ರಾಯಚೂರು ಜುಲೈ 03 : ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 08 ರಿಂದ ಆಗಸ್ಟ್ 22ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲೆಯ ಎಲ್ಲಾ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕೆಂದು ರಾಯಚೂರು ವಿಭಾಗೀಯ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಹೇಳಿದರು.
ಜುಲೈ 03ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜರುಗಿದ ಸೇನಾ ನೇಮಕಾತಿ ರ‍್ಯಾಲಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಬೇರೆ, ಬೇರೆ ಜಿಲ್ಲೆಗಳಿಂದ ಸುಮಾರು 15 ರಿಂದ 16 ಸಾವಿರ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಈ ರ‍್ಯಾಲಿಯ ಯಶಸ್ವಿ ನಿರ್ವಹಣೆಗಾಗಿ ವೇದಿಕೆ ಸಮಿತಿ, ಭದ್ರತಾ ಸಮಿತಿ, ಮೂಲಭೂತ ಸೌಕರ್ಯ ಸಮಿತಿ, ಸಾರಿಗೆ ಸಮಿತಿ, ಆಹಾರ ಸಮಿತಿ, ವಸತಿ ಸಮಿತಿ, ಆರೋಗ್ಯ ನೈರ್ಮಲ್ಯೀಕರಣ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ವಿದ್ಯುತ್ ಸರಬರಾಜು ಸಮಿತಿ ಹಾಗೂ ದಾಖಲೆಗಳ ಪರಿಶೀಲನೆ ಸಮಿತಿ ರಚಿಸಲಾಗಿದೆ.
ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಹಾಗೂ ನಿಯೋಜಿತ ಸಿಬ್ಬಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮತ್ತು ಬಳಕೆಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಹಾಗೂ ಕ್ರೀಡಾಂಗಣದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ಅಭ್ಯರ್ಥಿಗಳಿಗೆ ತಂಗಲು ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಕ್ರೀಡಾಂಗಣದಲ್ಲಿ ಆರೋಗ್ಯ ಅಧಿಕಾರಿಗಳ ತಂಡ ಹಾಗೂ ಅಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ತಂಡ, ವಿದ್ಯುತ್ ದೀಪದ ವ್ಯವಸ್ಥೆ ಸೇರಿದಂತೆ ಮುಂತಾದ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೇಮಕಾತಿ ರ‍್ಯಾಲಿಗೆ ಆಗಮಿಸುವ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ರ‍್ಯಾಲಿ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗುವುದು. ಜನಸಂದಣಿ ನಿರ್ವಹಣೆಗಾಗಿ ಕ್ರೀಡಾಂಗಣದ ಹೊರಗಡೆ, ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ರಸ್ತೆ ಸಂಚಾರಕ್ಕೆ ತೊಂದರೆಯಾಗದAತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಸೇನಾ ನೇಮಕಾತಿ ಅಧಿಕಾರಿ ಎ.ಕೆ.ಉಪಾಧ್ಯಾಯ ಅವರು ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ 08 ರಿಂದ ಆಗಸ್ಟ್ 22ರವರೆಗೆ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಗೆ ರಾಯಚೂರು ಜಿಲ್ಲಾಡಳಿತದಿಂದ ನಮಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ನೇಮಕಾತಿ ಪಾರದರ್ಶಕವಾಗಿ ನಡೆಸುತ್ತಿರುವುದರಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮತ್ತು ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗಾಗಿ ಕಂದಾಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಸೇನಾ ನೇಮಕಾತಿ ರ‍್ಯಾಲಿಯು ಸುಸೂತ್ರವಾಗಿ ನಡೆದರೆ ರಾಯಚೂರು ಜಿಲ್ಲಾಡಳಿತಕ್ಕೆ ಮತ್ತು ನಮ್ಮ ಸೇನೆಗೂ ಒಳ್ಳೆಯ ಹೆಸರು ಬರುತ್ತದೆ. ಹಾಗಾಗಿ ರ‍್ಯಾಲಿಯನ್ನು ಸುವ್ಯವಸ್ಥಿತವಾಗಿ ನಡೆಸಲು ತಮ್ಮ ಸಹಕಾರ ನಮಗೆ ಅತ್ಯಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಶ ಬಾಬು, ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ದೇಸಾಯಿ, ಪಶ್ಚಿಮ ವೃತ್ತದ ಸಿಪಿಐ ನಿಂಗಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವ್ಯವಸ್ಥಾಪಕ ಸಂತೋಷ, ಪಶ್ಚಿಮ ಪೊಲೀಸ್ ಠಾಣೆಯ ಪಿ.ಎಸ್.ಐ ಮಂಜುನಾಥ, ಅಗ್ನಿಶಾಮಕ ದಳದ ರವೀಂದ್ರ ಘಟಿಗಿ ಸೇರಿದಂತೆ ಇತರರು ಇದ್ದರು.