ಬಳ್ಳಾರಿ,ನ.28
ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಾಲ್ಯವಿವಾಹ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಬಾಲ್ಯವಿವಾಹ ಮುಕ್ತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ – 1098, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಶ್ರೀ ಮೇಧಾ ಡಿಗ್ರಿ ಕಾಲೇಜು, ರೀಚ್ ಸಂಸ್ಥೆ ಇವರ ಸಹಯೋಗದಲ್ಲಿ ನಗರದ ಕೋಟೆ ಪ್ರದೇಶದ ಶ್ರೀಮೇಧ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯವಿವಾಹವು ಬಾಲ್ಯವಿವಾಹ ನಿಷೇಧ ಕಾಯ್ದೆ–2006 ಹಾಗೂ ಪೋಕ್ಸೋ ಕಾಯ್ದೆ ಅನ್ವಯ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಇದ್ದು, ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ವಿನೋದ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿದ್ದು, “ಬಾಲ್ಯವಿವಾಹ ಮುಕ್ತ ಭಾರತ” ಅಭಿಯಾನದಡಿ ಶೂನ್ಯ ಸಂಖ್ಯೆಗೆ ತರಬೇಕಾದಲ್ಲಿ ಕೇವಲ ಅಧಿಕಾರಿಗಳು, ಸಂಘ ಸಂಸ್ಥೆಗಳು ಮಾತ್ರ ಪ್ರಯತ್ನ ಮಾಡಿದರೆ ಸಾಲದು ಸಮುದಾಯ ಭಾಗವಹಿಸುವಿಕೆ ಹಾಗೂ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾವು ಕಾನೂನು ವೃತ್ತಿಜೀವನದಲ್ಲಿ ಇಂತಹ ಪ್ರಕರಣಗಳನ್ನು ನಿಭಾಯಿಸಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಅತೀ ಅವಶ್ಯಕವಿದೆ. ಬಾಲ್ಯವಿವಾಹ ನಿಲ್ಲಿಸುವುದು ಮತ್ತು ಮಕ್ಕಳ ಗ್ರಾಮ ಸಭೆಗಳನ್ನು ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಇದೇ ವೇಳೆ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಬಳಿಕ ಬಾಲ್ಯವಿವಾಹ ನಿಷೇಧಿಸಲಾಗಿದೆ-ಎಚ್ಚರ ಎನ್ನುವ ಪೋಸ್ಟರ್ ಅನಾವರಣಗೊಳಿಸಿದರು. ಈಶ್ವರ್ ಎಲ್.ಪಿ.ಓ ಅವರು ಬಾಲ್ಯವಿವಾಹದಿಂದ ಸಮಾಜದಲ್ಲಿ ಆಗುವ ದುಷ್ಪರಿಣಾಮಗಳು ಮತ್ತು ಮಕ್ಕಳ ಹಕ್ಕುಗಳ ಕುರಿತು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀಮೇಧಾ ಡಿಗ್ರಿ ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಕಲಾವತಿ ಸೇರಿದಂತೆ ಶ್ರೀ ಮೇಧಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.