ಅಂಗನವಾಡಿಗಳಲ್ಲಿ ಮೂಲಸೌಕರ್ಯ ಕೊರತೆ ಕುರಿತು ಉಚ್ಛ ನ್ಯಾಯಾಲಯಕ್ಕೆ ವರದಿ -ನ್ಯಾ. ರೋಣ ವಾಸುದೇವ

Vijayanagara Vani
ಅಂಗನವಾಡಿಗಳಲ್ಲಿ ಮೂಲಸೌಕರ್ಯ ಕೊರತೆ ಕುರಿತು ಉಚ್ಛ ನ್ಯಾಯಾಲಯಕ್ಕೆ ವರದಿ -ನ್ಯಾ. ರೋಣ ವಾಸುದೇವ
ಚಿತ್ರದುರ್ಗ 
ಜಿಲ್ಲೆಯ ಆಯ್ದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅವುಗಳ ಸ್ಥಿತಿ-ಗತಿ ಅವಲೋಕಿಸಲಾಗಿದ್ದು, ಈ ಪೈಕಿ ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯದ ಕೊರತೆ ಇರುವುದು ಕಂಡುಬಂದಿದೆ, ಈ ಬಗ್ಗೆ ಉಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ ಹೇಳಿದರು.
ಗುರುವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸ್ಥಿತಿ-ಗತಿ ಪರಿಶೀಲಿಸಲಾಗಿದ್ದು, ಜಿಲ್ಲೆಯಲ್ಲಿ ಬಹಳಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಆಟವಾಡಲು ಸರಿಯಾದ ಸ್ಥಳವಿಲ್ಲ. ಸೂಕ್ತ ಗಾಳಿ ಬೆಳಕು ಸಹ ಇಲ್ಲ. ಶೌಚಾಲಯ ಹಾಗೂ ಶುಚಿತ್ವದ ಕೊರತೆಯೂ ಕಂಡುಬಂದಿದೆ. ಇಂತಹ ದುಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು.
ಉಚ್ಚ ನ್ಯಾಯಾಲಯವು ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಭೇಟಿ ನೀಡಿ ಕಟ್ಟಡ ಹಾಗೂ ಪೌಷ್ಠಿಕ ಆಹಾರ ವಿತರಣೆ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಇದರಂತೆ 22 ಅಂಗನವಾಡಿ ಕೇಂದ್ರಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಭೇಟಿ ನೀಡಲಾಗಿದೆ. ಮುಂದೆಯೂ ನಿರಂತರವಾಗಿ ಭೇಟಿ ನೀಡಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ 2,428 ಅಂಗನವಾಡಿ ಕೇಂದ್ರಗಳಿವೆ. ಭೇಟಿ ನೀಡಿದ ಅಂಗನವಾಡಿ ಕೇಂದ್ರಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಿತಿ ಗಂಭೀರವಾಗಿದ್ದು ಅಂಗನವಾಡಿ ನಡೆಸಲು ಯೋಗ್ಯವಿರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಬಾಡಿಗೆ ಕಟ್ಟಡಕ್ಕೆ ರೂ.4,000 ಅಂತಿಮ ದರ ನಿಗದಿ ಮಾಡಿದೆ. ಆದರೆ ನಗರ ಪ್ರದೇಶದಲ್ಲಿ ಈ ಬಾಡಿಗೆ ದರಕ್ಕೆ ಸುಸಜ್ಜಿತ ಕಟ್ಟಡ ದೊರಕುವುದು ಕಷ್ಟವಾಗಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ ಅಭಿಪ್ರಾಯಪಟ್ಟರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರದ ಗುಣಮಟ್ಟ ಸಹ ಪರೀಕ್ಷಿಸಲಾಗಿದೆ. ಅನುದಾನ ಕೊರತೆಯು ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ ಕಡಿಮೆ ಆಗಲು ಕಾರಣವಾಗಿದೆ. ಇದರ ನಡುವೆಯು ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳು ಬಹಳ ಒಳ್ಳೆಯ ಸ್ಥಿತಿಯಲ್ಲಿದ್ದು ಮಕ್ಕಳ ಸ್ನೇಹಿಯಾಗಿವೆ. ನ್ಯಾಯಧೀಶರು ಭೇಟಿ ನೀಡಿದ ನಂತರ ಅಂಗನವಾಡಿ ಕೇಂದ್ರಗಳ ಸ್ಥಿತಿ ಸುಧಾರಿಸಿದೆ ಎಂದರು.
ಸರ್ಕಾರ ರಾಜ್ಯದ ಕೆಲ ಅಂಗನವಾಡಿಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಆರಂಭಿಸಲಾಗುತ್ತಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದ್ದು, ಮುಂದೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮುಂದುವರೆಸುವ ಚಿಂತನೆ ಇದೆ. ಆದರೆ ಅಂಗವಾಡಿಗಳ ಮೂಲಭೂತ ಸೌಕರ್ಯ ಬಲಪಡಿಸದೇ ಹೊರತು ಇಂತಹ ನವೀನ ಚಿಂತನೆಗಳ ಅನುಷ್ಠಾನ ಕಾರ್ಯಸಾಧುವಾಗುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ಅಂಗನವಾಡಿಗಳು ದುಸ್ಥಿತಿಯಲ್ಲಿದ್ದರೆ ತಕ್ಷಣವೇ ಕಾನೂನು ಸೇವಾ ಪ್ರಾಧಿಕಾರ ಗಮನಕ್ಕೆ ತರುವಂತೆ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!