Ad image

ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಕೃಷಿ ಉತ್ತಮ ಉಪಕಸುಬು ಜೇನು ಸಾಕಾಣಿಕೆ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಸಾವಯವ ಕೃಷಿಯ ಭಾಗವಾಗಲಿ

Vijayanagara Vani
ಜೇನು ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಕೃಷಿ ಉತ್ತಮ ಉಪಕಸುಬು ಜೇನು ಸಾಕಾಣಿಕೆ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಸಾವಯವ ಕೃಷಿಯ ಭಾಗವಾಗಲಿ
ಚಿತ್ರದುರ್ಗಜೂ.17:
ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಸಾಕಾಣಿಕೆಯು ಪ್ರತಿಯೊಬ್ಬ ಸಮಗ್ರ ಕೃಷಿ ಅಥವಾ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತರು ಇದನ್ನು ಒಂದು ಉಪಕಸುಬಾಗಿ ಅಳವಡಿಸಿಕೊಳ್ಳಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ಮಹಿಳಾ ಮತ್ತು ಯುವ ರೈತರಿಗೆ ವಿಶೇಷ ಜೇನು ಕೃಷಿಯ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಬೆಳೆ ವೈವಿದ್ಯ ಸ್ವಾಭಾವಿಕ ಸಸ್ಯವರ್ಗ ಹವಾಮಾನ ಮತ್ತು ಹೇರಳ ಮಾನವ ಸಂಪನ್ಮೂಲಗಳು ಜೇನು ಕೃಷಿಗೆ ಪೂರಕವಾಗಿವೆ. ಪ್ರಸಿದ್ದ ವಿಜ್ಞಾನಿ ಅಲ್ಬರ್ಟ ಐನ್ಸ್ಟೈನ್ ಅವರು ಜೇನುನೊಣಗಳ ಪ್ರಾಮುಖ್ಯತೆ ಕುರಿತು ಜೇನಿನ ಸಂತತಿ ನಾಶವಾದರೆ ಜೀವರಾಶಿಗಳಿಗೆ ಅಪಾಯವಿದೆಂದಿದ್ದಾರೆಂದರು. ಜೇನನ್ನು ಭೂಲೋಕದ ಅಮೃತಕ್ಕೆ ಹೋಲಿಸುತ್ತಾ, ಜೇನು ಸಾಕಾಣಿಕೆಯಿಂದ ನಮಗೆ ಉತ್ತಮ ಆರೋಗ್ಯ, ಆದಾಯ, ಉದ್ಯೋಗ ಸೃಜನೆ ಮತ್ತು ಉತ್ತಮ ಪರಿಸರ ಸಮತೋಲನೆ ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದರು.
ಜೇನುತುಪ್ಪ ಒಂದು ಉತ್ತಮ ದಿವ್ಯ ಔಷಧಿಯಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು. ಮಲಬದ್ಧತೆ ನಿವಾರಣೆಗೆ, ರಕ್ತಶುದ್ಧಿ ಮಾಡಲು, ಕೆಮ್ಮು, ಶೀತ, ನೆಗಡಿ, ಜ್ವರವನ್ನು ಉಪಶಮನ ಮಾಡಲು ಸಹಕಾರಿಯಾಗಿದೆ. ಸಕಲ ಪೋಶಕಾಂಷಭರಿತ ಜೇನು ಅತ್ಯುತ್ತಮ ಶಿಶು ಆಹಾರವಾಗಿದ್ದು, ಮಕ್ಕಳ ಪೋಷಕಾಂಶ ಕೊರತೆ ನೀಗಿಸಲು ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆ ನೀಗಿಸಲು ಮತ್ತು ರಕ್ತದ ವೃದ್ದಿಗೆ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.
