ಶಿವಮೊಗ್ಗ, ಜೂನ್ 04: ಶಿವಮೊಗ್ಗ ಲೋಕಸಭಾ ಕ್ಷೇತ್ರದ 2024ರ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ನ ಗೀತಾ ಶಿವರಾಜ್ ಕುಮಾರ್, ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಸೋಲು ಕಂಡಿದ್ದಾರೆ.
ಮಂಗಳವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ 2024ರ ಮತ ಎಣಿಕೆ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯಿತು. ಮೇ 7ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 13,72,949 ಮತಗಳು ಚಲಾವಣೆಯಾಗಿದ್ದವು.
ಅಂಚೆ ಮತಗಳ ಎಣಿಕೆಯಿಂದಲೂ ಬಿಜೆಪಿಯ ಬಿ. ವೈ. ರಾಘವೇಂದ್ರ ಮುನ್ನಡೆ ಪಡೆದುಕೊಂಡಿದ್ದರು. ಸದ್ಯ 16ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿಯ ಬಿ. ವೈ. ರಾಘವೇಂದ್ರ 5,72,359 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಗೀತಾ ಶಿವರಾಜ್ ಕುಮಾರ್ 404570 ಮತ ಮತ್ತು ಕೆ. ಎಸ್. ಈಶ್ವರಪ್ಪ 21,920 ಮತಗಳನ್ನು ಪಡೆದಿದ್ದಾರೆ
ಬಿ. ವೈ. ರಾಘವೇಂದ್ರ 1,67,789 ಮತಗಳ ಮುನ್ನಡೆ ಪಡೆದುಕೊಂಡಿದ್ದು, ಗೆಲುವಿನ ಕುರಿತು ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದೆ. ವಿವಿಪ್ಯಾಟ್, ಇವಿಎಂ ಮತಗಳ ತಾಳೆ ಬಳಿಕ ಅಧಿಕೃತ ಘೋಷಣೆ ಮಾಡಲಾಗುತ್ತದೆ.
ಶಿವಮೊಗ್ಗ ಲೋಕಸಭಾ ಚುನಾವಣೆಯ ಬಿಸಿ ಏರಿಸಿದ್ದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ. ಲೋಕಸಭೆ ಚುನಾವಣೆಗೆ ಹಾವೇರಿಯಲ್ಲಿ ಪುತ್ರ ಕಾಂತೇಶ್ಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಅವರು ಅಸಮಾಧಾನಗೊಂಡರು. ಮಾಜಿ ಸಿಎಂ ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡಿದರು. ಅಂತಿಮವಾಗಿ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದರು.
ಈಶ್ವರಪ್ಪ ಮನವೊಲಿಕೆ ಮಾಡಲು ಬಿಜೆಪಿ ನಾಯಕರು ಮುಂದಾದರು. ಆದರೆ ಅವರು ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿಯೇ ಉಳಿದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾರಣ ಈಶ್ವರಪ್ಪ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಯಿತು. ಬಿ. ವೈ. ರಾಘವೇಂದ್ರ 2009ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ, ಸಂಸದರಾದರು. 2014ರ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿ. ಎಸ್. ಯಡಿಯೂರಪ್ಪ ಸಂಸದರಾದರು. 2018ರ ವಿಧಾನಸಭೆಯಲ್ಲಿ ಸ್ಪರ್ಧಿಸಲು ಯಡಿಯೂರಪ್ಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಉಪ ಉಪ ಚುನಾವಣೆ ಎದುರಾದಾಗ ಬಿ. ವೈ. ರಾಘವೇಂದ್ರ ಮತ್ತೆ ಗೆಲುವು ಸಾಧಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ರಾಘವೇಂದ್ರ ಗೆದ್ದರು. 2024ರಲ್ಲಿ ಗೆಲ್ಲುವ ಮೂಲಕ 4ನೇ ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ.