ಕಂಪ್ಲಿ: ಎಲ್ಲ ಜನಾಂಗಕ್ಕಿ0ತಲೂ ಭೋವಿ ಸಮಾಜ ಅತ್ಯಂತ ಹಿಂದುಳಿದಿದ್ದು, ಇದರ ಅಭಿವೃದ್ಧಿ ಪ್ರತಿಯೊಬ್ಬರೂ ಶಿಕ್ಷಣ ಹೊಂದಿದಾಗ ಮಾತ್ರ ಸಾಧ್ಯ ಎಂದು ಕರ್ನಾಟಕ ಭೋವಿ ವಡ್ಡರ ಮಹಾಸಭಾದ ಬಳ್ಳಾರಿ ಜಿಲ್ಲಾಧ್ಯಕ್ಷ ಬಳ್ಳಾಪುರ ವಿ.ಮೌನೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬುಧವಾರ ಪಟ್ಟಣದ ಐತಿಹಾಸಿಕ ಸೋಮಪ್ಪ ದೇವಸ್ಥಾನ ಆವರಣದಲ್ಲಿ ನಡೆಸಿದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ನೇತೃತ್ವವಹಿಸಿ ಮಾತನಾಡಿ, ಭೋವಿ ಸಮಾಜದ ಜನರು ಶಾಂತಿ ಮತ್ತು ಪ್ರೀತಿಯಿಂದ ಬದುಕುವ ಜೊತೆಗೆ ವಿಶ್ವಾಸಕ್ಕೆ ಪಾತ್ರರಾದವರು. ಸಮಾಜದ ಒಗ್ಗಟ್ಟಿಗೆ ಜನಜಾಗೃತಿ ಅವಶ್ಯಕವಾಗಿದೆ. ಭೋವಿ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದು, ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡಬೇಕು. ನೂತನ ಪದಾಧಿಕಾರಿಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಅಣಿಯಾಗುವ ಜತೆಗೆ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ಯೋಜನೆಗಳನ್ನು ಭೋವಿ ಸಮಾಜದ ಜನತೆಗೆ ತಲುಪಿಸುವಲ್ಲಿ ಹಗಲಿರುಳು ಶ್ರಮಿಸಬೇಕು ಎಂದರು. ನಂತರ ಕರ್ನಾಟಕ ಭೋವಿ ವಡ್ಡರ ಮಹಾಸಭಾದ ಕಂಪ್ಲಿ ತಾಲೂಕು ಘಟಕಕ್ಕೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ವಿ.ಈರಣ್ಣ, ವಿ.ಸೋಮಣ್ಣ, ಡಾ.ಉಮೇಶ, ಮಣ್ಣೂರು ವಿರೇಶ, ನಾಗೇಂದ್ರ, ಲೋಕೇಶ, ವಿರೇಶ, ಮಹರಾಜ, ವದ್ದಪ್ಪ, ಶಿವರಾಜ, ನಾಗೇಂದ್ರ, ಪವನ್, ಕೊಟ್ರೇಶ, ಗಣೇಶ ಸೇರಿದಂತೆ ಇತರರು ಇದ್ದರು.
ಆಯ್ಕೆ: ಕರ್ನಾಟಕ ಭೋವಿ ವಡ್ಡರ ಮಹಾಸಭಾದ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸತ್ಯಪ್ಪ, ಬಾಲರಾಜ್(ಗೌರವಾಧ್ಯಕ್ಷರು), ವಿ.ಟಿ.ಕುಮಾರ(ಅಧ್ಯಕ್ಷ), ದೇವಸಮುದ್ರ ವಿ.ಮಾರೆಣ್ಣ(ಉಪಾಧ್ಯಕ್ಷ), ವಿ.ಕಾರ್ತಿಕ(ಪ್ರಧಾನ ಕಾರ್ಯದರ್ಶಿ), ವಿ.ಸತೀಶ, ಶರಣ(ಕಾರ್ಯದರ್ಶಿ), (ಸಂ.ಕಾರ್ಯದರ್ಶಿ), ಅಡಿವೆಪ್ಪ(ಖಜಾಂಚಿ) ಇವರು ಆಯ್ಕೆಗೊಂಡರು.