ಈ ಶಾಲೆಯ ವಿದ್ಯಾರ್ಥಿಗಳಿಗೆ ಬಯಲು ಶೌಚಾಲಯವೆ ಗತಿ…..

Vijayanagara Vani
ಈ ಶಾಲೆಯ ವಿದ್ಯಾರ್ಥಿಗಳಿಗೆ ಬಯಲು ಶೌಚಾಲಯವೆ ಗತಿ…..
oplus_0

ಸಿರುಗುಪ್ಪ.ಆ.29:- ತಾಲ್ಲೂಕಿನ ಗೋಸಬಾಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಾಣವಾಗಿ ತಿಂಗಳುಗಳೇ ಕಳೆದರೂ ಇಲ್ಲಿಯವರೆಗೆ ಉದ್ಘಾಟನೆಯಾಗಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳ ಬಳಕೆಗೆ ಶೌಚಾಲಯ ಬಾಗಿಲು ತೆಗೆದಿಲ್ಲ ಹಾಗೂ ಅಡುಗೆ ಕೋಣೆಗೆ ಬೀಗ ಹಾಕಿರುವುದರಿಂದ ಶಾಲೆಯ ವರಾಂಡದಲ್ಲಿಯೇ ಮಹಿಳೆಯರು ಬಿಸಿಯೂಟ ತಯಾರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ತಾಲ್ಲೂಕಿನ ಭೈರಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೋಸಬಾಳು ಗ್ರಾಮದಲ್ಲಿರುವ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 180 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅಡುಗೆ ಕೋಣೆ ಶಿಥಿಲಗೊಂಡಿದ್ದರಿoದ ಮತ್ತು ವಿದ್ಯಾರ್ಥಿಗಳಿಗೆ ಸುಸಜ್ಜಿತ ಶೌಚಾಲಯ ಒದಗಿಸುವ ಉದ್ದೇಶದಿಂದ ಗ್ರಾ, ಪಂ ವತಿಯಿಂದ ನರೇಗಾ ಯೋಜನೆಯಡಿ ರೂ 7.45 ಲಕ್ಷ ವೆಚ್ಚದಲ್ಲಿ ಅಡುಗೆ ಕೋಣೆ ಮತ್ತು ರೂ 3 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಅಡುಗೆ ಕೋಣೆ ಮತ್ತು ಶೌಚಾಲಯ ಕಾಮಗಾರಿ ಮುಗಿದು ಮೂರು ತಿಂಗಳಾಗಿದ್ದರೂ ಗ್ರಾ,ಪಂ ಅಧಿಕಾರಿಗಳ ನಿರ್ಲಕ್ಷö್ಯದಿಂದ ಇನ್ನೂ ಉದ್ಘಾಟನೆಯಾಗಿಲ್ಲ ಎನ್ನುವ ಕಾರಣದಿಂದ ವಿದ್ಯಾರ್ಥಿಗಳಿಗೆ ಸೌಲಭ್ಯ ಮರೀಚಿಕೆಯಾಗಿದೆ.

ಇದರಿಂದಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶೌಚಕ್ಕೆ ಬಯಲನ್ನೆ ಆಶ್ರಯಿಸುವುದು ಅನಿವಾರ್ಯವಾಗಿದೆ. ಇನ್ನೂ ವರಾಂಡದಲ್ಲಿ ಅಡುಗೆಯನ್ನು ಮಾಡುವಾಗ ಅಡ್ಡಾದಿಡ್ಡಿಯಾಗಿ ತಿರುಗಾಡಿ ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನೇಕ ತಿಂಗಳುಗಳಿ0ದ ವರಾಂಡದಲ್ಲಿಯೇ ಮಳೆ, ಗಾಳಿ ಬಿಸಿಲಿನಲ್ಲಿಯೇ ಅಡುಗೆ ತಯಾರಿಸುವುದು ಅನಿವಾರ್ಯವಾಗಿದೆ ಬಿಸಿಯೂಟ ತಯಾರಿಸುವ ಮಹಿಳೆಯರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ

ಸಣ್ಣಪುಟ್ಟ ಕಾಮಗಾರಿಗಳು ಇನ್ನೂ ಬಾಕಿ ಇವೆ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಪರಿಶೀಲನೆ ನಡೆಸಿದ ನಂತರ ಶೌಚಾಲಯ ಮತ್ತು ಅಡುಗೆ ಕೋಣೆಯನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಒಂದು ವಾರದಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದೆಂದು ಗ್ರಾ.ಪಂ ಪಿಡಿಒ ಲೀಲಾವತಿ ತಿಳಿಸಿದ್ದಾರೆ.

ಕಾಮಗಾರಿಯ ಪರಿಶೀಲನೆಯನ್ನು ಒಂದುವರೆ ತಿಂಗಳ ಹಿಂದೆಯೇ ಮಾಡಿದ್ದು, ಒಂದು ಸಿಂಕ್ ಮತ್ತು ಕೋಣೆಯ ಒಂದು ಭಾಗದಲ್ಲಿ ಬಣ್ಣ ಹಚ್ಚುವ ಕಾರ್ಯ ಬಾಕಿ ಇತ್ತು. ಇದನ್ನು ಒಂದು ವಾರದೊಳಗೆ ಮುಗಿಸಿ ಶಿಕ್ಷಣ ಇಲಾಖೆಗೆ ಶೌಚಾಲಯ ಮತ್ತು ಅಡುಗೆ ಕೋಣೆಯನ್ನು ಹಸ್ತಾಂತರಿಸುವoತೆ ಪಿಡಿಒ ಗೆ ಸೂಚನೆ ನೀಡಲಾಗಿತ್ತು. ಆದರೆ ಇಲ್ಲಿಯ ವರೆಗೆ ಹಸ್ತಾಂತರ ಮಾಡದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮನೋಹರ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಶೌಚಾಲಯ, ಅಡುಗೆ ಕೋಣೆ ನಿರ್ಮಾಣವಾಗಿದೆ, ಆದರೆ ಅಧಿಕಾರಿಗಳ ನಿರ್ಲಕ್ಷö್ಯದಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಸೋಮಲಿಂಗ ತಿಳಿಸಿದ್ದಾರೆ.

ಶಾಲೆಯಲ್ಲಿ ಶೌಚಾಲಯ ಸೌಲಭ್ಯವಿಲ್ಲದೆ ನಾವು ಕೂಡ ಮನೆಗೆ ತೆರಳಿ ಶೌಚಾಕಾರ್ಯವನ್ನು ಮುಗಿಸಿಕೊಂಡು ಬರುತ್ತೇವೆ. ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ ಎಂದು ಮುಖ್ಯಗುರು ಪಂಚಣ್ಣ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!