ಒಂದು ಕಾಲದಲ್ಲಿ ರಜೆ ಎಂಬುದು ಶಿಕ್ಷಣದ ಭಾಗವಾಗಿತ್ತು. ಅಂದರೆ ರಜೆಯ ಅನುಭವವೂ ಶಿಕ್ಷಣವಾಗಿತ್ತು.ರಜೆ/ಬಿಡುವನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಾಲೆಯಲ್ಲಿ ದಿನ ನಿತ್ಯ ಬೋಧನಾ ತರಗತಿಗಳ ನಡುವೆ ಕ್ರೀಡೆಗೆ ಬಿಡುವು, ಸಂಜೆ ಶಾಲಾವಧಿಯನಂತರದ ಸಣ್ಣ ಗ್ಯಾಪ್ ನಲ್ಲಿ ಆಟವಾಡಿ ದಣಿಯುವ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ.
ವಾರದ ಭಾನುವಾರದ ರಜೆ , ಈ ಬಿಡುವುಗಳು ಮಕ್ಕಳ ಮಿದುಳಿಗೆ ದೊಡ್ಡ ವಿಸ್ತಾರತೆ ನೀಡುತ್ತಿದ್ದವು.
ದಸರಾ ಹಬ್ಬದ ಸಮಯದಲ್ಲಿ ಈ ಹಿಂದೆ ಒಂದು ತಿಂಗಳು ರಜೆ, ಮತ್ತು ಬೇಸಿಗೆ ರಜೆ ಸುಮಾರು ಎರಡು ತಿಂಗಳು ಇತ್ತು.ಈ ರಜೆಯ ಸಂಭ್ರಮ ಹಳ್ಳಿ, ಪಟ್ಟಣ , ನಗರ ಬೇಧವಿಲ್ಲದೆ ವೈವಿಧ್ಯಮಯವಾಗಿ ಕಂಡುಬರುತ್ತಿತ್ತು.ಹೊಲ,ಈಜು, ಬೆಟ್ಟಗಳಲ್ಲಿ ಆಟ, ಸಂಬಂಧಿಕರ ಒಡನಾಟ, ಪ್ರವಾಸ ಮತ್ತು ಹಿರಿಕರ ಪ್ರೀತಿ ಸಮೃದ್ಧವಾಗಿ ಲಭಿಸುವ ಕಾಲವಾಗಿತ್ತು.ಇಂದು ಅಂಕಗಳ ಹಿಂದೆ ಬಿದ್ದ ಪಾಲಕರ ವರ್ಗ ಮಗು ಎಂದರೆ ಓದುವ ಮಿಷನ್ ಎಂದು ಭಾವಿಸಿದಂತಿದೆ.ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲಾ/ಕಾಲೇಜುಗಳು ರಜೆ ನೀಡಿದಾಗಲೂ ರಜೆ ನೀಡದೆ ಬೋಧನೆ ಕೈಂಕರ್ಯದಲ್ಲಿ ತೊಡಗಿರುತ್ತಾರೆ.ಇಂತಹ ಮಕ್ಕಳು ಪಠ್ಯದ ಶಿಕ್ಷಣದಲ್ಲಿ ಹೆಚ್ಚು ಅಂಕಗಳಿಸ ಬಹುದು ಆದರೆ ಮಾನಸಿಕ ವಿಕಾಸ,ಆನಂದ, ತ್ಯಾಗ, ಹೊಂದಾಣಿಕೆ, ಪ್ರೀತಿ,ವಿಶ್ವಾಸ,ಒಡನಾಡಿತನ ಕಲಿಯಲಾರರು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ರಜೆ ವಿದ್ಯಾರ್ಥಿಗಳಿಗೆ ಏಕೆ ಬೇಕು?
1.ಏಕತಾನತೆಯಿಂದ ದೂರವಾಗಲು,ವಿರಾಮ,ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮತ್ತು ಹೊಸ ಅನುಭವಗಳಿಂದ ವೈಯಕ್ತಿಕ ಬೆಳವಣಿಗೆಗೆ ರಜೆ ಸಹಕರಿಸಲಿದೆ.
