Ad image

ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಮುನಿರಾಬಾದ್ ರೈಲು ನಿಲ್ದಾಣ — ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಜಿ ಅವರಿಂದ ದೇಶದ 103 ರೈಲು ನಿಲ್ದಾಣಗಳು ಮತ್ತು ಇತರೆ ಯೋಜನೆಗಳ ಉದ್ಘಾಟನೆ

Vijayanagara Vani
ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಮುನಿರಾಬಾದ್ ರೈಲು ನಿಲ್ದಾಣ — ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಜಿ ಅವರಿಂದ ದೇಶದ 103 ರೈಲು ನಿಲ್ದಾಣಗಳು ಮತ್ತು ಇತರೆ ಯೋಜನೆಗಳ ಉದ್ಘಾಟನೆ
ಕೊಪ್ಪಳ ಮೇ 22): ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲು ನಿಲ್ದಾಣ ಸೇರಿ ದೇಶದ 103 ರೈಲು ನಿಲ್ದಾಣಗಳು ಮತ್ತು ಇತರ ಯೋಜನೆಗಳನ್ನು ಪ್ರಧಾನಂತ್ರಿಗಳಾದ ನರೇಂದ್ರ ಮೋದಿಜಿ ಅವರು ಗುರುವಾರ ರಾಜಸ್ಥಾನ ರಾಜ್ಯದ ಬಿಕಾನೆರದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು.
ಮುನಿರಾಬಾದ್ ರೈಲು ನಿಲ್ದಾಣವನ್ನು ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ರೂ. 18.40 ಕೋಟಿ ವೆಚ್ಚದಲ್ಲಿ ವಿಶ್ವ ದರ್ಜೆಯ ಸೌಲಭ್ಯವನ್ನಾಗಿ ಪುನರಾಭಿವೃದ್ಧಿಪಡಿಸಲಾಗಿದೆ. ಈ ಆಧುನಿಕ ಜಿ+1 ನಿಲ್ದಾಣವು ಈಗ ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲವನ್ನು ನೀಡುತ್ತದೆ. ಇದು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಮಗ್ರ ಸೌಲಭ್ಯಗಳನ್ನು ಒಳಗೊಂಡಿದ್ದು, ‘ಹೊಸ ಭಾರತ’ದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಈ ನವೀಕರಣವು ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡುವ ಗುರಿಯನ್ನು ಹೊಂದಿದ್ದು, ಮುನಿರಾಬಾದ್ ರೈಲು ನಿಲ್ದಾಣದಲ್ಲಿ ಉತ್ತಮ ಪಾರ್ಕಿಂಗ್, ನಿರೀಕ್ಷಣಾ ಕೊಠಡಿ, ಜಲ ಸಂರಕ್ಷಣೆ, ಸೌರಶಕ್ತಿ, ಹಸಿರು ಸ್ಥಳಗಳ ಮತ್ತು ಇತರೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.
ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳ ಉದ್ಘಾಟನೆ ಅಂಗವಾಗಿ ಮುನಿರಾಬಾದ್ ರೈಲು ನಿಲ್ದಾಣದ ಆವರಣದಲ್ಲಿಯೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಭಾಗವಹಿಸಿ ಮಾತನಾಡಿ, ಬಡವರಿಗೆ ಕಡಿಮೆ ದರದಲ್ಲಿ ಸಾರಿಗೆ ಸೇವೆ ಒದಗಿಸುವ ವ್ಯವಸ್ಥೆ ರೈಲ್ವೆ ಇಲಾಖೆಯದ್ದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ದರದಲ್ಲಿ ದೇಶಾದ್ಯಂತ ಪ್ರಯಾಣ ಮಾಡಲು ರೈಲ್ವೆ ವಲಯ ಒಂದು ಜನಸ್ನೇಹಿಯಾಗಿದೆ. ಇಂತಹ ರೈಲ್ವೆ ಇಲಾಖೆಯಲ್ಲಿ ರೈಲು ನಿಲ್ದಾಣಗಳನ್ನು ಉನ್ನತೀಕರಿಸಿ, ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡುವಂತಹ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಇದರ ಭಾಗವಾಗಿ ಮುನಿರಾಬಾದ್ ರೈಲ್ವೆ ನಿಲ್ದಾಣ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಪಡಿಸಿ ರೂ. 18.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ಶ್ರೀ ಹುಲಿಗೆಮ್ಮ ದೇವಿ ಸ್ಥಾನದ ದರ್ಶನಕ್ಕಾಗಿ ಬರುವ ಭಕ್ತಾಧಿಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.
