Ad image

Vijayanagara Vani
*ಡೆಂಗ್ಯು ನಿಯಂತ್ರಣ-ಬಾಲ್ಯ ವಿವಾಹ ತಡೆಗೆ ಸಹಕರಿಸಲು ಮನವಿ : ಗಿರೀಶ್*
ಶಿವಮೊಗ್ಗ ಜು.15
ಡೆಂಗ್ಯು ನಿಯಂತ್ರಣದಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಹಾಗೂ ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳನ್ನು ತಗ್ಗಿಸಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ಸಾರ್ವಜನಿಕರು ಸಹಕರಿಸಬೇಕೆಂದು ತಹಶೀಲ್ದಾರ್ ಗಿರೀಶ್ ಮನವಿ ಮಾಡಿದರು.
ತಹಶೀಲ್ದಾರ್ ಕಚೇರಿಯಲ್ಲಿ ಜೂ.15 ರಂದು ಏರ್ಪಡಿಸಲಾಗಿದ್ದ ವಿವಿಧ ಯೋಜನೆಗಳ ಸಮನ್ವಯ ಸಮಿತಿ ಹಾಗೂ ತಾಲ್ಲೂಕು ಟಮ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ವಿರುದ್ದದ ಅಪರಾಧ ತಡೆಗೆ ಸರ್ಕಾರ ಅನೇಕ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು. ಬಾಲ್ಯವಿವಾಹ ಸೇರಿದಂತೆ ಮಕ್ಕಳು ಮತ್ತು ಮಹಿಳೆಯರ ಸಂರಕ್ಷಣೆ ವಿಷಯದಲ್ಲಿ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಶಿವಮೊಗ್ಗ ಸಿಡಿಪಿಓ ಗಂಗಾಬಾಯಿ ಸಿ ಮಾತನಾಡಿ, 2024-25 ನೇ ಸಾಲಿನ ಜೂನ್ ವರೆಗೆ ತಾಲ್ಲೂಕಿನಲ್ಲಿ ಒಟ್ಟು 22 ಬಾಲ್ಯ ವಿವಾಹ ಪ್ರಕರಣ ವರದಿಯಾಗಿದ್ದು 6 ವಿವಾಹಗಳನ್ನು ತಡೆಯಲಾಗಿದೆ. ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿರ್ಮೂಲನೆ ಮತ್ತು ಮಕ್ಕಳ ರಕ್ಷಣೆಗಾಗಿ ಎಲ್ಲ ಗ್ರಾ.ಪಂ ಗಳಲ್ಲಿ ಮಕ್ಕಳ ಸರ್ವೇ ಮಾಡಲಾಗಿದ್ದು ಕಾವಲು ಸಮಿತಿ ಸಭೆಗಳನ್ನು ನಡೆಸಲಾಗಿದೆ. ಜೂನ್ ಮಾಹೆವರೆಗೆ 194 ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗಿದೆ. ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಡಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮದಡಿ ಜೂನ್ವರೆಗೆ 35 ಪ್ರಕರಣ ದಾಖಲಾಗಿದ್ದು 20 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಆಪ್ತ ಸಮಾಲೋಚನೆ ಹಂತದಲ್ಲಿ ಉಳಿದ ಪ್ರಕರಣಗಳು ಇವೆ. ತಾಲ್ಲೂಕಿನಲ್ಲಿ ಒಟ್ಟು 825 ಸ್ತ್ರೀಶಕ್ತಿ ಗುಂಪುಗಳಿದ್ದು ಎಲ್ಲ ಗುಂಪುಗಳು ಸುತ್ತುನಿಧಿ ಸೌಲಭ್ಯ ಪಡೆದಿವೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರರು ಪ್ರತಿಕ್ರಿಯಿಸಿ, ಸರ್ಕಾರದ ವಿವಿಧ ವಸತಿಶಾಲೆಗಳು, ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಶೇಷ ಸಭೆ ಕರೆದು ಬಾಲ್ಯ ವಿವಾಹ ತಡೆ, ಡೆಂಗ್ಯು ನಿಯಂತ್ರಣ ಸೇರಿದಂತೆ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಟಾನದ ಕುರಿತು ಮಾಹಿತಿ ನೀಡಬೇಕು.
