ಹೊಸಪೇಟೆ (ವಿಜಯನಗರ) ಮೇ.16: 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಹಾನಿಗೆ ಬೆಳೆ ಪರಿಹಾರದ ಮೊತ್ತ ಸಂದಾಯಕ್ಕೆ ಸಂಬಂಧಿಸಿಂತೆ ಹಂತ-1 ರಿಂದ ಹಂತ-9ರವರೆಗೆ ವಿಜಯನಗರ ಜಿಲ್ಲೆಗೆ ಸ್ವೀಕೃತವಾಗಿರುವ ಡಾಟಾವನ್ನು ಕೂಡಲೇ ಸರಿಪಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಇತ್ತೀಚೆಗೆ ನಡೆಸಿದ ವಿಡಿಯೋ ಸಂವಾದದ ಬಳಿಕ ಅವರು ಜಿಲ್ಲಾಡಳಿತ ಭವನದಲ್ಲಿನ ಕೇಸ್ವನ್ ಹಾಲ್ನಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಬೆಳೆ ಪರಿಹಾರದ ಮೊತ್ತ ಸಂದಾಯದ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದರು.
ಯಾವ ಬಗೆಯ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ ಇನ್ನು ಕೆಲವು ರೈತರ ಖಾತೆಗಳಿಗೆ ಬೆಳೆ ಪರಿಹಾರದ ಮೊತ್ತ ಸಂದಾಯವಾಗಿಲ್ಲ ಎಂಬುದರ ಬಗ್ಗೆ ಮಾಹಿತಿಯ ಡಾಟಾವನ್ನು ಈಗಾಗಲೇ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ಕಳುಹಿಸಲಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತಮ್ಮ ತಮ್ಮ ಹಂತದಲ್ಲಿ ತುರ್ತು ಕ್ರಮವಹಿಸಿ ವರದಿ ನೀಡಬೇಕು ಎಂದು ಅವರು ಇದೆ ವೇಳೆ ನಿರ್ದೇಶನ ನೀಡಿದರು.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬರಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರುಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಒಟ್ಟು 1,09,543 ರೈತರಿಗೆ 130,08,07,810 ರೂ. ಇನ್ಪುಟ್ ಸಬ್ಸಿಡಿಯನ್ನು ಫ್ರುಟ್ಸ್ ಐಡಿನಲ್ಲಿರುವ ವಿಸ್ತೀರ್ಣವನ್ನು ಕ್ರಾಫ್ ಸರ್ವೆ ಯೊಂದಿಗೆ ಜೋಡಣೆ ಮಾಡಿ ತಂತ್ರಾಂಶದ ಮುಖಾಂತರ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಪ್ರಕಟಣೆ ಹೊರಡಿಸಿ ರೈತರಿಗೆ ಮಾಹಿತಿ ನೀಡಿರುತ್ತಾರೆ. ಈ ಬೆಳೆ ಪರಿಹಾರದ ಮೊತ್ತ ಪಡೆಯುವಲ್ಲಿ ಕೆಲವು ರೈತರಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಸಮನ್ವಯ ಮಾಡಬೇಕು ಎಂದು ಅವರು ಇದೆ ವೇಳೆ ನಿರ್ದೇಶನ ನೀಡಿದರು.
ವಿಡಿಯೋ ಸಂವಾದದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರಮೇಶ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.