ನಮ್ಮ ಭಾಗದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಆಗಬೇಕಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮುನಿರಾಬಾದ್ ರೈಲು ನಿಲ್ದಾಣಕ್ಕೆ ಶ್ರೀ ಹುಲಿಗೆಮ್ಮ ದೇವಿ ತಾಯಿಯ ಹೆಸರಿಡುವಂತೆ ಹಲವಾರು ಜನರು ಮನವಿ ಮಾಡಿದ್ದು, ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋದ ತಕ್ಷಣ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಬಾಣಾಪುರ ರೈಲು ನಿಲ್ದಾಣಕ್ಕೆ ಮಹಾತ್ಮಾ ಗಾಂಧಿಜಿ ಹಾಗೂ ಗಂಗಾವತಿ ರೈಲು ನಿಲ್ದಾಣಕ್ಕೆ ಕಿಷ್ಕಿಂದ ಎಂದು ಮರು ನಾಮಕರಣಕ್ಕೆ ಪ್ರಸ್ತಾವನೆಯನ್ನು ಕೊಡಲಾಗಿದೆ. ಹುಬ್ಬಳ್ಳಿಯಿಂದ ಹೊಸಪೇಟೆಗೆ ಬರುವ ರೈಲ್ವೆ ಮಾರ್ಗದಲ್ಲಿ ಬಹಳಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ಎರಡು ರೈಲು ಹಳಿಗಳನ್ನು ನಿರ್ಮಾಣ ಮಾಡುವ ಕೆಲಸ ಆಗಬೇಕಿದೆ. ರೈಲ್ವೆ ಮಾರ್ಗದಲ್ಲಿ ಬರುವ ಎಲ್ಲಾ ರೈಲ್ವೆ ಗೇಟ್‌ಗಳಲ್ಲಿ ಮಾನವ ರಹಿತ ಕ್ರಾಸಿಂಗ್ ವ್ಯವಸ್ಥೆ ಆಗಲಿವೆ. ನಿರ್ಮಾಣದಲ್ಲಿರುವ ಹುಲಿಗಿಯ ರೈಲ್ವೆ ಗೇಟ್‌ನ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಲಾಗುವುದು. ನಮ್ಮ ಭಾಗದಲ್ಲಿರುವ ಹನುಮನ ಜನ್ಮಸ್ಥಳವಾದ ಅಂಜಾದ್ರಿಯಿಂದ ಅಯೋಧ್ಯೆಗೆ ವಿಶೇಷ ರೈಲು ಓಡಿಸಬೇಕೆಂಬುದು ಇಲ್ಲಿನ ಬಹುಜನರ ಬೇಡಿಕೆಯಾಗಿದೆ. ಇದಕ್ಕಾಗಿ ರೈಲ್ವೆ ಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯ ರೈಲ್ವೆ ಅಭಿವೃದ್ಧಿಯಲ್ಲಿ ಹಿಂದಿನ ಸಂಸದರಾದ ಕರಡಿ ಸಂಗಣ್ಣನವರ ಪರಿಶ್ರಮವೂ ಇದೆ. ಹೊಸ ರೈಲು ಮಾರ್ಗಗಳಾದ ಗಂಗಾವತಿ-ಬಾಗಲಕೋಟೆ ಲೈನ್‌ಗೆ ರೂ. 950 ಕೋಟಿ ಹಾಗೂ ಗಂಗಾವತಿ-ದರೋಜಿ ಲೈನ್‌ಗೆ ರೂ. 402 ಕೋಟಿಗಳ ಅನುದಾನವನ್ನು ನೀಡಲು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ವಿ.ಸೋಮಣ್ಣನವರಿಗೆ ಮನವಿ ಮಾಡಿದ್ದು, ಈ ವರ್ಷ ಒಂದು ಮತ್ತು ಮುಂದಿನ ವರ್ಷ ಮತ್ತೊಂದು ಕಾಮಗಾರಿಗೆ ಅನುಮೋದನೆ ನೀಡುವುದಾಗಿ ಸಚಿವರು ಭರವಸೆಯನ್ನು ನೀಡಿದ್ದಾರೆ. ಕೊಪ್ಪಳ ನಗರದ ಸ್ವಾಮಿವಿವೇಕಾನಂದ ಶಾಲೆಯ ಹತ್ತಿರದ ರೈಲ್ವೆ ಲೈನ್ ಬಳಿಯ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಹಿಟ್ನಾಳ್ ಕ್ರಾಸ್ ಎಲ್.ಸಿ ಸಂಖ್ಯೆ-17ಕ್ಕೆ ಟೆಂಡರ್ ಆಗಿದ್ದು, ಶೀಘ್ರದಲ್ಲಿಯೇ ಅಡಿಗಲ್ಲು ಹಾಕಲಾಗುವುದು. ಮುನಿರಾಬಾದ್ ರೈಲು ನಿಲ್ದಾಣದಲ್ಲಿ ನಿಲ್ಲದ ಟ್ರೈನ್‌ಗಳ ನಿಲುಗಡೆಗೆ ಸಾರ್ವಜನಿಕರು ಮನವಿ ಮಾಡಿದ್ದು, ಇದಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಮುನಿರಾಬಾದ ರೈಲ್ವೆ ನಿಲ್ದಾಣವು ನವೀಕರಣಗೊಂಡು ಉದ್ಘಾಟನೆಯಾಗಿರುವುದು ನಮ್ಮ ಭಾಗದ ಜನರಿಗೆ ಇಂದು ಸಂತಸದ ದಿನವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ರೈಲ್ವೆಯ ಹೊಸ-ಹೊಸ ಮಾರ್ಗಗಳಿಂದಾಗಿ ಜನರಿಗೆ ವಿವಿಧ ಊರುಗಳ ಪ್ರಯಾಣಕ್ಕೆ ಅನುಕೂಲವಾಗುತ್ತಿದೆ. ಮುಂಬರುವ ದಿನಮಾನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಟ್ರಂಕ್ ರೂಟ್ ವ್ಯವಸ್ಥೆಯಾಗಲಿದೆ. ಮುನಿರಾಬಾದ್ ರೈಲು ನಿಲ್ದಾಣದ ಅಭಿವೃದ್ಧಿಯಿಂದ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತಾಧಿಕಗಳಿಗೆ ಹಾಗೂ ಇಲ್ಲಿನ ಸುತ್ತು-ಮುತ್ತಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ತುಂಬಾ ಅನುಕೂಲವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ, ಮುನಿರಾಬಾದ್ ರೈಲು ನಿಲ್ದಾಣ ಹೆಚ್ಚು ಜನ ದಟ್ಟಣೆ ಇರುವ ನಿಲ್ದಾಣವಾಗಿದೆ. ಹುಲಿಗೆಮ್ಮ ದೇವಿ ದೇವಸ್ಥಾನ ಇರುವುದರಿಂದ ಇಲ್ಲಿಗೆ ಲಕ್ಷ್ಯಾಂತರ ಭಕ್ತರು ಬರುತ್ತಾರೆ ಹಾಗಾಗಿ ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೆಮ್ಮ ದೇವಿ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕು. ಅಮೃತ ಭಾರತ ಸ್ಟೇಷನ್ ಅಡಿ ಪುರಾಭಿವೃದ್ಧಿ ಪಡಿಸಲಾದ ಮುನಿರಾಬಾದ್ ರೈಲು ನಿಲ್ದಾಣ ಸೇರಿದಂತೆ ದೇಶದ 103 ರೈಲು ನಿಲ್ದಾಣಗಳನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ಇಂದು ಉದ್ಘಾಟನೆ ನೆರವೇರಿಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳು ತುಂಭಾ ಸುಂದರವಾಗಿಗೆ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಪ್ರವಾಸಿ ಸ್ಥಳಗಳು ಇರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೂ ರೈಲು ಸಾರಿಗೆಯಿಂದ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ: ನೈಋತ್ಯ ರೈಲ್ವೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಾಗಿದ್ದ ಪ್ರಬಂಧ, ಚರ್ಚಾ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
*ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ:* ನೈಋತ್ಯ ರೈಲ್ವೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಾಗಿದ್ದ ಪ್ರಬಂಧ, ಚರ್ಚಾ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಹುಲಿಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿಲಮ್ಮ ಸಿದ್ದಪ್ಪ ಗುಂಗಾಡಿ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಮಾಜಿ ಶಾಸಕರಾದ ಬಸಬವರಾ ದಢೇಸೂಗೂರು, ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿ ಎಂ.ಹೆಚ್.ಪ್ರಕಾಶರಾವ್, ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ವಿಭಾಗಿಯ ವ್ಯವಸ್ಥಾಪಕ ಡಾ. ಅನೂಪ್ ಅಳ್ವಾ ಸೇರಿದಂತೆ ಇತರೆ ಜನಪ್ರತಿನಿಧಿಗಳು ಮತ್ತು ಮುನಿರಾಬಾದ್ ರೈಲ್ವೆ ನಿಲ್ದಾಣದ ಅಧಿಕಾರಿ, ಸಿಬ್ಬಂದಿ ಹಾಗೂ ಹುಲಿಗಿ ಗ್ರಾಮಸ್ಥರು ಉಪಸ್ಥಿತರಿದ್ದರು.

Share This Article
error: Content is protected !!
";