ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿನ 22ನೇ ವಾರ್ಡಿನಲ್ಲಿ ಬಾದನಹಟ್ಟಿ ರಸ್ತೆಯಲ್ಲಿ ನೀರಾವರಿ ಇಲಾಖೆಯಿಂದ ನಿರ್ಮಿಸಿದ ಸಿಸಿ ರಸ್ತೆ ಅವೈಜ್ಞಾನಿವಾಗಿದ್ದು, ಇದರಿಂದ ಮಳೆ ಬಂದರೆ ನೀರು ಮುಂದೆ ಹೋಗಲು ಚರಂಡಿ ಇಲ್ಲದೆ ನೀರು ನಿಂತು ಕೆರೆಯಂತಾಗಿದೆ. ಇದರಲ್ಲಿ ಸೊಳ್ಳೆಯ ಕಾಟದಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿವಾಸಿಗಳು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಈ ಕುರಿತು ವಿಜಯನಗರವಾಣಿ ಸುದ್ದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಶನಿವಾರ ನಿಂತ ನೀರಿಗೆ ವೆಸ್ಟ್ ಆಯಿಲ್ ಹಾಕಿದ್ದಾರೆ.
ಈಗಾಗಲೇ ಕಳೆದ ವಾರದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು ಪುರಸಭೆಯ ವ್ಯಾಪ್ತಿಯಲ್ಲಿ ಚರಂಡಿಯಾಗದಿರುವ ವಾರ್ಡ್‍ಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಕಾಟದಿಂದ ವೈರಲ್ ಜ್ವರ ಹೆಚ್ಚುವ ಆತಂಕವಿದೆ.
ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿನ 5ನೇ ವಾರ್ಡ್ ಸೇರಿದಂತೆ ಇನ್ನಿತರ ಓಣಿಗಳಲ್ಲಿ ಕಳೆದ ವಾರದಲ್ಲಿ ಮಳೆ ಬಂದು ನೀರು ನಿಂತಿರುವ ಸ್ಥಳದಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಜನರಿಗೆ ನಿಂತ ನೀರನಲ್ಲಿ ಲಾರ್ವ ಉತ್ಪಾತ್ತಿಯಾಗದಂತೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ವೆಸ್ಟ್ ಆಯಿಲ್ ಹಾಕಿದ್ದಾರೆ.
ಮಳೆ ನೀರು ನಿಂತ ಸ್ಥಳದಲ್ಲಿ ವಾಸಿಸುವ ಜನರಲ್ಲಿ ಭಯ ಕಣ್ಮಾರೆಯಾಗಿದೆ. ಆದರೆ ಇದಕ್ಕೆ ಪುರಸಭೆ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಿ, ನೀರು ಹರಿಯುವಂತೆ ಹಾಗೂ ನಿಲ್ಲದಂತೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು. ಇಲ್ಲದಿದ್ದರೆ ಪುರಸಭೆಯ ಮುಂದುಗಡೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಶರಣಬಸವ, ಆಶಾ ರಾಜೇಶ್ವರಿ ಮತ್ತು ನಾಗವೇಣಿ ಇದ್ದರು.