Ad image

ಮೆದುಳು ಜ್ವರ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಡಾ.ಅಬ್ದುಲ್ಲಾ

Vijayanagara Vani
ಮೆದುಳು ಜ್ವರ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಡಾ.ಅಬ್ದುಲ್ಲಾ
ಬಳ್ಳಾರಿ,ಜು.01
ಮೆದುಳು ಜ್ವರವು ವೈರಾಣುವಿನಿಂದ ಉಂಟಾಗುವ ರೋಗ. ಈ ರೋಗವು ಸೋಂಕಿರುವ ಹಂದಿಗಳಿಂದ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮೆದುಳು ಜ್ವರ ರೋಗಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ ಹಾಗೂ ಬದುಕಿ ಉಳಿದ ವ್ಯಕ್ತಿಗಳಲ್ಲಿ ಅನೇಕರಿಗೆ ನರ ದೌರ್ಬಲ್ಯ ಬುದ್ದಿ ಮಾಂದ್ಯತೆ ಮುಂತಾದ ಪರಿಣಾಮಗಳು ಉಂಟಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
*ರೋಗ ಹರಡುವ ವಿಧಾನ:*
ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ ಮತ್ತು ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯನಿಗೆ ಕಚ್ಚುವುದರಿಂದ ಈ ರೋಗವು ಹರಡುತ್ತದೆ.
*ರೋಗ ಲಕ್ಷಣಗಳು:*
ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು. ಖಾಯಿಲೆಯು ಉಲ್ಬಣಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸಬಹುದು.
*ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳು:*
1 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ 2ಬಾರಿ ಜೆಇ ಲಸಿಕೆ ಕೊಡಿಸಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಬೇಕು. ಹಂದಿಗಳನ್ನು ಜನರ ವಾಸ ಸ್ಥಳದಿಂದ ಕನಿಷ್ಟ ಪಕ್ಷ 3 ಕಿ.ಮೀ ದೂರಕ್ಕೆ ಸ್ಥಳಾಂತರಿಸಬೇಕು. ಹಂದಿ ಗೂಡುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು ಮತ್ತು ಕೀಟನಾಶಕ ಸಿಂಪಡಿಸಬೇಕು.
ಸಂಜೆ ವೇಳೆಯಲ್ಲಿ ಮಕ್ಕಳು ಮೈ ತುಂಬಾ ಬಟ್ಟೆ ಧರಿಸಿ ಓಡಾಡಬೇಕು. ಮಲಗುವಾಗ ತಪ್ಪದೇ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಬೇವಿನ ಮಿಶ್ರಣದ ಗೊಬ್ಬರವನ್ನು ಭತ್ತದ ಗದ್ದೆಗಳಲ್ಲಿ ಬಳಸುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು. ನೀರು ನಿಂತ ಸ್ಥಳಗಳಲ್ಲಿ (ಕೆರೆ, ಭಾವಿ, ಹೊಂಡ ಇತ್ಯಾದಿ) ಲಾರ್ವಹಾರಿ ಮೀನುಗಳನ್ನು ಬಿಡಬಹುದು.
*ಮೆದುಳು ಜ್ವರ ಸಮೀಕ್ಷೆ:*
ಸಂಶಯಾತ್ಮಕ ಮೆದುಳು ಜ್ವರ (ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್) ಮತ್ತು ಅರಿವಳಿಕೆ ಪ್ರಕರಣಗಳನ್ನು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪೆÇ್ರೀಗ್ರಾಂನ Form:S ನಲ್ಲಿ ದಾಖಲಿಸಿ, ಇಂತಹ ಪ್ರಕರಣಗಳನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರ ಅಥವಾ ತಜ್ಞರು ಇರುವ ಆಸ್ಪತ್ರೆಗೆ ಕೂಡಲೇ ಕಳುಹಿಸಿಕೊಡಲಾಗುತ್ತದೆ.
ಖಚಿತ ಪ್ರಕರಣ ವರದಿಯಾದಾಗ ಪ್ರಮಾಣದ ವರದಿ ಅನುಸಾರ ಆ ಹಳ್ಳಿಯ ಸುತ್ತ-ಮುತ್ತ ಪ್ರದೇಶದಲ್ಲಿ ಯಾವುದೇ ಸಂಶಯಾಸ್ಪದ ಪ್ರಕರಣಗಳಿಗೋಸ್ಕರ ಸಮೀಕ್ಷೆ ನಡೆಸಲಾಗುತ್ತದೆ. ಇದಲ್ಲದೆ ಹಂದಿಗಳ ಸಮೀಕ್ಷೆ ಮತ್ತು ಸೊಳ್ಳೆಗಳ ಸಮೀಕ್ಷೆಯನ್ನೂ ಮಾಡಲಾಗುತ್ತದೆ.
ಆರೋಗ್ಯ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡಿ ಜ್ವರ ಪ್ರಕರಣಗಳ ಸಮೀಕ್ಷೆಯನ್ನು ಮಾಡಿ, ಯಾವುದೇ ವ್ಯಕ್ತಿಯಲ್ಲಿ ಜ್ವರದ ಜೊತೆಗೆ ಅರಿವಳಿಕೆ ಇದ್ದಾಗ Form:S (Fever with altered semorium) ನಲ್ಲಿ ವರದಿಯನ್ನು ಮಾಡುತ್ತಾರೆ. ಇದರಿಂದ, ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ ಸಮೀಕ್ಷೆ ಸಾಧ್ಯವಾಗುತ್ತದೆ. ಇಂತಹ ಪ್ರಕರಣಗಳನ್ನು ಹತ್ತಿರದ ಸೂಕ್ತ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.
ಖಚಿತ ಪ್ರಕರಣಗಳು ಪತ್ತೆಯಾದಾಗ ಆ ಪ್ರದೇಶದ ಎಲ್ಲಾ ಮನೆಗಳಿಗೆ ಒಂದು ಸುತ್ತು ಒಳಾಂಗಣ ಕೀಟನಾಶಕ ಸಿಂಪಡಣೆ ಹಾಗೂ ನಾಲ್ಕು ಸುತ್ತು ಹೊರಾಂಗಣದಲ್ಲಿ ಧೂಮೀಕರಣ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಒಂದು ವಾರದ ಅಂತರದಲ್ಲಿ 4 ಬಾರಿ ನಡೆಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ವಿಬಿಡಿಸಿ ಅಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ತಿಳಿಸಿದ್ದಾರೆ.
Share This Article
error: Content is protected !!
";