ಪರಿಶುದ್ದ ಜೇನು ಪಡೆಯಲು ಅತ್ಯಂತ ಸರಳ ಸುಲಭ ಮಾರ್ಗವೆಂದರೆ ನಮ್ಮ ಮನೆ, ಕೈತೋಟ, ತೋಟಗಳಲ್ಲಿ ಜೇನು ಸಾಕಾಣಿಕೆ ಮಾಡುವುದು. ಈ ಕಡಿಮೆ ಬಂಡವಾಳದ ಪರಿಸರ ಸ್ನೇಹಿ ಜೇನು ಸಾಕಾಣಿಕೆಯು ಪ್ರತಿಯೊಬ್ಬ ಸಮಗ್ರ ಕೃಷಿ ಅಥವಾ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ರೈತರು ಇದನ್ನು ಒಂದು ಉಪಕಸುಬಾಗಿ ಅಳವಡಿಸಿಕೊಳ್ಳಬಹುದಗಿದೆ. ಆದ ಪ್ರಯುಕ್ತ ಉತ್ತಮ ಜೇನಿನ ಪ್ರಾಮುಖ್ಯತೆ ಮತ್ತು ಜೇನು ಸಾಕಾಣಿಕೆಯ ತಾಂತ್ರಿಕತೆಯ ಕುರಿತು ಅರಿವುಮೂಡಿಸುವುದು ಈ ತರಬೇತಿಯ ಉದ್ದೇಶವಾಗಿದ್ದು, ರೈತಬಾಂಧವರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.
ತಾಂತ್ರಿಕ ಅಧಿವೇಶನದಲ್ಲಿ ಜೇನು ತಜ್ಞ ಶಾಂತವೀರಯ್ಯ ಮಾತನಾಡಿ, ಜೇನು ತಳಿಗಳಲ್ಲಿ ಹೆಜ್ಜೇನು ಮತ್ತು ಕೋಲ್ಜೇನುಗಳನ್ನು ಸಾಕಲು ಬರುವುದಿಲ್ಲ ಆದರೆ ತುಡುವೆ ಜೇನು, ಮೆಲ್ಲಿಫೆರಾ ಮತ್ತು ಮುಝಂಟಿ (ನಸರಿ) ಜೇನು ಸಾಕಲು ಯೋಗ್ಯವಾಗಿವೆ. ತುಡುವೆ ಜೇನು ಕೆಲಸಗಾರ ಜೇನು ನೊಣಗಳ ಆಹಾರ ತರುವ ಸಾಮಥ್ರ್ಯ ಕಾರ್ಯವ್ಯಾಪ್ತಿ ಗೂಡಿನಿಂದ 1-1.5 ಕಿ.ಮೀ. ದೂರ ತ್ರಿಜ್ಯದ ಕ್ಷೇತ್ರವಿದ್ದು, ಮೆಲ್ಲಿಫೆರ ಜೇನು ನೊಣಗಳು ಗೂಡಿನಿಂದ 2-3 ಕಿ.ಮೀ. ಕ್ಷೇತ್ರದಿಂದ ಆಹಾರವನ್ನು ಹೊತ್ತು ತರುತ್ತವೆ ಎಂದರು.
ಕೃಷಿಯಲ್ಲಿ ಜೇನ್ನೊಣಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತಾ, ಸಸ್ಯಗಳಲ್ಲಿ ವಂಶಾಭಿವೃದ್ಧಿಯಾಗಲು ಪರಾಗ ಸ್ಫರ್ಶ ಅನಿವಾರ್ಯ. ಬಹುತೇಕ ಗಿಡಮರ, ಬಳ್ಳಿ, ಬೆಳೆಗಳಲ್ಲಿ ಪರಕೀಯ ಪರಾಗ ಸ್ಪರ್ಶ ಅನಿವಾರ್ಯ. ಪರಕೀಯ ಪರಾಗ ಸ್ಪರ್ಶದ ಶೇ.90 ಕ್ರಿಯೆ ಕೀಟಗಳಿಂದಾದರೆ ಅದರ ಶೇ.90 ಭಾಗ ಕೇವಲ ಜೇನ್ನೊಣಗಳಿಂದ ಆಗುತ್ತದೆ. ಅಡಿಕೆ, ತೆಂಗು, ದಾಳಿಂಬೆ, ಲಿಂಬು, ಸೌತೆ, ಕಲ್ಲಂಗಡಿ ಇನ್ನು ಮುಂತಾದ 1 ಲಕ್ಷಕ್ಕೂ ಹೆಚ್ಚಿನ ಜಾತಿಯ ಸಸ್ಯ ಪ್ರಬೇಧಗಳಲ್ಲಿ ಜೇನ್ನೊಣಗಳ ಪರಾಗ ಸ್ವರ್ಶ ಅನಿವಾರ್ಯವೆಂದರು. ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಆದ ಪ್ರಯುಕ್ತ ಇಂದಿನ ವಿಶೇಷ ತರಬೇತಿಯನ್ನು ರೈತ ಮಹಿಳೆಯರಿಗೊಸ್ಕರ ಆಯೋಜಿಸಿದ್ದು ತರಬೇತಿಯ ಸದುಪಯೋಗ ಪಡೆದು ಕೊಳ್ಳಲು ಮನವಿ ಮಾಡಿದರು.
