ಕೊಪ್ಪಳ ಸೆಪ್ಟೆಂಬರ್ 09: ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿಂದು (ಸೆ 08ರಂದು) ತುಂಗಭದ್ರಾ ಆರತಿ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರಿತು.
ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ (ವಾರಣಾಸಿ) ಜರುಗುವ ವಿಶ್ವಪ್ರಸಿದ್ಧ ಗಂಗಾ ಆರತಿಯ ಮಾದರಿಯಲ್ಲೇ ತುಂಗಭದ್ರಾ ನದಿಯ ತಟದಲ್ಲಿ ಈ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ವಾರಣಾಸಿಯಿಂದ ಆಗಮಿಸಿದ್ದ ರಣಧೀರ ಆಚಾರ ನೇತೃತ್ವದ 11 ನುರಿತ ಅರ್ಚಕರ ತಂಡವು ಶಾಸ್ತ್ರೋಕ್ತವಾಗಿ, ಮಂತ್ರಘೋಷಗಳೊಂದಿಗೆ ತುಂಗಭದ್ರಾ ನದಿಗೆ ಮಹಾಮಂಗಳಾರತಿ ನೆರವೇರಿಸಿತು. ದೀಪಗಳ ಝಗಮಗಿಸುವ ಬೆಳಕು ಮತ್ತು ವೇದಘೋಷಗಳು ಭಕ್ತರಿಗೆ ಕಾಶಿಯ ಗಂಗಾ ತೀರದಲ್ಲೇ ಇರುವಂತಹ ದಿವ್ಯ ಅನುಭವವನ್ನು ಕಟ್ಟಿಕೊಟ್ಟವು.
*ಸಚಿವರು, ಸಂಸದರು, ಶಾಸಕರು, ಇತರೆ ಗಣ್ಯರಿಂದ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆಯ:* ತುಂಗಾರತಿಗೂ ಮುನ್ನ ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೆ.ಎಸ್.ಬಸವಂತಪ್ಪ, ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹಾಗೂ ಇತರೆ ಜನಪ್ರತಿನಿಧಿಗಳು ಸೇರಿ ತುಂಗಭದ್ರಾ ನದಿಗೆ ಆರತಿ ಬೆಳಗಿ ಬಾಗಿನ ಸಮರ್ಪಣೆ ಮಾಡಿದರು.
ಬಳಿಕ ನದಿ ದಡದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ದೇವಸ್ಥಾನದ ಉತ್ಸವ ಮೂರ್ತಿಯ ವಿಶೇಷ ಪೂಜೆಯಲ್ಲಿ ಎಲ್ಲ ಗಣ್ಯರು ಪಾಲ್ಗೊಂಡು ಭಕ್ತಿ ನಮನ ಸಲ್ಲಿಸಿದರು.
ಇದಲ್ಲದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಭರತನಾಟ್ಯ ಹಾಗೂ ನದಿ ತಟದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಚಿವರು, ಶಾಸಕರು ಹಾಗೂ ಇತರೆ ಗಣ್ಯರು ತುಂಗಭದ್ರಾ ಆರತಿ ಮಹೋತ್ಸವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ, ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ವಚನಾನಂದ ಸ್ವಾಮಿಗಳು, ವಿನಯ್ ಗುರೂಜಿ ಹಾಗೂ ವಿವಿಧ ಮಠಾಧೀಶರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ., ಮಾಜಿ ಸಂಸದರಾದ ಕರಡಿ ಸಂಗಣ್ಣ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಭಿಸಾಬ ದೋಟಿಹಾಳ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೆಗೀ, ಸಹಾಯಕ ಆಯುಕ್ತರಾದ ಮಹೇಬೂಬ್ ಜೀಲಾನ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್.ಪ್ರಕಾಶ್ ರಾವ್ ಸೇರಿದಂತೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಸೇರಿದಂತೆ ಇತರೆ ಜನಪ್ರತಿನಿಧಿಗಳು, ಹಲವು ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶ್ರೀ ಹುಲಿಗೆಮ್ಮ ದೇವಿಯ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
Also read