ಬಳ್ಳಾರಿ, ಜೂ. 23:
ವಿಷಾನಿಲವನ್ನು ಬಿಡುತ್ತಿರುವ ಬಳ್ಳಾರಿಯ ಕೈಗಾರಿಕಾ ವಲಯದ 3ನೇ ಹಂತದಲ್ಲಿರುವ ಗೆಲಾಕ್ಸಿ, ಲೋಹಿತ ರಸಾಯನಿಕ ಕೈಗಾರಿಕೆಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಗೆ ವರದಿ ನೀಡುವುದಾಗಿ ಸಹಾಯಕ ಆಯುಕ್ತರಾದ ಪಿ. ಪ್ರಮೋದ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಕಾಟನ್ ಅಸೋಸಿಯೇಷನ್ ಮತ್ತು ಮುಂಡ್ರಗಿ ನಿವಾಸಿಗಳು ಕೈಗಾರಿಕಾ ಘಟಕಗಳ ಮುಂದೆ ಸೋಮವಾರ ನಡೆಸಿದ್ದ ಪ್ರತಿಭಟನೆಗೆ ಸ್ಪಂದಿಸಿದ ಸಹಾಯಕ ಆಯುಕ್ತರಾದ ಪಿ. ಪ್ರಮೋದ್ ಅವರು ಪ್ರತಿಭನಾ ಸ್ಥಳಕ್ಕೆ ಭೇಟಿ ನೀಡಿ, ಕೈಗಾರಿಕಾಗಳು ಹೊರ ಸೂಸುತ್ತಿರುವ ವಿಷಾನಿಲದ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಗೆಲಾಕ್ಸಿ ಮತ್ತು ಲೋಹಿತ ಕೆಮಿಕಲ್ ಫ್ಯಾಕ್ಟರಿಗಳವರು ವಿಷಾನಿಲವನ್ನು ಹೊರ ಸೂಸುತ್ತಿರುವುದರ ವಿರುದ್ಧ ಮುಂಡ್ರಗಿ ನಿವಾಸಿಗಳು, ಕಾಟನ್ ಮತ್ತು ಕೋಲ್ಡ್ ಸ್ಟೋರೇಜ್‌ನವರು ನಮ್ಮ ಸಂಸ್ಥೆಗೆ ದೂರು ನೀಡಿದ್ದರು. ಈ ಕೈಗಾರಿಕೆಗಳ ಜೊತೆ ವಿವಿಧ ಸುತ್ತಿನ ಸಭೆ ನಡೆಸಿ, ಸಾಕಷ್ಟು ಕಾಲಾವಕಾಶ ನೀಡಿದ್ದರೂ ಕೈಗಾರಿಕೆಗಳ ಆಡಳಿತ ಮಂಡಳಿಯು ವಿಷಾನಿಲವನ್ನು ತಡೆಯಲು ಉದ್ದೇಶಪೂರ್ವಕವಾಗಿ ಅಗತ್ಯ ಕ್ರಮಕೈಗೊಂಡಿಲ್ಲ. ಕಾರಣ ಅನಿವಾರ್ಯವಾಗಿ ಕೈಗಾರಿಕೆಗಳನ್ನು ಮುಚ್ಚಿಸಲು ಸೋಮವಾರ ಪ್ರತಿಭಟನೆ ನಡೆಸಲಾಯಿತು ಎಂದರು.
