಲ್ಲಿ ಅವರು ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ರಮೇಶ್ ಅವರ ಬಾಲ್ಯ ಸಹಜತೆ, ಸರಳತೆ, ಕಷ್ಟ ಪರಿಶ್ರಮಗಳ ನೆನಪಿನಿಂದ ಕೂಡಿತ್ತು. ಶಾಲಾ ಜೀವನ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದ್ದು, ಬಳಿಕ ಸರ್ಕಾರಿ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಓದಿದರು. ಜ್ಞಾನಾಸಕ್ತಿಯು ಅವರನ್ನು ಹಾಸನದ ಮಲ್ನಾಡ್ ಎಂಜಿನಿಯರಿAಗ್ ಕಾಲೇಜಿಗೆ ಕರೆದೊಯ್ದಿತು. ಅಲ್ಲಿ ಅವರು ಬಿ.ಇ. ಪದವಿ ಪಡೆದರು.
ವೃತ್ತಿಜೀವನದ ಹಾದಿ : ಅಭ್ಯಾಸ ಮುಗಿದ ತಕ್ಷಣ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ವಲ್ಪಕಾಲ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ಪವರ್ ಕಾರ್ಪೋರೇಷನ್ ಸೇರಿ ಅಲ್ಲಿ ಸಹಾಯಕ ಇಂಜಿನಿಯರ್, ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗಳಲ್ಲಿ ಶ್ರಮಿಸಿದರು. ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾದರು. ತಂತ್ರಜ್ಞರ ವೃತ್ತಿಯಲ್ಲಿ ತೊಡಗಿದ್ದರೂ, ಅವರ ಮನಸ್ಸು ಯಾವಾಗಲೂ ಬರವಣಿಗೆಯತ್ತಲೇ ತಿರುಗಿತ್ತು.
ಬರಹದ ಹಾದಿ : “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವಂತೆ, ಬೆ.ಗೋ. ರಮೇಶ್ ಅವರ ಬರಹದ ಲೋಕದಲ್ಲಿ ಸ್ಪರ್ಶವಾಗದ ವಿಷಯವೇ ಇಲ್ಲ. ಮಕ್ಕಳ ಸಾಹಿತ್ಯದಿಂದ ಪ್ರೌಢ ಸಾಹಿತ್ಯದವರೆಗೆ, ವೈದ್ಯಕೀಯದಿಂದ ವಿಜ್ಞಾನದವರೆಗೆ, ಕವಿಗಳ ಜೀವನದಿಂದ ವಾಸ್ತುಶಿಲ್ಪದವರೆಗೆ – ಎಲ್ಲದರ ಮೇಲೂ ಅವರು ಬರೆಯುತ್ತಾ ಬಂದಿದ್ದಾರೆ.
ಮಕ್ಕಳಿಗೆ : ಓದಲು ಸುಲಭವಾಗುವಂತೆ ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ – ಹಿಪೊಕ್ರೆಟಿಸ್, ಗ್ಯಾಲನ್, ಜಗದೀಶ್ ಚಂದ್ರ ಬೋಸ್, ಯೂಕ್ಲಿಡ್ ಮುಂತಾದವರ ಕುರಿತ ಕೃತಿಗಳು ಅದರಲ್ಲಿ ಪ್ರಮುಖ. ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರು ಕುರಿತು ಮಕ್ಕಳಿಗೇನು ತಿಳಿಯಬೇಕು ಎಂಬುದನ್ನು ಮನನಮಾಡಿ, ಅವರ ಬಗ್ಗೆ ಸುಲಭ ಶೈಲಿಯಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕವಿಗಳು, ಕಲಾವಿದರು, ರಾಜಕೀಯ ನಾಯಕರು – ಎಲ್ಲರ ಜೀವನದ ಕುರಿತಾದ ಪುಸ್ತಕಗಳು ಓದುಗರಿಗೆ ಪರಿಚಿತ. ಆರೋಗ್ಯ, ಪ್ರಕೃತಿ ಚಿಕಿತ್ಸೆ, ಔಷಧೋಪಚಾರ, ಯೋಗ, ಆಹಾರ ಪದ್ಧತಿ ಇವುಗಳ ಕುರಿತಾದ ಹಲವಾರು ಗ್ರಂಥಗಳು ಜನಸಾಮಾನ್ಯರಿಗೆ ಮಾರ್ಗದರ್ಶಕವಾಗಿವೆ.
ಪ್ರೌಢರಿಗಾಗಿ: ಪ್ರಬಂಧ ಸಂಕಲನಗಳು, ಸೂಕ್ತಿಗಳು, ಸುಭಾಷಿತಗಳು, ನಿಘಂಟುಗಳು, ಇತಿಹಾಸದ ಕೃತಿಗಳು, ಭಾರತದ ನದಿಗಳು, ಕರ್ನಾಟಕದ ದೇವಾಲಯಗಳು, ವಾಸ್ತುಶಿಲ್ಪ ಕುರಿತ ಅಧ್ಯಯನಗಳು – ಇವುಗಳ ಮೂಲಕ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸಿದ್ದಾರೆ.
