Ad image

ತ್ರೈಮಾಸಿಕ ಕೆಡಿಪಿ ಸಭೆ ಉತ್ತಮ ಮಳೆ, ಭದ್ರಾ ಭರ್ತಿಗೆ ಕ್ಷಣಗಣನೆ, ಬಿತ್ತನೆ ಬೀಜ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ

Vijayanagara Vani
ತ್ರೈಮಾಸಿಕ ಕೆಡಿಪಿ ಸಭೆ ಉತ್ತಮ ಮಳೆ, ಭದ್ರಾ ಭರ್ತಿಗೆ ಕ್ಷಣಗಣನೆ, ಬಿತ್ತನೆ ಬೀಜ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ

ದಾವಣಗೆರೆ,ಜು.30 ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದು ರೈತರಲ್ಲಿ ಆಶಾ ಭಾವನೆಯನ್ನು ಮೂಡಿಸಿದ್ದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೊದಲ ತ್ರ್ಯೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಅಭಿವೃದ್ದಿ ಕೈಗೊಳ್ಳುವಲ್ಲಿ ವಿವಿಧ ಇಲಾಖೆಗಳಿಂದ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಶೇ 70 ರಷ್ಟು ನೀರಾವರಿ ಕಲ್ಪಿಸುವ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದರಿಂದ ಭತ್ತ ಹಾಗೂ ಅಡಿಕೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಜುಲೈ 29 ರಂದು ನಡೆದ ಕಾಡಾ ಸಭೆಯ ತೀರ್ಮಾನದಂತೆ ಬಲ ಹಾಗೂ ಎಡ ದಂಡೆ ನಾಲೆಗಳಿಗೆ ನೀರು ಬಿಡಲಾಗುತ್ತಿದ್ದು ಭತ್ತದ ಬೀಜ ಚೆಲ್ಲುವಿಕೆಗೆಯನ್ನು ರೈತರು ಕೈಗೊಳ್ಳುವರು. ಜೊತೆಗೆ ನಾಲೆಗೆ ನೀರು ಬಿಟ್ಟಿರುವುದರಿಂದ ಕೆರೆಗಳ ಭರ್ತಿಯಾಗಿ ಅಂತರ್ಜಲ ಹೆಚ್ಚಲಿದೆ. ದಾವಣಗೆರೆ ನಗರದ ಸುತ್ತಲೂ ಕೆರೆಗಳಿರುವುದರಿಂದ ಬೇಸಿಗೆ ಬರಗಾಲದಲ್ಲಿಯು ಕೊಳವೆಬಾವಿಗಳಲ್ಲಿ ನೀರು ಬತ್ತಲಿಲ್ಲ ಎಂದ ಅವರು ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಟಿ.ವಿ.ಸ್ಟೇಷನ್ ಕೆರೆಯು ನಾಲೆಯನ್ನು ಆಶ್ರಯಿಸಿದ್ದು ಇದರಿಂದ ಕೆರೆಗೆ ನೀರು ಬರಲಿದೆ ಎಂದರು.

ಚಿಗಟೇರಿ ಆಸ್ಪತ್ರೆ ಅಭಿವೃದ್ದಿಗೆ ಮುಂದಾಗಿ; ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗ ಚಿಗಟೇರಿ ಆಸ್ಪತ್ರೆ ಹೊಸ ಬ್ಲಾಕ್ ನಿರ್ಮಾಣಕ್ಕೆ 18 ಕೋಟಿ ನೀಡಿದ್ದು ಮತ್ತು ಹೊಸ ರ್ಯಪ್, ವಾಟರ್ ಟ್ಯಾಂಕ್ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ಲಾನ್‌ನ್ನು ತಂದು ತೋರಿಸಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲು ಜಿಲ್ಲಾ ಸರ್ಜನ್‌ಗೆ ತಿಳಿಸಿದರು. ಮತ್ತು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಮಾಯಕೊಂಡ ಸಮುದಾಯ ಆರೋಗ್ಯ ಕೇಂದ್ರವಾದರೂ ರಾತ್ರಿ ಸಮಯದಲ್ಲಿ ವೈದ್ಯರು ಇರುವುದಿಲ್ಲ ಎಂದಾಗ ಹೆಚ್ಚುವರಿಯಾಗಿ ಒಬ್ಬ ವೈದ್ಯರನ್ನು ನಿಯೋಜನೆ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಷ್ಟಾಚಾರ ಪಾಲನೆಗೆ ಸೂಚನೆ; ಯಾವುದೇ ಅಧಿಕಾರಿಗಳು ಜಿಲ್ಲೆಗೆ ಬಂದಾಗ ಸಂಬAಧಿಸಿದ ಶಾಸಕರನ್ನು ಸಂಪರ್ಕಿಸಿ ಆಯಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳು, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕಾಮಗಾರಿಗಳನ್ನು ಅನುಷ್ಟಾನ ಮಾಡುವಾಗ ಶಾಸಕರ ಗಮನಕ್ಕೆ ತರಬೇಕು ಮತ್ತು ಇದರ ಶಂಕುಸ್ಥಾಪನೆ, ಉದ್ಘಾಟನೆಯನ್ನು ಕೈಗೊಳ್ಳುವಾಗ ಇವರನ್ನು ಆಹ್ವಾನಿಸಬೇಕು. ಮತ್ತು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಾಗಲೂ ಮಾಹಿತಿ ನೀಡಬೇಕು, ಈ ಬಗ್ಗೆ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲು ಸೂಚನೆ ನೀಡಿದರು.

ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸಲು ಸೂಚನೆ; ಈ ವರ್ಷ ಜಿಲ್ಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 16 ರಿಂದ 23 ನೇ ಸ್ಥಾನಕ್ಕಿಳಿದಿದ್ದು ಫಲಿತಾಂಶ ಸುಧಾರಣೆಗಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಮತ್ತು ಶಾಲೆಗಳಲ್ಲಿನ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವಂತಹ ವಿಷಯಗಳಿದ್ದಲ್ಲಿ ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತರಬೇಕು ಮತ್ತು ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ಯೋಜನೆ ರೂಪಿಸಿ ಅನುಷ್ಠಾನ ಮಾಡಲು ಉಪನಿರ್ದೇಶಕರಿಗೆ ಸೂಚನೆ ನೀಡಿ ಶಿಕ್ಷಣ ಇಲಾಖೆ ಆಯುಕ್ತಾಲಯಕ್ಕೆ ನಡೆಸಲಾದ ಪತ್ರ ವ್ಯವಹಾರದ ಪ್ರತಿಯನ್ನು ಶಾಸಕರುಗಳಿಗೆ ನೀಡಲು ತಿಳಿಸಿದರು. ಈ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ ವಿ.ಶಿವಗಂಗ ಮಾತನಾಡಿ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲು ರಾತ್ರಿ ಶಾಲೆಗಳನ್ನು ಕ್ಷೇತ್ರದಲ್ಲಿ ಆರಂಭಿಸಲಾಗಿದ್ದು ಇಲಾಖೆಯಿಂದ ಕ್ರಿಯಾಶೀಲರಾಗಿ ಇತರೆ ತಾಲ್ಲೂಕುಗಳಲ್ಲಿ ಏಕೆ ಆರಂಭಿಸಲಿಲ್ಲ ಎಂದರು.

ಪಿಆರ್‌ಇಡಿ ಅಧಿಕಾರಿಗಳಿಗೆ ವಾರ್ನಿಂಗ್; ಮಾಯಕೊಂಡ ಕ್ಷೇತ್ರದಲ್ಲಿ 17 ಲಕ್ಷಗಳಲ್ಲಿ ನೂತನ ಹೈಟೆಕ್ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಉದ್ಘಾಟನೆ ವೇಳೆಗೆ ಸೋರುವಂತಾಗಿದೆ. ಇದನ್ನು ಪಂಚಾಯತ್ ರಾಜ್ ಇಂಜಿನಿಯರಿ0ಗ್ ವಿಭಾಗದಿಂದ ನಿರ್ಮಾಣ ಮಾಡಲಾಗಿದೆ. ಮತ್ತು ಕುರ್ಕಿ ಶಾಲಾ ಕೊಠಡಿಯನ್ನು 2011 ರಲ್ಲಿ ನಿರ್ಮಾಣ ಮಾಡಿದ್ದರೂ ಸೋರುವಂತಾಗಿದೆ ಎಂದು ಶಾಸಕರು ಪ್ರಸ್ತಾಪಿಸಿದರು. ಈ ವೇಳೆ ಜಿಲ್ಲಾ ಸಚಿವರು ಇಂಜಿನಿಯರ್‌ಗೆ ವಾರ್ನಿಂಗ್ ಮಾಡಿ ಸಂಬ0ಧಿಸಿದ ಗುತ್ತಿಗೆದಾರರಿಂದ ಸರಿಪಡಿಸಿ ಮುಂದೆ ಈ ರೀತಿಯಾಗಂತೆ ನೋಡಿಕೊಳ್ಳಲು ಎಚ್ಚರಿಕೆ ನೀಡಿದರು.