ಬಾಲ್ಯ ವಿವಾಹ ತಡೆಯುವುದು ಎಲ್ಲ ಅಧಿಕಾರಿ/ಸಿಬ್ಬಂದಿಗಳ ಕರ್ತವ್ಯವಾಗಿದೆ. ಜೊತೆಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಾರ್ವಜನಿಕರು ಬಾಲ್ಯ ವಿವಾಹ ಕಂಡುಬಂದರೆ ತಡೆಯುವಲ್ಲಿ ಸಹಕರಿಸಬೇಕು. ಎಲ್ಲರೂ ಜಾಗೃತರಾಗಿ ಸಹಕರಿಸಿದಲ್ಲಿ ಮಾತ್ರ ಬಾಲ್ಯ ವಿಹಾಹ ತಡೆ ಸಾಧ್ಯವಾಗುತ್ತದೆ ಎಂದರು.
ನಗರದ ಆಲ್ಕೋಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕಚೇರಿ ಆವರಣದಲ್ಲಿ ದತ್ತು ಸ್ವೀಕಾರ ಕೇಂದ್ರದಲ್ಲಿ ಒಟ್ಟು 10 ಮಕ್ಕಳು ನೊಂದಣಿಯಾಗಿದ್ದಾರೆ. ಇಲ್ಲಿವರೆಗೆ 06 ಮಕ್ಕಳನ್ನು ದತ್ತು ನಿಡಲಾಗಿದೆ. ದತ್ತು ಪಡೆಯಲು ಇಚ್ಚೆಯುಳ್ಳವರು ಈ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ತಾಲ್ಲೂಕಿನಲ್ಲಿ ಜನವರಿಯಿಂದ ಜೂನ್ ಮಾಹೆವರೆಗೆ ಒಟ್ಟು 94 ಡೆಂಗ್ಯು ಮತ್ತು 24 ಚಿಕುನ್ಗುನ್ಯ ಪ್ರಕರಣ ದಾಖಲಾಗಿವೆ. ಡೆಂಗ್ಯು ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಲಾಗುತ್ತಿದ್ದು ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಸರ್ವೇ ಮಾಡಿ, ಅರಿವು ಮೂಡಿಸುತ್ತಿದ್ದಾರೆ. ನಿಂತ ನೀರಿಗೆ ರಾಸಾಯನಿಕ ಹಾಗೂ ಫಾಗಿಂಗ್ ಮಾಡಲಾಗುತ್ತಿದೆ. ಎಲ್ಲ ಸಾರ್ವಜನಿಕರು ಮನೆ ಸುತ್ತಮುತ್ತ ಯಾವುದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ ಡೆಂಗ್ಯು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರರು ಮಾತನಾಡಿ, ಆರ್ಬಿಎಸ್ಕೆ ಕಾರ್ಯಕ್ರಮದಡಿ 225 ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯ ತಪಾಸಣೆ ನಡೆದಿದೆ. ಶಾಲೆಗಳಲ್ಲಿ ಅಥವಾ ಅಂಗನವಾಡಿ ಮಕ್ಕಳಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಆರ್ಬಿಎಸ್ಕೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬಹುದು ಎಂದರು ತಿಳಿಸಿದರು.
ಮಾದಕ ವ್ಯಸನ ನಿಯಂತ್ರಣಕ್ಕಾಗಿ ನಗರದ ಸೋಮಿನಕೊಪ್ಪದಲ್ಲಿ ಮಾದಕವ್ಯಸನ ಮುಕ್ತ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮಾದಕವ್ಯಸನ ಮುಕ್ತ ಕೇಂದ್ರದಲ್ಲಿ ಒಟ್ಟು 46 ಜನರಿಗೆ ಅವಕಾಶವಿದ್ದು, ಪ್ರಸ್ತುತ ಉಚಿತವಾಗಿ 22 ಜನರ ಮದ್ಯ ವ್ಯಸನ ಬಿಡಿಸುವ ಕೆಲಸ ಮಾಡಲಾಗುತ್ತಿದೆ. ಮಾದಕ ವ್ಯಸನಕ್ಕೆ ಒಳಗಾಗಿರುವ ಮಕ್ಕಳು, ವಯಸ್ಕರನ್ನು ಅದರಿಂದ ಹೊರಗೆ ತರುವ ಪ್ರಯತ್ನವನ್ನು ಮಾಡಲಾಗುತಿದ್ದು ಜನರು ಇದರ ಉಪಯೋಗ ಪಡೆದುಕೊಳ್ಳಬಹುದೆಂದು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಈವರೆಗೆ ಒಟ್ಟು 23 ತಂಬಾಕು ದಾಳಿಗಳು ಆಗಿದ್ದು 458 ಪ್ರಕರಣ ದಾಖಲಿಸಿ 34350 ದಂಡ ಸಂಗ್ರಹಿಸಲಾಗಿದೆ. ಟಿಸಿಸಿ ಕೇಂದ್ರಕ್ಕೆ 2039 ಜನರು ಭೇಟಿ ನೀಡಿದ್ದು ಶೇ.18 ರಷ್ಟು ಜನರು ತಂಬಾಕು ತ್ಯಜಿಸಿದ್ದಾರೆ ಎಂದ ಅವರು ಎಲ್ಲ ಶಾಲೆಗಳ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷೇಧ ಫಲಕವನ್ನು ಹಾಕಬೇಕು ಎಂದು ಸೂಚನೆ ನೀಡಿದರು.