ದಾವಣಗೆರೆಯ ಹಿರಿಯ ಪ್ರಸೂತಿ ತಜ್ಞೆ ಡಾ. ಶಾಂತ ಭಟ್ ಅವರು ಜೇನು ಕೃಷಿಯ ಕುರಿತು ತಮ್ಮ ಅನುಭವವನ್ನು ವಿವರಿಸುತ್ತಾ ಉತ್ತಮ ಆರೋಗ್ಯಕ್ಕೆ ದಿನನಿತ್ಯ 15 ರಿಂದ 25 ಗ್ರಾಂ ಪರಿಶುದ್ದ ಜೇನುತುಪ್ಪ ಸೇವನೆ ಉತ್ತಮ. ಪರಿಶುದ್ದ ಜೇನುತುಪ್ಪ ಪಡೆಯಲು ಜೇನು ಸಾಕಾಣಿಕೆಯನ್ನು ರೈತರಲ್ಲದೇ, ನಗರ ಪ್ರದೇಶದಲ್ಲೂ ಸಹ ಹವ್ಯಾಸದ ರೀತಿಯಲ್ಲಿ ಜೇನು ಸಾಕಾಣಿಕೆ ಮಾಡಬಹುದು ಎಂದರು.
ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ: ತರಬೇತಿಯ ಎರಡನೇ ದಿನ ಜೇನು ಸಾಕಾಣಿಕೆಗೆ ಪೂರಕ ವಸ್ತುಗಳಾದ ಜೇನುಪೆಟ್ಟಿಗೆ, ಜೇನು ತೆಗೆಯುವ ಯಂತ್ರ, ಮರಿ ಪಟ್ಟಿಗೆ, ಹೊಗೆತಿದಿ, ಮುಖ ಪರದೆ, ಹೈವ್ ಟೂಲ್, ಕೈ ಗವಸು, ರಾಣಿ ಪಂಜರ, ಬೀಬ್ರಷ್, ಬುಟ್ಟಿ, ಮೇಣದ ಎರಿ ಬುನಾದಿ, ಇರುವೆ ನಿರೋಧಕ ನಿಲುವು ಇತ್ಯಾದಿಗಳ ಕುರಿತು ರೈತರಿಗೆ ತಮ್ಮ ಮೇಟಿಕುರ್ಕೆ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ವಿವರಣೆ ನೀಡಿದರು. ನಂತರ ಮರದ ಟೊಂಗೆ ಮೇಲೆ ಕಟ್ಟಿದ ಜೇನು ಕಟುಂಬವನ್ನು ಜೇನು ಸಾಕಾಣಿಕೆ ಪೆಟ್ಟಿಗೆಗೆ ವರ್ಗಾಯಿಸುವ ವಿಧಾನ, ಜೇನು ಪೆಟ್ಟಿಗೆಗಳ ನಿರ್ವಹಣೆ, ಜೇನು ಕುಟುಂಬಗಳ ವಿಭಜನೆ, ಜೇನು ತೆಗೆಯುವ ವಿಧಾನದ ಕುರಿತು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಗುಡಿಹಳ್ಳಿ ರಂಗಣ್ಣ ಹಾಗೂ ರೈತ ಮಹಿಳೆಯರು ಇದ್ದರು.

Share This Article
error: Content is protected !!
";