Ad image

ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿಕಲಚೇತನರಿಗೆ ಅನುಕಂಪಕ್ಕಿಂತ, ಅವಕಾಶ ನೀಡಿ

Vijayanagara Vani
ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿಕಲಚೇತನರಿಗೆ ಅನುಕಂಪಕ್ಕಿಂತ, ಅವಕಾಶ ನೀಡಿ

ಚಿತ್ರದುರ್ಗ.03:
ವಿಕಲಚೇತನರಿಗೆ ಅನುಕಂಪ ತೋರಿಸುವುದಕ್ಕಿಂತ ಮುಖ್ಯವಾಗಿ ನಾವು ಅವಕಾಶ ಕಲ್ಪಿಸಿಕೊಡಬೇಕು. ಆಗ ಮಾತ್ರ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಹಾಗೂ ವಿವಿದೋದ್ದೇಶ ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಹಯೋಗದಲ್ಲ್ಲಿ ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ ಎಂಬ ಘೋಷವಾಕ್ಯದೊಂದಿಗೆ “ವಿಶ್ವ ವಿಕಲಚೇತನರ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಅವಕಾಶ ಕೊಡದೇ ವಂಚಿತರನ್ನಾಗಿ ಮಾಡಬಾರದು. ಯಾವುದೇ ಕಾರಣಕ್ಕೂ ವಿಕಲಚೇತನರು ಎದೆಗುಂದಬಾರದು. ಉತ್ಸಾಹ, ಛಲ, ಧೈರ್ಯ, ಕಠಿಣ ಪರಿಶ್ರಮವಿದ್ದರೆ ಸಾಧನೆ ಮಾಡುವುದು ಕಷ್ಟವೇನಲ್ಲ. ಪ್ಯಾರಾ ಒಲಂಪಿಕ್, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಕಲಚೇತನರು ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಾಧನೆ ಮಾಡಿರುವ ಉದಾಹಣೆಗಳಿವೆ ಎಂದು ಹೇಳಿದರು.
ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೈಕ್ಷಣಕ, ಸಾಮಾಜಿಕ, ಆರ್ಥಿಕ ಹಾಗೂ ಉದ್ಯೋಗದಲ್ಲಿಯೂ ಮೀಸಲಾತಿ ಮತ್ತು ಅವಕಾಶಗಳನ್ನು ಕಲ್ಪಿಸಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ವಿಕಲಚೇತನರು ತಮ್ಮ ದೈಹಿಕ ನ್ಯೂನತೆಗಳ ಬಗ್ಗೆ ಕೀಳರಿಮೆಯನ್ನು ಮನಸ್ಸಿನಿಂದ ತೊರೆದು, ನಾವು ಯಾರಿಗೂ ಕಮ್ಮಿ ಇಲ್ಲ ಎಂಬ ಭಾವನೆ ಹೊಂದಿರಬೇಕು. ವಿಕಲಚೇತನರಲ್ಲಿ ವಿಶೇಷ ಗುಣಗಳಿದ್ದು, ಕೌಶಲ್ಯಗಳಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್ ರಾಘವೇಂದ್ರ ಮಾತನಾಡಿ, ವಿಕಲಚೇತನರು ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ ಉನ್ನತ ಗುರಿ ಇರಿಸಿಕೊಂಡು ಅದರ ಸಾಕಾರಕ್ಕೆ ಯತ್ನಿಸಬೇಕು. ಅಂಗವಿಕಲರು ಪ್ರತಿಭಾವಂತರಾಗಿದ್ದು, ಮಾನಸಿಕವಾಗಿ ಸಬಲರಾಗುವ ಮೂಲಕ ದೈಹಿಕ ನ್ಯೂನತೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಅಂಗವಿಕಲರು ಕ್ರೀಡಾ ಮತ್ತು ಸಾಂಸ್ಕøತಿಕ, ಶೈಕ್ಷಣಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ವಿಶೇಷವಾದ ಸಾಧನೆ ತೋರಿದ್ದಾರೆ. ವಿಶೇಷ ಚೇತನರಿಗೆ ಅನುಕಂಪ, ತಾತ್ಸಾರಕ್ಕಿಂತ ಅವಕಾಶ ಕಲ್ಪಿಸಬೇಕು. ಸಾಮಾನ್ಯ ಮನುಷ್ಯರಿಗಿಂತ ಅಂಗವಿಕಲರಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 35,971 ಜನ ವಿಕಲಚೇತನರು ಇದ್ದಾರೆ. ವಿಕಲಚೇತನರು ಮುಖ್ಯವಾಹಿನಿಗೆಯಲ್ಲಿ ಸಾಮಾನ್ಯರಂತೆ ಜೀವಿಸಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಅಡೆತಡೆರಹಿತ ಸೌಲಭ್ಯ ಮತ್ತು ನೆರವು ನೀಡುವುದು ಸರ್ಕಾರ ಹಾಗೂ ಸಮುದಾಯದ ಜವಾಬ್ದಾರಿಯಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಎಲ್ಲಾ ವಿಕಲಚೇತನರು ಮುಖ್ಯವಾಹಿನಿಗೆ ಬರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವಿಕಲಚೇತನರಿಗೆ ಮಾಸಿಕ ನಿರ್ವಹಣಾ ಭತ್ಯೆ, ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಧನ ಸಲಕರಣೆಗಳು, ಆಧಾರ ಸ್ವಯಂ ಉದ್ಯೋಗ ಯೋಜನೆ, ವಿಕಲಚೇತನ ವ್ಯಕ್ತಿಯನ್ನು ಸಾಮಾನ್ಯ ವ್ಯಕ್ತಿ ವಿವಾಹವಾದಲ್ಲಿ ಪ್ರೋತ್ಸಾಹಧನ, ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ, ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಶಿಶುಪಾಲನಾ ಭತ್ಯೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ವಾಹನ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್, ಬ್ರೈಲ್ ಕಿಟ್ ಯೋಜನೆ, ಶ್ರವಣದೋಷ ವಿಕಲಚೇತನರಿಗೆ ಹೊಲಿಗೆಯಂತ್ರ ಯೋಜನೆ, ಆರೈಕೆದಾರರ ಪ್ರೋತ್ಸಾಹಧನ ಯೋಜನೆ, ವಿಕಲಚೇತನರಿಗೆ ರಿಯಾಯಿತಿ ಬಸ್‍ಪಾಸ್ ವ್ಯವಸ್ಥೆ, ಉದ್ಯೋಗದಲ್ಲಿ ಮೀಸಲಾತಿ ಎ ಮತ್ತು ಬಿ ವೃಂದಕ್ಕೆ ಶೇ.4ರಷ್ಟು ಹಾಗೂ ಸಿ ಮತ್ತು ಡಿ ವೃಂದಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವ ವಿಕಲಚೇತರ ದಿನಾಚರಣೆ ಅಂಗವಾಗಿ 2023-24ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿಕಲಚೇತನ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ವಿಕಲಚೇತನ ವಿದ್ಯಾರ್ಥಿ ಈ ಶ್ರೀಹರಿ ಅವರನ್ನು ಗೌರವಿಸಲಾಯಿತು. ನಂತರ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದಲ್ಲಿ ವಿಕಲಚೇತನರಿಗೆ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿಕಲಚೇತನರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿಕಲಚೇತನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ್, ವಿಕಲಚೇತನರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪವಿತ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ವಿವಿದೋದ್ದೇಶ, ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ವಿಕಲಚೇತನರು ಇದ್ದರು.

- Advertisement -
Ad imageAd image
Share This Article
error: Content is protected !!
";