Ad image

ಗುಣಾತ್ಮಕ ವ್ಯವಸ್ಥಿತ ವಿಮರ್ಶೆ, ಸಂಶೋಧನಾ ವಿಧಾನ ಮತ್ತು ಅನುದಾನ ಬರವಣಿಗೆ ಕುರಿತ ಕಾರ್ಯಾಗಾರಕ್ಕೆ ಕಿಟ್ಸ್ ವ್ಯವಸ್ಥಾಪಕಿ ಅರ್ಚನಾ ಸಿ ಅವರಿಂದ ಚಾಲನೆ

Vijayanagara Vani
ಗುಣಾತ್ಮಕ ವ್ಯವಸ್ಥಿತ ವಿಮರ್ಶೆ, ಸಂಶೋಧನಾ ವಿಧಾನ ಮತ್ತು ಅನುದಾನ ಬರವಣಿಗೆ ಕುರಿತ ಕಾರ್ಯಾಗಾರಕ್ಕೆ ಕಿಟ್ಸ್ ವ್ಯವಸ್ಥಾಪಕಿ ಅರ್ಚನಾ ಸಿ ಅವರಿಂದ ಚಾಲನೆ
ಧಾರವಾಡ ಫೆ.24: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಸ್ಟಾರ್ಟ ಅಪ್ ಕರ್ನಾಟಕ, ಕಿಟ್ಸ್ ಸಂಸ್ಥೆ, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇವರ ಸಹಯೋಗದಲ್ಲಿ ಧಾರವಾಡದ ನಗರದಲ್ಲಿ ಇಂದು (ಫೆ.24) ರಂದು ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರು ಕಿಟ್ಸ್ ವ್ಯವಸ್ಥಾಪಕಿ ಅರ್ಚನಾ ಸಿ. ಅವರು ಉದ್ಘಾಟಿಸಿ ಮಾತನಾಡಿದರು.
ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಅತ್ಯುತ್ತಮವಾದ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಒಳ್ಳೆಯ ಸಂಶೋಧನೆಗಳು ರಾಷ್ಟ್ರದ ಅಭಿವೃದ್ದಿಗೆ ಸಹಾಯಕವಾಗುತ್ತವೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆಯೆಂದರು.
ಇಂದು ಒತ್ತಡ, ಖಿನ್ನತೆ ಹಾಗೂ ಆತಂಕ ಕಾಯಿಲೆ ಹಾಗೂ ಮುಂತಾದ ಮಾನಸಿಕ ಕಾಯಿಲೆಗಳಿಗೆ ಕೃತಕ ಬುದ್ದಿಮತ್ತೆಯಿಂದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಸಂಶೋಧನಾ ಚಟುವಟಿಕೆಗಳು ಪ್ರಾರಂಭವಿಸುವಲ್ಲಿ ವಿವಿಧ ಸಂಸ್ಥೆಗಳು ಮುಂದೆ ಬರುತ್ತಿವೆಯೆಂದು ಹೇಳಿದರು.
ಡಿಮ್ಹಾನ್ಸ್ ಸಂಸ್ಥೆಯು ಈ ನಿಟ್ಟಿನಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ಸಂತೋಷದ ವಿಷಯ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂಶೋಧಕರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿ ಪಡೆದುಕೊಂಡು ಹೊಸ ಸಂಶೋಧನೆಗಳನ್ನು ಮಾಡಲು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.