2.ಶಾಲಾಶಿಕ್ಷಣದ ಒತ್ತಡವನ್ನು ಸುಧಾರಿಸಿಕೊಳ್ಳಲು ಇದು ಸೂಕ್ತ ಸಮಯವಾಗಿ ಕೆಲಸ ಮಾಡುತ್ತದೆ. ರಜೆಯಿಂದ ಬಂದ ತಕ್ಷಣ ಶಾಲಾಶಿಕ್ಷಣದ ಮೇಲೆ ಹೊಸ ಉಲ್ಲಾಸ ಮತ್ತು ಪ್ರೇರಣೆ ಬರುತ್ತದೆ.
3.ಕುಟುಂಬದ ಸದಸ್ಯರು, ನೆರೆಹೊರೆ ಮತ್ತು ಗೆಳೆಯರ ಬಳಗದೊಂದಿಗೆ ಅರ್ಥಪೂರ್ಣ ಸಮಯ ಕಳೆಯಲು ರಜೆ ಸಹಕರಿಸುತ್ತದೆ. ಇದು ಸಾಮಾಜಿಕ ಬಂಧ ಬೆಳೆಸುತ್ತದೆ.
4.ರಜೆ- ಹವ್ಯಾಸಗಳನ್ನು ,ವೈಯಕ್ತಿಕ ಆಸಕ್ತಿಗಳನ್ನು ಬೆಳಸಿಕೊಳ್ಳಲು ಸಹಕರಿಸುತ್ತದೆ.ಉದಾಹರಣೆಗೆ ಪ್ರವಾಸ, ಅಂಚೆ ಚೀಟಿ ಸಂಗ್ರಹ, ಟ್ರಕ್ಕಿಂಗ್,ಸಂಗೀತ,ಸಾಹಿತ್ಯ, ನಾಟಕ, ಪಠ್ಯದಾಚಿಗಿನ ಪುಸ್ತಕ ಓದು ಮೊದಲಾದವು ಮಾತ್ರವಲ್ಲ ಬಿಡುವಿನ ಸಮಯದಲ್ಲಿ ಹೊಸ ಸಂಸ್ಕೃತಿಗಳ ಮತ್ತು ಸಮಾಜಗಳ ಪರಿಚಯ ಸಾಧ್ಯವಾಗಬಲ್ಲದು.
5.ಸಮಾಜದ ನಡುವೆ ಬದುಕಲು ಸಮಯ ಸಿಗುವುದರಿಂದ ಕೌಶಲಗಳು ಹೆಚ್ಚುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ.ತರಗತಿಯ ಆಚಿಗಿನ ಪ್ರಪಂಚದಲ್ಲಿ ಸ್ಪೂರ್ತಿ , ಕುತೂಹಲ ಮತ್ತು ಸಂಶೋಧನಾ ಮನೋಭಾವ ಬೆಳೆಸುತ್ತದೆ.ಅದು ಮಕ್ಕಳಿಗೆ ಮನೋಲ್ಲಾಸ ಹೆಚ್ಚಿಸುತ್ತದೆ ಇದರಿಂದಾಗಿ ತರಗತಿಗೆ ಹೋದಾಗ ಕಲಿಕೆ ಪುನಃ ಹೊಸದೆನಿಸುತ್ತದೆ.
6.ಶಾಲಾಶಿಕ್ಷಣದ ಕಲಿಕೆಯಿಂದ ಹುಟ್ಟಿದ ಸೃಜನಶೀಲತೆಯಿಂದಾಗಿ ಹೊಸ ಟಾಸ್ಕ ಗಳನ್ನು ಎದುರಿಸಲು ಸಮಯ ಸಿಕ್ಕಂತಾಗುತ್ತದೆ.