ಜಿಲ್ಲಾ ನೊಂದಣಾಧಿಕಾರಿಗಳಿಗೆ ಸೂಚನೆ; ಹೊನ್ನಾಳಿ ಕ್ಷೇತ್ರದಲ್ಲಿ ರೈತರ ಸಹಕಾರ ಸಂಘದ ಸ್ವತ್ತಿಗೆ ಸಂಬ0ಧಿಸಿದ0ತೆ ಮೂರು ಭಾಗವನ್ನಾಗಿ ಮಾಡಬೇಕಾಗಿದ್ದು ಸ್ವತ್ತಿಗೆ ಸಂಬ0ಧಿಸಿದ0ತೆ ರಾಜಧನ ವಿನಾಯಿತಿ ನೀಡುವ ಅಭಿಪ್ರಾಯಕ್ಕೆ ಸಂಬ0ಧಿಸಿದ0ತೆ 3 ಲಕ್ಷ ಮೌಲ್ಯವಾಗಲಿದ್ದು ಇದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ ಎಂದು ವರದಿ ನೀಡಿದ್ದು ಈ ಸೊಸೈಟಿಯಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಸದಸ್ಯರಿದ್ದಾರೆ, ಇದರಿಂದ ಇವರೆಲ್ಲರಿಗೂ ಅನುಕೂಲವಾಗಲಿದೆ. ಆದರೆ ತಮ್ಮ ಅಭಿಪ್ರಾಯ ಮಾತ್ರ ಉಲ್ಲೇಖಿಸಬೇಕಾಗಿದ್ದು ನಷ್ಟವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಶಾಸಕರಾದ ಡಿ.ಜಿ.ಶಾಂತನಗೌಡ ಪ್ರಸ್ತಾಪಿಸಿದಾಗ ಇದನ್ನು ವಾರದಲ್ಲಿ ಸರಿಪಡಿಸಲು ಜಿಲ್ಲಾ ಸಚಿವರು ಸೂಚನೆ ನೀಡಿದರು.

ಮಳೆಗಾಲಲ್ಲೆ ಕೆರೆ ತುಂಬಿಸಿ; ಭದ್ರಾ ಜಲಾಶಯ ಭರ್ತಿ ಹಂತದಲ್ಲಿದ್ದು ಶಾಂತಿಸಾಗರಕ್ಕೆ ಈಗಲೇ ಭರ್ತಿ ಮಾಡಲು ಮತ್ತು ಬಲದಂಡೆ ಕಾಲುವೆ ಮೂಲಕ 3500 ಕ್ಯೂಸೆಕ್ಸ್ ನೀರು ಹರಿಸಲು ತಿಳಿಸಿ 22 ಕೆರೆ ತುಂಬಿಸುವ ಯೋಜನೆ ಪರಷ್ಕರಿಸಿ ಹೆಚ್ಚುವರಿಯಾಗಿ 50 ಕೋಟಿ ನೀಡಲು ಜಲಸಂಪನ್ಮೂಲ ಸಚಿವರು ಒಪ್ಪಿದ್ದಾರೆ ಎಂದರು. ಮತ್ತು ಭದ್ರಾ ಜಲಾಶಯ ಭರ್ತಿ ಹಂತದಲ್ಲಿದ್ದು ಜಿಲ್ಲೆಯಿಂದ ಬಾಗಿನ ಅರ್ಪಣೆ ಮಾಡಲು ಒಂದೆರಡು ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದರು.

ಸಭೆಯಲ್ಲಿ ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪ, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಚನ್ನಗಿರಿ ಶಾಸಕರಾದ ಬಸವರಾಜು ವಿ.ಶಿವಗಂಗಾ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಕೆ.ಎಸ್.ನವೀನ್, ಡಾ; ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ; ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಜಿ.ಎಂ.ಗ0ಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಕೋಗುಂಡೆ ಬಕ್ಕೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಡಿ.ಬಸವರಾಜು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Share This Article
error: Content is protected !!
";