ಬರವಣಿಗೆಯ ಶೈಲಿ : ಅವರ ಬರವಣಿಗೆಯ ವೈಶಿಷ್ಟ್ಯವೆಂದರೆ ಸರಳತೆ. ಓದುಗರಲ್ಲಿ ಆಸಕ್ತಿ ಮೂಡಿಸುವ ರೀತಿಯಲ್ಲಿ ಅವರು ಬರೆಯುತ್ತಾರೆ. ಮಕ್ಕಳಿಗಾಗಲಿ ಪ್ರೌಢರಿಗಾಗಲಿ ಅರ್ಥವಾಗದ ಅತಿಯಾದ ಗಹನತೆ, ಗಟ್ಟಿತನ ಅವರ ಬರಹದಲ್ಲಿ ಕಾಣದು. ಬದಲಿಗೆ, ಓದುಗರಿಗೆ “ಇನ್ನೂ ಮುಂದೆ ಓದಬೇಕು” ಎನ್ನುವ ಕುತೂಹಲ ಮೂಡಿಸುವ ಶೈಲಿ ಅವರದು.
ಇತರೆ ಕಾರ್ಯಕ್ಷೇತ್ರಗಳು : ಸಾಹಿತ್ಯ ಮಾತ್ರವಲ್ಲದೆ, ಅವರು ಗಮಕ ಕಲಾವಿದರೂ ಆಗಿದ್ದಾರೆ. ಗಮಕ ಪಾರಂಪರ್ಯದ ಉಳಿವುಗಾಗಿ ಅವರು ಶ್ರಮಿಸಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದು ಅದಕ್ಕೆ ಸಾಕ್ಷಿ. ಜೊತೆಗೆ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಕಾರ್ಯನಿರ್ವಹಣಾಧಿಕಾರಿಯಾಗಿ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ.
ಗೌರವಗಳು ಮತ್ತು ಪ್ರಶಸ್ತಿಗಳು : ಬೆ.ಗೋ. ರಮೇಶ್ ಅವರ ಸೇವೆಯನ್ನು ಸಮಾಜ ಗುರುತಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಸುವರ್ಣ ಸ್ವಾತಂತ್ರೊö್ಯÃತ್ಸವ ಪ್ರಶಸ್ತಿ, ಡೆಪ್ಯೂಟಿ ಚನ್ನಬಸಪ್ಪ ಪ್ರಶಸ್ತಿ, ಸಪ್ನಾ ರಾಜ್ಯೋತ್ಸವ ಪ್ರಶಸ್ತಿ, ಡಾ.
ರಾಜ್‌ಕುಮಾರ್ ಸದ್ಭಾವನಾ ಪುರಸ್ಕಾರ, ಕರ್ನಾಟಕ ವಿಭೂಷಣ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ, ನವರತ್ನ ಪ್ರಶಸ್ತಿ, ಕುವೆಂಪು ಕವಿರತ್ನ, ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕುರತ್ನ ಪ್ರಶಸ್ತಿ, ಜಯಪ್ರಕಾಶ ನಾರಾಯಣ ಗೌರವ ಮುಂತಾದ ಅನೇಕ ಪುರಸ್ಕಾರಗಳು. ಈ ಪ್ರಶಸ್ತಿಗಳು ಅವರ ಬರಹದ ಶ್ರೀಮಂತಿಕೆಗೆ ಸಾಕ್ಷಿ.
ಬೆ.ಗೋ. ರಮೇಶ್ ಅವರ ಬರಹವನ್ನು ನೋಡಿದರೆ, ಅದು ಕೇವಲ ಪುಸ್ತಕಗಳ ಸಂಖ್ಯೆಯ ವಿಷಯವಲ್ಲ; ಅದು ಬರೆಯುವ ಒಲವಿನ, ಜ್ಞಾನದ, ಪರಿಶ್ರಮದ ಪ್ರತೀಕ. ಇಂಜಿನಿಯರ್ ವೃತ್ತಿಯಲ್ಲಿ ತೊಡಗಿದ್ದರೂ, ಸಾಹಿತ್ಯವನ್ನು ಅವರು ಜೀವನದ ಅನಿವಾರ್ಯ ಅಂಗವನ್ನಾಗಿ ಮಾಡಿಕೊಂಡರು. ಅವರು ಬರೆದ ಪ್ರತಿಯೊಂದು ಕೃತಿಯೂ ಓದುಗರಿಗೆ ಜ್ಞಾನ, ಚಿಂತನೆ, ಮಾರ್ಗದರ್ಶನ ನೀಡುತ್ತಿದೆ. “ಸಾಧನೆಗೆ ಸಮಯದ ಕೊರತೆ ಎಂದೇ ಇಲ್ಲ. ಇಚ್ಛಾಶಕ್ತಿ, ಶ್ರಮ, ಆಸಕ್ತಿ ಇದ್ದರೆ ಬದುಕು ಸಾಹಿತ್ಯದ ಹಬ್ಬವಾಗಬಹುದು.” ಇಂಜಿನಿಯರ್ ಆಗಿ ಯಶಸ್ಸು ಗಳಿಸಿದರೂ, ತಮ್ಮ ಪ್ರವೃತ್ತಿಯನ್ನು ಎಂದೂ ಮರೆಯದೆ, ಸಾಹಿತ್ಯದ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಬೆ. ಗೋ. ರಮೇಶ್ ಅವರು ಕನ್ನಡ ನಾಡಿನ ಹೆಮ್ಮೆಯ ಪುತ್ರ. ಅವರ ಜೀವನ ಮತ್ತು ಸಾಧನೆಗಳು ನಮಗೆಲ್ಲಾ ಒಂದು ದೊಡ್ಡ ಪಾಠ.
ಡಾ. ಪ್ರಸನ್ನ ದೇವರ ಮಠ ಅನಿಲಕುಮಾರ್, ಮಾಗಳ
ಪದವೀಧರ ಪ್ರಾಥಮಿಕ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದೇನೂರು,
ಹೂವಿನಹಡಗಲಿ, ವಿಜಯನಗರ ಜಿಲ್ಲೆ