ಸಮಾಜಕ್ಕಾಗಿ ಶಿಕ್ಷಣ
ಬಹಳಷ್ಟು ಮಕ್ಕಳ ಇಂದಿನ ಕಲಿಕೆಯನ್ನು ಸಮಾಜದೊಂದಿಗೆ ಮತ್ತು ಸಮಾಜದ ಘಟನೆಗಳೊಂದಿಗೆ ಸಮೀಕರಿಸಲಾಗದಷ್ಟು ಬ್ಯುಜಿಯಾಗಿದ್ದಾರೆ.ಶಾಲೆಯಲ್ಲಿ ಕಲಿಯುವ ಬಹಳಷ್ಟು ವಿಚಾರಗಳು ಸಮಾಜದಿಂದಲೇ ಬಂದಿವೆ ಮತ್ತು ನಾವು ಕಲಿಯುತ್ತಿರುವುದು ಸಮಾಜದ ಉದ್ಧಾರಕ್ಕಾಗಿ ಎಂಬ ಮನೋಭಾವ ಅವರಲ್ಲಿ ಬರುವ ಅವಕಾಶಗಳು ಇತ್ತೀಚಿಗೆ ಕಡಿಮೆಯಾಗಿದೆ.ಸಮಾಜದ ಸಂಪರ್ಕ ಅವರಿಗೆ ತಗ್ಗುತ್ತಿದೆ. ಓದು ಎನ್ನುವುದು ನೌಕರಿ-ದುಡಿಮೆಗಾಗೆಂದು ಭಾವಿಸಲಾಗಿದೆ , ನಾನೂ ಸಹ ಸಮಾಜದ ಭಾಗ ಎಂಬ ಪರಿಕಲ್ಪನೆ ಮರೆಯಾಗುತ್ತಿದೆ ಮಾತ್ರವಲ್ಲ ಸಮಾಜದ ಋಣ ನನ್ನ ಮೇಲಿದೆ ಎಂಬ ಮಹತ್ವದ ವಿಚಾರ ಅರಿವೆಗೆ ಬರದಷ್ಟು ಮಕ್ಕಳು ಸಮಾಜದಿಂದ ದೂರವಿದ್ದಾರೆ.
ಮರೆಯಾಗುತ್ತಿರುವ ಚಿಕ್ಕ ವಯಸ್ಸಿನ ಸಮವಯಸ್ಕರ ಗುಂಪು
ಮಕ್ಕಳ ಸಾಮಾಜೀಕರಣದಲ್ಲಿ ಬಹು ಮುಖ್ಯ ಪಾತ್ರವಹಿಸುವ ಚಿಕ್ಕಮಕ್ಕಳ ಸಮವಯಸ್ಕರ ಗುಂಪು ಮಾಯವಾಗುತ್ತಿದೆ.ನೆರೆಹೊರೆಯ ಮಕ್ಕಳು ಗುಂಪಾಗಿ ಆಟವಾಡುವ ಮತ್ತು ಸಾಮಾಜೀಕರಣಗೊಳ್ಳುವ ಅವಕಾಶಗಳು ಕಡಿಮೆಯಾಗಿವೆ.ಸಮಯಸ್ಕರ ಗುಂಪಿನಿಂದ ಕಲಿಯಬಹುದಾದ ಸಾಹಸ, ನಾಯಕತ್ವ,ಹೊಂದಾಣಿಕೆ, ಸಹಕಾರ, ತ್ಯಾಗ ಎಂಬ ಮೌಲ್ಯಗಳನ್ನು ಕಲಿಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.