ಡಿಮ್ಹಾನ್ಸ್ ನಿರ್ದೇಶಕರು ಡಾ.ಅರುಣಕುಮಾರ ಸಿ. ಅವರು ಮಾತನಾಡಿ, ಇಂದು ನೂತನ ಸಂಶೋಧನೆಗಳು ಮತ್ತು ಸಮಾಜದ ಒಳಿತಿಗಾಗಿ ಬೇಕಾಗಿರುವ ಸಂಶೋಧನೆಗಳು ಅಗತ್ಯವಾಗಿವೆ. ಸಂಶೋಧನಾ ವಿದ್ಯಾರ್ಥಿಗಳು, ವೃತ್ತಿಪರ ಸಂಶೋಧಕರು, ವಿದ್ಯಾರ್ಥಿಗಳು ಹೊಸ ಸಂಶೋಧನೆಗಳಿಗೆ ಇರುವ ಸಾಕಷ್ಟು ಅವಕಾಶಗಳನ್ನು ತಿಳಿದುಕೊಳ್ಳಬೇಕಾಗಿದೆ. ಡಿಮ್ಹಾನ್ಸ್ ಸಂಸ್ಥೆ ಹಾಗೂ ಇತರ ಸಂಸ್ಥೆಗಳಿಂದ ಆಯೋಜಿದ ಇಂತಹ ಕಾರ್ಯಾಗಾರದ ಸದ್ಭಳಕೆಯನ್ನು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಾಡಿಕೊಳ್ಳಬೇಕೆಂದರು.
ಮಾನಸಿಕ ಆರೋಗ್ಯ ಹಾಗೂ ಕೃತಕ ಬುದ್ದಿಮತ್ತೆ (ಆರ್ಟಿಪಿಸಿಯಲ್ ಇಂಟೆಲಿಜೆನ್ಸ್) ಗೆ ಸಂಬಂಧಿಸಿದಂತೆ ಹೊಸ ಸಂಶೋಧನೆಗಳು ಪ್ರಾರಂಭವಾಗಿದೆ. ಆಧುನಿಕ ತಂತ್ರಜ್ಞಾನದ ಪ್ರಯೋಜನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಐಐಐಟಿ ಸಂಸ್ಥೆ ಧಾರವಾಡದ ಸಹಯೋಗದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಸಂಶೋಧನೆಗಳು ಕೇವಲ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದಲ್ಲ. ಸಂಶೋಧನೆ ಹೊಸ ಜ್ಞಾನವನ್ನು ಕೊಡುವುಂತಹದ್ದು, ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಮಾಜಕ್ಕೆ ಒಳ್ಳೆಯ ಕೊಡಿಗೆಗಳನ್ನು ನೀಡುವುದು ಒಳ್ಳೆಯ ಸಂಶೋಧನೆಯ ಲಕ್ಷಣವಾಗಿದೆ ಎಂದರು.
ಡಿಮ್ಹಾನ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಮಾತನಾಡಿ, ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಡಿಮ್ಹಾನ್ಸ್ ಸಂಸ್ಥೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಡಿಮ್ಹಾನ್ಸ್ ಸಂಸ್ಥೆಯಿಂದ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಡಿಮ್ಹಾನ್ಸ್ ಸಂಸ್ಥೆಯಲ್ಲಿ ನ್ಯೂರೋಸರ್ಜರಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರಕಾರದಿಂದ ಉತ್ತಮ ಬೆಂಬಲ ದೊರಕಿದೆ ಎಂದರು.
ಪದವಿ ವಿದ್ಯಾರ್ಥಿಗಳು, ಸ್ನಾತ್ತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳಿಗೆ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಸಂಶೋಧನಾ ಯೋಜನೆಗಳಿಗೆ ಇರುವ ಹಣಕಾಸಿನ ಲಭ್ಯತೆ ಹಾಗೂ ಇತರ ಅವಶ್ಯಕ ಬರವಣೆಗೆಗಳ ಕುರಿತು ತಿಳಿಸಿಕೊಡುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದ್ದು ಇವುಗಳನ್ನು ಸರಿಯಾಗಿ ಮಾಡಿಕೊಂಡು ಉತ್ತಮ ಸಂಶೋಧಕರಾಗಬೇಕು. ಸಮಾಜದಲ್ಲಿ ಒಳ್ಳೆಯ ಸಂಶೋಧನೆಗಳಿಗೆ ಬೇಡಿಕೆಯಿದೆ, ಸಂಕೀರ್ಣ ಸ್ವರೂಪದ ಸಮಸ್ಯೆಗಳಿಗೆ ಉತ್ತಮವಾದ ಸಂಶೋಧನೆಯಿಂದ ಪರಿಹಾರಕಂಡುಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು.
