ಜನವರಿ 5, 6 ರಂದು ರಾಜ್ಯ ಮಟ್ಟದ ಯುವಜನೋತ್ಸವ ಆಯೋಜನೆಗೆ ಎಲ್ಲಾ ಸಿದ್ದತೆ 10 ಸಾವಿರಕ್ಕಿಂತ ಹೆಚ್ಚು ಭಾಗಿ, ಎಂ.ಬಿ.ಎ ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ

Vijayanagara Vani
ಜನವರಿ 5, 6 ರಂದು ರಾಜ್ಯ ಮಟ್ಟದ ಯುವಜನೋತ್ಸವ ಆಯೋಜನೆಗೆ ಎಲ್ಲಾ ಸಿದ್ದತೆ 10 ಸಾವಿರಕ್ಕಿಂತ ಹೆಚ್ಚು ಭಾಗಿ, ಎಂ.ಬಿ.ಎ ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ
ದಾವಣಗೆರೆ,ಡಿಸೆಂಬರ್.30: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಡೆಸುವ ರಾಜ್ಯ ಮಟ್ಟದ ಯುವಜನೋತ್ಸವ ಜನವರಿ 5 ಮತ್ತು 6 ರಂದು ನಡೆಯಲಿದ್ದು ನಗರದ ಎಂ.ಬಿ.ಎ. ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
ಅವರು ಸೋಮವಾರ (ಡಿ.30) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯುವಜನೋತ್ಸವ ಕಾರ್ಯಕ್ರಮದ ಸಿದ್ದತೆಗೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ವಿವಿಧ ಉಪ ಸಮಿತಿಗಳೊಂದಿಗೆ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಯುವ ಪ್ರಶಸ್ತಿ ಪುರಷ್ಕøತರು ಭಾಗವಹಿಸುವರು.
7 ಸ್ಪರ್ಧೆಗಳು; ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ 7 ಸ್ಪರ್ಧೆಗಳಿದ್ದು ಪ್ರತ್ಯೇಕವಾಗಿ ನಡೆಯಲಿವೆ. ಜಾನಪದ ನೃತ್ಯ ಸ್ಪರ್ಧೆಯು ಬಿಐಇಟಿ ಕಾಲೇಜಿನ ಎಸ್.ಎಸ್.ಎಂ. ಸಾಂಸ್ಕøತಿಕ ಸಭಾಂಗಣ, ಜಾನಪದ ಗೀತೆ ಸ್ಪರ್ಧೆಯು ಬಾಪೂಜಿ ಎಂಬಿಎ ಕಾಲೇಜು ಸಭಾಂಗಣ, ವಿಜ್ಞಾನ ವಸ್ತು ಪ್ರದರ್ಶನ ಎಂಬಿಎ ಮೈದಾನದಲ್ಲಿನ ಎಸ್.ಎಸ್. ಪಬ್ಲಿಕ್ ಸ್ಕೂಲ್, ಕವನ ರಚನೆ ಎಂಬಿಎ ಕಾಲೇಜಿನ ಕೊಠಡಿ 1, ಕಥೆ ಬರೆಯುವುದು ಇಲ್ಲಿನ ಕೊಠಡಿ 2 ರಲ್ಲಿ ಹಾಗೂ ಚಿತ್ರಕಲೆ ಸ್ಪರ್ಧೆ ಮತ್ತು ಘೋಷಣ ಸ್ಪರ್ಧೆಯು ಲಲಿತ ಕಲಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ರಾಜ್ಯ ಎಲ್ಲಾ ಜಿಲ್ಲೆಗಳಿಂದ ಏಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಯುವ ಸ್ಪರ್ಧಾಳುಗಳು ಆಗಮಿಸುವರು. ಇಲ್ಲಿನ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಮೊದಲ ಬಹುಮಾನವಾಗಿ ರೂ.25000, ದ್ವಿತೀಯ ರೂ.15000 ಮತ್ತು ತೃತೀಯ ಬಹುಮಾನವಾಗಿ ರೂ.10000 ಗಳನ್ನು ಪ್ರಶಸ್ತಿ ಪತ್ರದೊಂದಿಗೆ ನಗದು ನೀಡಲಾಗುತ್ತದೆ. ಇಲ್ಲಿ ವಿಜೇತರಾದವರು ಜನವರಿ 11 ಮತ್ತು 12 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸುವರು ಎಂದರು.
