ಸಂಡೂರು, ಜೂನ್ 30:
ಶನಿವಾರದಂದು ಸಂಡೂರು ಪಟ್ಪಣದ ಎಸ್.ಇ.ಎಸ್ ವಿದ್ಯಾಮಂದಿರ ಸಂಯುಕ್ತ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅದ್ಧೂರಿಯಾಗಿ ಸ್ವಾಗತ ಕಾರ್ಯಕ್ರಮ ಹಾಗೂ ಸಿಇಟಿ (CET), ಸಿಎಮ್ಎ (CMA), ನಿಟ್ (NEET), ಜೆಇಇ (JEE) ತರಬೇತಿ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮಕ್ಕೆ ಎಸ್ಇಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಜಗದೀಶ್ ಬಸಾಪುರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶ್ರಮದ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳ ಅವಶ್ಯಕತೆ ಮತ್ತು ಸಂಸ್ಥೆಯ ಶಿಕ್ಷಣ ಧೋರಣೆಯ ಕುರಿತು ಉಜ್ವಲ ಸಂದೇಶ ನೀಡಿದರು. ಅವರು ಮಾತನಾಡುತ್ತಾ, “ನಮ್ಮ ಎಸ್ಇಎಸ್ ಮಹಾವಿದ್ಯಾಲಯವು ಇತರ ವಿದ್ಯಾಸಂಸ್ಥೆಗಳಿಂದ ವಿಭಿನ್ನವಾಗಿದೆ. ಇಲ್ಲಿ ನಾವು ವಿದ್ಯಾರ್ಥಿಗಳ ಭವಿಷ್ಯವನ್ನು ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ದಾರಿ ಹಾಕುವ ದೃಷ್ಟಿಯಿಂದ ವೇದಿಕೆ ರೂಪಿಸಿದ್ದೇವೆ. ಸಿಇಟಿ, ಸಿಎಮ್ಎ, ನಿಟ್ ಹಾಗೂ ಜೆಇಇ ತರಬೇತಿ ಈ ಕಾಲೇಜಿನಲ್ಲಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ. ಶ್ರೀನಿವಾಸ್ ವಹಿಸಿ ಮಾತನಾಡಿದರು. ಅವರು ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿ, “ನೀವು ಸಿನಿಮಾ ರೀಲ್ ಹೀರೋಗಳಿಗಿಂತ, ನಿಮ್ಮ ಜೀವನದ ನಿಜವಾದ ಹೀರೋಗಳಾದ ತಂದೆ ತಾಯಿಗಳನ್ನು ಆದರ್ಶವನ್ನಾಗಿ ಇರಿಸಿಕೊಳ್ಳಿ. ಶಿಕ್ಷಣ ಎಂಬ ಶಸ್ತ್ರವನ್ನು ಉಪಯೋಗಿಸಿ ಬದುಕಿನಲ್ಲಿ ಎತ್ತರಕ್ಕೆ ಏರಬೇಕೆಂಬ ನಿಟ್ಟಿನಲ್ಲಿ ಈ ತರಹದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಶ್ರೀಮತಿ ಗೀತಾ ಕುಲಕರ್ಣಿ ನಿರೂಪಿಸಿ ಸೃಜನಾತ್ಮಕವಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಅತಿಥಿಗಳಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು ಮತ್ತು ವಂದಿಸಿದರು.
ಈ ಕಾರ್ಯಕ್ರಮದ ಮೂಲಕ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಉಜ್ವಲ ಪ್ರಾರಂಭಕ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯಕ್ಕೆ ಚಾಲನೆ ದೊರೆಯಿತು. ವಿದ್ಯಾರ್ಥಿಗಳು ಮತ್ತು ಪಾಲಕರು ಈ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.