ಡೆಂಗ್ಯು ನಿಯಂತ್ರಣಕ್ಕೆ ಸಹಕರಿಸಿ :
ತಹಶೀಲ್ದಾರರು, ಪ್ರತಿ ಶುಕ್ರವಾರ ಎಲ್ಲರೂ ತಮ್ಮ ಮನೆಗಳು, ಕಚೇರಿಗಳು, ಶಾಲೆಯಲ್ಲಿನ ನೀರು ಸಂಗ್ರಹಿಸುವ ಬಕೆಟ್, ಬ್ಯಾರೆಲ್, ಪಾತ್ರೆಗಳನ್ನು ಖಾಲಿ ಮಾಡಿ, ಸ್ವಚ್ಚಗೊಳಿಸಿ, ಒಣಗಿಸಿ ಪುನಃ ನೀರು ತುಂಬಿಡಬೇಕು. ಡೆಂಗ್ಯೂ ಬರುವ ಮುನ್ನವೇ ಮುಂಜಾಗೃತಿ ಮತ್ತು ಎಚ್ಚರಿಕೆ ವಹಿಸಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಸ್ವಚ್ಚತೆ ಕಾಪಾಡುವ ಮೂಲಕ ಸಾರ್ವಜನಿಕರು ಡೆಂಗ್ಯು ನಿಯಂತ್ರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಡೆಂಗ್ಯು ನಿಯಂತ್ರಣದ ಸಲುವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆ ಲಾರ್ವಾ ಸಮೀಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಬೇಕು. ಮನೆಯಲ್ಲಿರುವ ಫ್ರಿಡ್ಜ್ನಲ್ಲಿ ಸಹ ಲಾರ್ವಾ ಉತ್ಪತ್ತಿಯಾಗುವ ಸಂಭವ ಇರುತ್ತದೆ. ಆದ್ದರಿಂದ ಕಾರ್ಯಕರ್ತೆಯರು ಫ್ರಿಡ್ಜ್ನ್ನು ಸಹ ಪರಿಶೀಲಿಸುತ್ತಾರೆ. ಸಾರ್ವಜನಿಕರು ಸಹಕರಿಸಬೇಕು. ಪ್ರತಿ ಶುಕ್ರವಾರ ನೀರು ಶೇಖರಿಸುವ ಬಕೆಟ್, ಬ್ಯಾರೆಲ್ ಇತರೆ ವಸ್ತುಗಳನ್ನು ಖಾಲಿ ಮಾಡಿ ಸ್ವಚ್ಚಗೊಳಿಸಿ ಒಣಗಿಸಿ ಮತ್ತೆ ತುಂಬೇಕು. ಹಾಗೂ ನೀರಿನ ಅವಶ್ಯಕ ಶೇಖರಣೆಗೆ ಮೀನುಗಾರಿಕೆ ಇಲಾಖೆಯಿಂದ ಲಾರ್ವಾ ತಿನ್ನುವ ಗಪ್ಪಿ ಮೀನುಗಳನ್ನು ತಂದು ಬಿಡಬಹುದು.
– ಗಿರೀಶ್, ತಹಶೀಲ್ದಾರರು, ಶಿವಮೊಗ್ಗ
ಸಭೆಯಲ್ಲಿ ಬಿಇಓ ರಮೇಶ್, ಆರ್ಬಿಎಸ್ಕೆ ವೈದ್ಯರು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಸಾಮಾಜಿಕ ಕಾರ್ಯಕರ್ತ ರವಿರಾಜ್, ವಕೀಲರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Share This Article
error: Content is protected !!
";