ಕುಟುಂಬದ ವಿಘಟನೆಗಳಿಗೆ ಕೆಲವು ಕಾರಣಗಳಲ್ಲಿ ಕುಟುಂಬ, ಸಮುದಾಯ ಮತ್ತು ಸಮವಯಸ್ಕರ ಗುಂಪುಗಳೊಂದಿಗೆ ಮಕ್ಕಳು ಬೆರೆಯದೇ ಇರುವುದು ಕಾರಣವಾಗಿರಬಹುದು.ವಿಶೇಷವಾಗಿ ಮಕ್ಕಳಿಗೆ ಕುಟುಂಬದ ಕಾಳಜಿ ಅವರ ಮಾನಸಿಕ ಬೆಳವಣಿಗೆ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ನಿಧಾನವಾಗಿ ಕಲಿಯುವ ಮಕ್ಕಳಿಗೆ ಸಹಕಾರಿ
ಕೆಲವು ಮಕ್ಕಳು ನಿಧಾನವಾಗಿ ಕಲಿಯುತ್ತಾರೆ ಅಂತಹ ಮಕ್ಕಳು ರಜೆಯ ಅವದಿಯಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯಾಸ ಮಾಡಿ ಮುಂದೆ ಬರಲು ಸಾಧ್ಯವಿದೆ.ತರಗತಿಯ ಇತರೆ ಮಕ್ಕಳ ಮಟ್ಟಕೇರಲು ಇದು ಸಾಧ್ಯ ಮಾಡುತ್ತದೆ ಯಾಕೆಂದರೆ ನಿಧಾನವಾಗಿ ಕಲಿಯುವ ಮಕ್ಕಳು ಬೌದ್ಧಿಕವಾಗಿ ದುರ್ಬಲರಲ್ಲ, ಅವರಿಗೆ ಕಲಿಯಲು ವಿಭಿನ್ನ ವಿಧಾನಗಳು ಮತ್ತು ಹೆಚ್ಚು ಸಮಯ ಬೇಕಾಗುತ್ತದೆ, ಈ ನಿಟ್ಟಿನಲ್ಲಿ ಅವರಿಗೆ ರಜೆ ಸಹಕಾರಿ.
ಓದು ಇಕ್ಕಾಲು, ಬುದ್ಧಿ ಮುಕ್ಕಾಲು
ಇದು ಗಾದೆ, ಓದು ಪಡೆದವ ಸಮಾಜಕ್ಕೆ ನಿರಂತರವಾಗಿ ತೆರೆದುಕೊಳ್ಳಬೇಕು ಅಂದಾಗ ಮಾತ್ರ ಬುದ್ದಿ ಬೆಳೆಯಲು ಸಾಧ್ಯ.ಇತ್ತೀಚಿಗೆ ಓದಷ್ಟೇ ಮುಖ್ಯವಾಗಿ ಸದಾ ತರಗತಿ ಕೊಠಡಿಯಲ್ಲಿ ಕೊಳೆಯುವ ಸ್ಥಿತಿ ಮಕ್ಕಳದಾಗಿದೆ,ಇದು ನೋವಿನ ವಿಚಾರ.ಪಠ್ಯದ ವಿಚಾರಗಳು ಸಮಾಜದ ಗರಡಿಯಲ್ಲಿ ಪಳಗಬೇಕಿದೆ. ರಾಷ್ಟ್ರೀಯ ಸೇವಾ ಯೋಜನೆಯಂಥ ಕೆಲವು ಕಾರ್ಯಕ್ರಮಗಳು ಕೆಲವೇ ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಲಭ್ಯವಾಗುತ್ತಿದೆ. ಓದಿನ ಮೂಲಕ ಸಮಾಜ ಅರಿಯಬೇಕು, ಆ ಅರಿವಿನ ಮೂಲಕ ಸಮಾಜವನ್ನು ಬೆಳೆಸಬೇಕು ಇದು ಶಿಕ್ಷಣದ ಗುರಿ. ಕೇವಲ ಜ್ಞಾನ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವುದಿಲ್ಲ ,ಜ್ಞಾನದ ಮೂಲಕ ಪಡೆದ ಅನುಭವ ಹೊಸ ಚಿಂತನೆಯ ಹುಟ್ಟಿಗೆ ಕಾರಣವಾಗಬಲ್ಲುದು.ಈ ಪ್ರಕ್ರಿಯೆಗೆ ರಜೆಗಳು ಖಂಡಿತ ಬೇಕಾಗುತ್ತವೆ.