ಈ ಕಾರ್ಯಾಗಾರಕದಲ್ಲಿ ಅತಿಥಿಗಳಾಗಿ ಪೆÇ್ರೀ.ಎಸ್.ಆರ್.ಮಹದೇವ ಪ್ರಸನ್ನ ಐ.ಐ.ಐ.ಟಿ ಧಾರವಾಡ, ಭಾಗವಹಿಸಿ ಮಾತನಾಡಿದರು. ಕೃತಕ ಬುದ್ಧಿಮತ್ತೆ (ಆರ್ಟಿಪಿಶಿಯಲ್ ಇಂಟಲಿಜೆನ್ಸ್) ಮತ್ತು ಮೆಷಿನ್ ಲನಿರ್ಂಗ್ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪ್ರಾರಂಭ ಹಂತದಲ್ಲಿ ರೋಗ ಗುರುತಿಸುವಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ದಿನಗಳು ದೂರವಿಲ್ಲವೆಂದರು.
ಡಿಮ್ಹಾನ್ಸ್ ಸಂಸ್ಥೆ ಹಾಗೂ ಐಐಐಟಿ ಧಾರವಾಡ ಸಂಸ್ಥೆಗಳೂ ಸೇರಿ ಸಂಶೋಧನಾ ಚಟುವಟಿಕೆಗಳನ್ನು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧ ಪಟ್ಟಂತೆ ಪ್ರಾರಂಭಿಸಲಾಗಿದೆ. ಇನ್ನು ಹಲವು ಸಂಶೋಧನಾ ಕಾರ್ಯಾಚಟುವಟಿಕೆಗಳನ್ನು ಮಾಡಲು ಉದ್ದೇಶಿಸಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ವೈದ್ಯಕೀಯ, ಅರೆವೈದ್ಯಕೀಯ, ಸಮಾಜಕಾರ್ಯ ಹಾಗೂ ಇತರ ಕ್ಷೇತ್ರಗಳಿಂದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳು ಭಾಗವಹಿಸಿದ್ದರು.
ದೇಶದ ವಿವಿಧ ಸಂಸ್ಥೆಗಳ ಪ್ರಾಧ್ಯಾಪಕರು ಹಾಗೂ ತಜ್ಞರು ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ವಿವಿಧ ವಿಷಗಳ ಮೇಲೆ ವಿಷಯ ಮಂಡನೆ ಮಾಡಿದರು.
ಕಾರ್ಯಾಗಾರದ ಸಂಘಟನಾ ಸಮಿತಿಯ ಮುಖ್ಯಸ್ಥ ಡಾ.ಶ್ರೀನಿವಾಸ ಕೊಸಗಿ, ಸಹ-ಸಂಘಟನಾ ಸಮಿತಿಯ ಮುಖ್ಯಸ್ಥ ಡಾ.ಶಿವರುದ್ರಪ್ಪ ಭೈರಪ್ಪನವರ, ಕಾರ್ಯದರ್ಶಿ ಡಾ.ಸುಶೀಲ ಕುಮಾರ ರೋಣದ, ಖಜಾಂಚಿ ಡಾ.ಮಂಜುನಾಥ ಭಜಂತ್ರಿ, ಜಂಟಿ ಕಾರ್ಯದರ್ಶಿ ಡಾ.ಮೇಘಮಾಲಾ ಟಿ., ಅಶೋಕ ಕೋರಿ, ಆರ್.ಎಮ್.ತಿಮ್ಮಾಪೂರ, ಮಲ್ಲಿಕಾ ಬಿ.ಎನ್., ಸು ಸಿ. ಹಾಗೂ ಇತರ ಅತಿಥಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Share This Article
error: Content is protected !!
";