ಈರುಳ್ಳಿ ಬೆಳೆ: ರೋಗ ಕೀಟಗಳ ನಿರ್ವಹಣಾ ಕ್ರಮಗಳು

Vijayanagara Vani
ಈರುಳ್ಳಿ ಬೆಳೆ: ರೋಗ ಕೀಟಗಳ ನಿರ್ವಹಣಾ ಕ್ರಮಗಳು
ಚಿತ್ರದುರ್ಗ
ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯು ಪ್ರಮುಖ ಬೆಳೆಯಾಗಿರುತ್ತದೆ. ಈರುಳ್ಳಿ ಬೆಳೆಯನ್ನು ಚಿತ್ರದುರ್ಗ ತಾಲ್ಲೂಕಿನಲ್ಲಿ 9,461 ಹೆಕ್ಟೇರ್, ಚಳ್ಳಕೆರೆ 11,299 ಹೆಕ್ಟೇರ್, ಹೊಳಲ್ಕೆರೆ 1777 ಹೆಕ್ಟೇರ್, ಹಿರಿಯೂರು 5991 ಹೆಕ್ಟೇರ್, ಹೊಸದುರ್ಗ 3300 ಹೆಕ್ಟೇರ್, ಮೊಳಕಾಲ್ಮೂರು 819 ಹೆಕ್ಟೇರ್ ಒಟ್ಟಾರೆ ಜಿಲ್ಲೆಯಲ್ಲಿ 32,646 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜಿಟಿಜಿಟಿ ಮಳೆಯಿಂದಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ಮಣ್ಣಿನ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆಗಳಿಗೆ ಥ್ರಿಪ್ಸ್ ನುಶಿ ಕೀಟ ಮತ್ತು ನೇರಳೆ ಎಲೆ ಮಚ್ಚೆ ರೋಗ ಬಾದೆ ಹೆಚ್ಚಾಗಿದ್ದು, ರೋಗ ಮತು ಕೀಟ ಬಾದೆಯಿಂದ ಬೆಳೆಯನ್ನು ರಕ್ಷಿಸಲು, ರೋಗ ನಿರ್ವಹಣೆ ಮಾಲು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಲಹೆ ನೀಡಿದ್ದಾರೆ.
ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಶಿಗಳು ಎಲೆಯ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಎಲೆಗಳ ಸುಳಿಯಲ್ಲಿ ಮತ್ತು ಎಲೆಗಳ ಕೆಳಗೆ ಕುಳಿತು ರಸ ಹೀರುತ್ತವೆ. ಎಲೆಗಳ ಮೇಲೆ ಬಿಳಿ ಬಿಳಿಯಾದ ಮಚ್ಚೆಗಳು ಕಾಣಿಸುತ್ತವೆ, ನಂತರ ತುದಿಯಿಂದ ಒಣಗುತ್ತವೆ. ಥ್ರಿಪ್ಸ್ ನುಶಿ ನಿರ್ವಹಣೆಗೆ ಬಿತ್ತಿದ 3 ವಾರಗಳ ನಂತರ ಬೆಳೆಗೆ 0.25 ಮಿಲಿ ಇಮಿಡಾಕ್ಲೋಪ್ರಿಡ್ ಅಥವಾ 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿ ಅಥವಾ 0.5 ಮಿ.ಲೀ ಫಾಸ್ಪಾಮಿಡಾನ್ 85 ಡಬ್ಲೂö್ಯ ಎಸ್.ಸಿ ಅಥವಾ 1.3 ಮಿ.ಲೀ ಆಕ್ಸಿಡೆಮೆಟಾನ್ ಮಿಥೈಲ್ 1 ಲೀ. ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಬಿತ್ತನೆಯಾದ 6 ವಾರಗಳ ನಂತರ ಕ್ರಮಾಂಕ 1 ರಲ್ಲಿ ಸೂಚಿಸಲಾದ ಸಿಂಪಡನೆಯನ್ನು ಮತ್ತೆ ಮಾಡಬೇಕು, ಪ್ರತಿ ಹೆಕ್ಟೇರಿಗೆ 360 ಲೀ.ಸಿಂಪಡಣಾ ದ್ರಾವಣ ಬಳಸಬೇಕು.ಬಿತ್ತನೆಯಾದ 9 ಮತ್ತು 11 ವಾರಗಳ ನಂತರ ಕ್ರಮಾಂಕ 1 ರಲ್ಲಿ ಸೂಚಿಸಿಲಾದ ದ್ರಾವಣವನ್ನೇ ಪ್ರತಿ ಹೆಕ್ಟೇರಿಗೆ 450 ಲೀ. ಸಿಂಪಡಿಸಬೇಕು.
ನೇರಳೆ ಎಲೆ ಮಚ್ಚೆ ರೋಗವು ಮೊದಲಿಗೆ ಬಿಳಿ ಭಾಗದಿಂದ, ನೇರಳೆ ಭಾಗಕ್ಕೆ ಪರಿವರ್ತನೆಗೊಂಡು, ಆಮೇಲೆ ಎಲೆಗಳು ಒಣಗುತ್ತವೆ. ನೇರಳೆ ಎಲೆ ಮಚ್ಚೆ ರೋಗ ನಿರ್ವಹಣೆಗೆ ಬೀಜವನ್ನು ಪಾದರಸ ಸಂಯುಕ್ತ ವಸ್ತು ಅಥವಾ ಕ್ಯಾಪ್ಟಾನ್ (2 ಗ್ರಾಂ ಪ್ರತಿ ಕಿ.ಗ್ರಾಂ ಬೀಜಕ್ಕೆ) ದಿಂದ ಉಪಚರಿಸಬೇಕು.
ಹೊಸದುರ್ಗ ತಾಲ್ಲೂಕಿನಲ್ಲಿ ಕಪ್ಪು ಮಣ್ಣಿನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜಿಟಿಜಿಟಿ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ನೇರಳೆ ಎಲೆ ಮಚ್ಚೆರೋಗ ಕಾಣಿಸಿಕೊಂಡಿದ್ದು ನೀರು ಇಂಗಲು ಸರಿಯಾದ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವುದು. 2 ರಿಂದ 3 ವರ್ಷಕ್ಕೊಮ್ಮೆ ಬೆಳೆ ಬದಲಾವಣೆ ಮಾಡುವುದು. ಸಿಸ್ಟೆಮ್ಯಾಟಿಕ್ ಶಿಲೀಂದ್ರ ನಾಶಕಗಳಾದ ಪ್ರೋಪಿಕೋನೋಜೋಲ್ 25 ಇ.ಸಿ 1 ಮಿ.ಲೀ. ಅಥವಾ ಹೆಕ್ಸಕೋನೋಜೋಲ್ 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಜೊತೆಗೆ ಅಂಟು ದ್ರಾವಣ 0.25 ಮಿ.ಲೀ ಪ್ರತಿ ಲೀಟರ್ ನೀರಿಗ ಬೆರೆಸಿ 10 ದಿನಗಳಿಗೊಮ್ಮೆಯಾದರು ಶಿಲೀಂದ್ರ ನಾಶಕಗಳನ್ನು ಸಿಂಪಡಿಸಬೇಕು.
ಈರುಳ್ಳಿ ಬೆಳೆಯ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿರುವ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!