ಚಿತ್ರದುರ್ಗ
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಸಮುದಾಯದ ಎಲ್ಲಾ ಮಕ್ಕಳಿಗೆ ಸಮಗ್ರ ಆರೈಕೆ ಒದಗಿಸುವ ಕಾರ್ಯಕ್ರಮವಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಚಿತ್ರದುರ್ಗ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಆರ್‌ಬಿಎಸ್‌ಕೆ ತಂಡ ಪತ್ತೆ ಹಚ್ಚಿ ಉನ್ನತ ಮಟ್ಟದ ಚಿಕಿತ್ಸೆಗೆ ಹೈಟೆಕ್ ಆಸ್ಪತ್ರೆಗೆ ನಿರ್ದೇಶನ ಮಾಡಲು ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಮಕ್ಕಳ ಒಟ್ಟಾರೆ ಜೀವನದ ಗುಣಮಟ್ಟ ಸುಧಾರಿಸಲು ಮತ್ತು ಸಮುದಾಯದ 18 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಸಮಗ್ರ ಆರೈಕೆ ಒದಗಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ ಎರಡು ಆರ್‌ಬಿಎಸ್‌ಕೆ ತಪಾಸಣೆ ತಂಡ ರಚನೆ ಮಾಡಿ ತಾಲ್ಲೂಕಿನ ಎಲ್ಲಾ ಅಂಗನವಾಡಿ, ಶಾಲೆಯಲ್ಲಿ ಮಕ್ಕಳ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದರು. ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಮಹೇಂದ್ರ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್‌ಬಿಎಸ್‌ಕೆ ತಂಡದ ವೈದ್ಯಾಧಿಕಾರಿಗಳಾದ ಡಾ.ಸುಪ್ರಿತಾ, ಡಾ.ಮಂಜುಳಾ, ಡಾ.ವಾಣಿ, ಶುಶ್ರೂಷಾಧಿಕಾರಿ ಪೂಜಾ, ಅಕ್ಷತಾ, ನೇತ್ರಾಧಿಕಾರಿಗಳಾದ ಮೈತ್ರಾ, ರಾಘವೇಂದ್ರ, ಆರೋಗ್ಯ ಸುರಕ್ಷತಾಧಿಕಾರಿ ಕಾತ್ಯಾಣಮ್ಮ, ಆಶಾ ಭೋಧಕಿ ತಬಿತಾ ಇದ್ದರು. ಶಿಬಿರದಲ್ಲಿ ಭಾಗವಹಿಸಿದ 10 ಅರ್ಹ ಫಲಾನುಭವಿ ಮಕ್ಕಳನ್ನು ಉಚಿತ ಇಕೋ ಪರೀಕ್ಷೆಗಾಗಿ ಚಿತ್ರದುರ್ಗ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ನಿರ್ದೇಶನ ಮಾಡಲಾಯಿತು.