ಸಿರುಗುಪ್ಪ.ಜೂ.07:- ತಾಲೂಕಿನ ತೆಕ್ಕಲಕೋಟೆಯ ಕೋಟೆ ಆವರಣದಲ್ಲಿ ಕಸ್ತೂರಬಾ ಬಾಲಕಿಯರ ವಸತಿ ಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಮತ್ತು ಬಾಲಕಿಯರ ವಸತಿ ಶಾಲೆಗಳಿದ್ದು, ಈ ಶಾಲೆಗೆ ಹೋಗುವ ಅಂಗಳದಲ್ಲಿ ಪ್ರತಿಬಾರಿ ಮಳೆ ಬಂದಾಗ ಮಳೆ ನೀರು ನಿಲ್ಲುವುದು ಸಾಮಾನ್ಯವಾಗಿರುತ್ತದೆ. ಇದರಿಂದಾಗಿ ಮಳೆಗಾಲದಲ್ಲಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮಳೆನೀರಿನ ಕೆಸರಿನಲ್ಲಿಯೇ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿರುತ್ತದೆ.
ಕೋಟೆ ಆವರಣದಲ್ಲಿರುವ 5 ಶಾಲೆಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು, ಮಳೆಗಾಲದಲ್ಲಿ ಕೋಟೆ ಆವರಣದಲ್ಲಿ ಮಳೆನೀರು ಹರಿದುಹೋಗಲು ಚರಂಡಿಯ ವ್ಯವಸ್ಭೆ ಇಲ್ಲದೇ ಇರುವುದರಿಂದ ಪ್ರತಿಬಾರಿಯು ಮಳೆಬಂದಾಗ ಮಳೆನೀರು ನಿಲ್ಲುವುದು ಸಾಮಾನ್ಯವಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಅನಾನುಕೂಲವಾಗುತ್ತಿದೆ.
ಅಲ್ಲದೆ ಮಳೆನೀರು ನಿಲ್ಲುವುದರಿಂದ ಈ ಭಾಗದಲ್ಲಿ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗುತ್ತಿದ್ದು, ತರಗತಿಗಳಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಸೊಳ್ಳೆಗಳು ಕಾಟ ಕೊಡುವುದು ಮಾಮೂಲಾಗಿದೆ. ಅಲ್ಲದೆ ಒಂದು ರೀತಿಯ ಕೆಟ್ಟವಾಸನೆಯು ಬರುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಅನಾನುಕೂಲವಾಗುತ್ತಿದೆ. ಮಳೆಗಾಲ ಬಂದಾಗ ನೀರು ನಿಲ್ಲುವುದು ಸಾಮಾನ್ಯವಾಗಿದ್ದು, ಶಾಲೆಯ ಶಿಕ್ಷಕರು ಸ್ಥಳಿಯ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಣ್ಣು ಹಾಕುವಂತೆ ಮನವಿ ಸಲ್ಲಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಳೆನೀರು ನಿಂತ ಸ್ಥಳದಲ್ಲಿ ಮಣ್ಣು ತಂದು ಹಾಕುತ್ತಾರೆ, ಮಳೆನೀರಿಗೆ ಮಣ್ಣು ಕೊಚ್ಚಿಹೋಗಿ ಮತ್ತೆ ತಗ್ಗುದಿನ್ನೆಗಳು ಉಂಟಾಗಿ ಮಳೆ ನೀರು ನಿಲ್ಲುವುದು ಸಾಮಾನ್ಯವಾಗಿರುತ್ತದೆ. ಈ ಭಾಗದಲ್ಲಿ ಮಳೆನೀರು ನಿಲ್ಲದಂತೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಮಾಡಬೇಕೆನ್ನುವುದು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಒತ್ತಾಯವಾಗಿದೆ.
ಮಳೆಗಾಲದಲ್ಲಿ ಶಾಲೆಗೆ ಬರುವ ಆವರಣದಲ್ಲಿ ಮಳೆನೀರು ನಿಲ್ಲುವ ಕಾರಣ ಆವರಣದಲ್ಲಿ ಕಾಂಕ್ರೀಟ್ ಹಾಕುವಂತೆ ಇಲ್ಲಿನ ಶಿಕ್ಷಕರು ಸರ್ಕಾರಕ್ಕೆ ಅನೇಕಬಾರಿ ಮನವಿ ಸಲ್ಲಿಸಿದ್ದರು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆAದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಮಳೆನೀರು ಹರಿದುಹೋಗಲು ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆನೀರಿನ ಕೆಸರಿನಲ್ಲಿಯೇ ವಿದ್ಯಾರ್ಥಿಗಳು ಶಾಲೆಗೆ ಬರುವುದು ಅನಿವಾರ್ಯವಾಗಿದೆ ಎಂದು ಕಸ್ತೂರಬಾ ಬಾಲಕಿಯರ ವಸತಿ ಶಾಲೆಯ ಪ್ರಭಾರಿ ಮುಖ್ಯಗುರು ಶ್ರೀಲತಾಬಾಯಿ ತಿಳಿಸಿದ್ದಾರೆ.
ಮಳೆನೀರು ಹರಿದುಹೋಗಲು ಶಾಶ್ವತ ಚರಂಡಿ ವ್ಯವಸ್ಥೆ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕೋಟೆ ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖಗುರು ವೆಂಕಟೇಶ್ ತಿಳಿಸಿದ್ದಾರೆ.