ಜನಪದ ರ್ಯಾಲಿ; ಯುವಜನೋತ್ಸವವು ಜನವರಿ 5 ರಂದು ಬೆಳಗ್ಗೆ ಉದ್ಘಾಟನೆಯಾಗಲಿದ್ದು ಇದರ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ವಿವಿಧ ಕಲಾತಂಡಗಳೊಂದಿಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಜನಪದ ಮೆರವಣಿಗೆ ಮೂಲಕ ಎಂಬಿಎ ಮೈದಾನಕ್ಕೆ ತೆರಳಿ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಲಾಮೇಳದಲ್ಲಿ ದಕ್ಷಿಣ ವಲಯದ ಸಾಂಸ್ಕøತಿಕ ಕೇಂದ್ರದಿಂದ 10 ಕ್ಕಿಂತ ಹೆಚ್ಚು ತಂಡಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 10 ಕ್ಕೂ ಹೆಚ್ಚು ಕಲಾ ತಂಡಗಳು ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳ ತಂಡಗಳು ಕಲಾ ಮೇಳದಲ್ಲಿ ಭಾಗಿಯಾಗಲಿದ್ದು ಆಕರ್ಷಕ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕದ್ರಿ ಮಣಿಕಂಠ ಮತ್ತು ತಂಡದಿಂದ ಸಾಂಸ್ಕøತಿಕ ಸಂಜೆ; ಯುವಜನೋತ್ಸವ ಅಂಗವಾಗಿ ಖ್ಯಾತ ಕಲಾವಿದರಾದ ಕದ್ರಿ ಮಣಿಕಂಠ ಮತ್ತು ತಂಡದವರಿಂದ ಜನವರಿ 5 ರ ಸಂಜೆ 5 ಗಂಟೆಯಿಂದ ಪ್ರಧಾನ ವೇದಿಕೆ ಎಂಬಿಎ ಮೈದಾನದಲ್ಲಿ ಸಾಂಸ್ಕøತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇದಿಕೆಯಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ. ಗ್ಲಾಸ್ಹೌಸ್ನಲ್ಲಿ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ನಡೆಯುತ್ತಿದ್ದು ಜನವರಿ 5 ರವರೆಗೆ ಯುವಜನೋತ್ಸವ ಹಿನ್ನಲೆಯಲ್ಲಿ ಮುಂದುವರೆಸಲಾಗಿದ್ದು ದಾವಣಗೆರೆ ಜನತೆಯು ಯುವಜನೋತ್ಸವವನ್ನು ವೀಕ್ಷಣೆ ಮಾಡುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಯುವಜನೋತ್ಸವ ವೀಕ್ಷಣೆಗೆ ನಗರ ಸಾರಿಗೆ; ಜನವರಿ 5 ಮತ್ತು 6 ರಂದು ನಡೆಯುವ ಯುವಜನೋತ್ಸವ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕೆಎಸ್ಆರ್ಟಿಸಿ ಯಿಂದ ನಿರಂತರ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ. ವೀಕ್ಷಣೆ ಮಾಡುವವರು ಈ ಬಸ್ ಸೌಲಭ್ಯ ಪಡೆಯಬಹುದಾಗಿದ್ದು ಎಲ್ಲಾ ವೇದಿಕೆಗಳಿಗೂ ಬಸ್ ಕರೆದುಕೊಂಡು ಹೋಗಲಿದೆ ಎಂದರು.
ಜನಪ್ರತಿನಿಧಿಗಳು, ಯುವ ಪುರಸ್ಕøತರು ಭಾಗಿ; ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ರಾಜ್ಯದಲ್ಲಿನ ಪ್ರಮುಖ ಯುವ ಪುರಸ್ಕøತರು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಯುವ ಸ್ಪರ್ಧಾಳುಗಳಿಗೆ ಊಟ, ವಸತಿ ಸೇರಿದಂತೆ ಜಿಲ್ಲೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹಮ್ಮಿಕೊಳ್ಳಲು ಸೂಕ್ತ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Share This Article
error: Content is protected !!
";