ಪಾಲಕರೊಂದಿಗಿನ ಅನುಬಂಧಕ್ಕೆ ಸಮಯವಿಲ್ಲ
ರಜೆಯೇ ಇಲ್ಲದೆ ಮಕ್ಕಳು ಪಾಲಕರೊಂದಿಗೆ ಸಮಯ ಕಳೆಯಲಾರದಷ್ಟು ಬಿಜಿ ಇದ್ದಾಗ ಮಕ್ಕಳ ಸಮಗ್ರ ಅಭಿವೃದ್ಧಿ ಕಷ್ಟಸಾಧ್ಯ.ತುಂಬಾ ವರ್ಷಗಳ ಹಿಂದೆ ಬಡವರ ಮಕ್ಕಳು ತಂದೆ ತಾಯಿಯರ ಜೊತೆ ಸಮಯ ಕಳೆಯದೇ ಸಮರ್ಪಕವಾಗಿ ಬೆಳೆಯುತ್ತ ಇಲ್ಲ ಎಂಬ ಆರೋಪವಿತ್ತು ಆದರೆ ಇಂದು ಶ್ರೀಮಂತ ಜನರ ಬಿಜಿ ಬದುಕಿನಲ್ಲಿ ಮಕ್ಕಳಿಗೆ ಪಾಲಕರ ಲಭ್ಯತೆ ಕಡಿಮೆಯಾಗಿದೆ ,ಇದರಿಂದಾಗಿ ರಜೆ ರಹಿತ ವಿದ್ಯಾರ್ಥಿಗಳ ಸಾಮಾಜಿಕ ಆರೋಗ್ಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಂತಾಗಬಹುದು.
ಸಂಜೆ ಏಳಾದರೂ ಮನೆಗೆ ಬಾರದ ಮಕ್ಕಳು
ಶಾಲಾವಧಿಯ ನಂತರದ ಸಂಜೆಯ ಅವಧಿ ಮಕ್ಕಳ ಬದುಕಿನ ಬಹು ಮುಖ್ಯ ಘಟ್ಟ. ಅಲ್ಲಿ ಸಮವಯಸ್ಕರ ಗುಂಪಿನೊಂದಿಗೆ ಆಟ, ಮಾತು,ಕಥೆ, ನೆರೆಹೊರೆಯರ ಜೊತೆಗಿನ ಸಂಪರ್ಕ ಮಕ್ಕಳ ಮೆದುಳಿನ ಸಾಮರ್ಥ್ಯ ಹೆಚ್ಚಿಸದ ಬಲ್ಲದು. ಜೊತೆಗೆ ಆ ಸಮಯದಲ್ಲಿ ಹಿರಿಯರೊಡನೆ ಮಾತು-ಕತೆ,ಮನೆಗೆಲಸ, ಸಹಕಾರ ಮತ್ತು ಸಂಜೆಯ ಓದು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಲಿದೆ.ಅದು ಇತ್ತೀಚಿಗೆ ಕಡಿಮೆಯಾಗಿರುವುದು ಗಮನಿಸಲೇ ಬೇಕಾದ ವಿಚಾರ.
ತರಗತಿಯ ನಾಲ್ಕು ಗೋಡೆಗಳಿಗೆ ಮಕ್ಕಳು ಸೀಮಿತವಾಗಿ ರಜೆ ಮತ್ತು ಬಿಡುವಿನ ಅನುಭವ ಅವರಿಗೆ ಸಿಗದಿದ್ದರೆ ತೃಪ್ತಿದಾಯಕ ಸಮಾಜ ಕಟ್ಟಲು ಸಾಧ್ಯವೇ ? ಯೋಚಿಸಬೇಕಿದೆ.
ಡಾ.ಯು.ಶ್ರೀನಿವಾಸ ಮೂರ್ತಿ
ಉಪನ್ಯಾಸಕರು, ಬಳ್ಳಾರಿ
Phone:9731063950