ಈ ಕೈಗಾರಿಕೆಗಳ ವಿಷಾನಿಲವು ಸುತ್ತಲಿನ ಕಾಟನ್ ಮಿಲ್, ಕೋಲ್ಡ್ ಸ್ಟೋರೇಜ್, ರೈಸ್‌ಮಿಲ್‌ಗಳಿಗೆ ಹೋಗಿ, ಗೋಡಾನುಗಳಲ್ಲಿ ದಾಸ್ತಾನಿಗಿರುವ ಆಹಾರ ಪದಾರ್ಥಗಳಲ್ಲಿ ಸೇರುತ್ತಿದೆ. ಕೈಗಾರಿಕೆಗಳ ಮತ್ತು ಗೋದಾಮುಗಳ ಕಾರ್ಮಿಕರ ಹಾಗೂ ಮುಂಡ್ರಗಿ ನಿವಾಸಿಗಳು ವಿಷಾನಿಲದಿಂದಾಗಿ ವಾಂತಿ, ತಲೆ ಸುತ್ತು, ಶ್ವಾಸಕೋಶ, ಚರ್ಮ, ಹೃದಯ – ಕಿಡ್ನಿಯ ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ. ಜನರ ಜೊತೆ ಜಾನವಾರುಗಳೂ ತೀವ್ರ ಅನಾರೋಗ್ಯ ತುತ್ತಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗೆಲಾಕ್ಸಿ ಕೆಮಿಕಲ್ಸ್ನ ಆಡಳಿತ ಮಂಡಳಿಯು, ತಮ್ಮ ಕೈಗಾರಿಕೆಯ ಟಿಸಿಎಸ್‌ಎ ಘಟಕವನ್ನು ತಾತ್ಕಾಲಿಕವಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದ್ದು, ಹೆಚ್ಚುವರಿ ಸ್ಕçಬ್ಬರ್‌ಗಳನ್ನು ಅಳವಡಿಸಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಮಾಹಿತಿ ನೀಡಿ, ಪರಿಸರ ಸಂರಕ್ಷಣೆಯ ಮಾಹಿತಿಯನ್ನು ಖಚಿತಪಡಿಸಿಕೊಂಡ ನಂತರವೇ, ಉತ್ಪಾದನೆಯನ್ನು ಪುನರಾರಂಭ ಮಾಡಲಾಗುತ್ತದೆ. ಕೈಗಾರಿಕಾ ಘಟಕವನ್ನು ಒಂದು ವರ್ಷದೊಳಗಾಗಿ ಸ್ಥಳಾಂತರ ಮಾಡಲಾಗುತ್ತದೆ ಎಂದು ಲಿಖಿತ ಹೇಳಿಕೆ ನೀಡಿದೆ.
ಲೋಹಿತ ಲ್ಯಾಬರೋಟರೀಸ್‌ನ ಆಡಳಿತ ಮಂಡಳಿಯು, ಐದು ದಿನಗಳಲ್ಲಿ ಹೆಚ್ಚುವರಿ 2 ಸ್ಕçಬ್ಬರ್‌ಗಳನ್ನು ಅಳವಡಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ – ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಮಾಹಿತಿ ನೀಡಿ, ಪರಿಸರ ಸಂರಕ್ಷಣೆಯ ಮಾಹಿತಿಯನ್ನು ಖಚಿತಪಡಿಸಿಕೊಂಡ ನಂತರ ಉತ್ಪಾದನೆ ನಡೆಸಲಾಗುತ್ತದೆ. ಅಲ್ಲದೇ, ಕೈಗಾರಿಕಾ ಘಟಕವನ್ನು ಓಬಳಾಪುರಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಲಿಖಿತ ಹೇಳಿಕೆ ನೀಡಿದೆ.
ಸ್ಥಳಕ್ಕೆ ಬಳ್ಳಾರಿ ತಹಸೀಲ್ದಾರರಾದ ಟಿ. ರೇಕ ಅವರು ಭೇಟಿ ನೀಡಿ, ಅಗತ್ಯ ತುರ್ತು ಕ್ರಮ ಕೈಗೊಳ್ಳಲಾಗುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು, ಉಪಾಧ್ಯಕ್ಷ ಎಸ್. ದೊಡ್ಡನಗೌಡ. ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಬಳ್ಳಾರಿ ಜಿಲ್ಲಾ ಇಂಡಸ್ಟಿçಯಲ್ ಅಸೋಸಿಯೇಷನ್‌ನ ಅಧ್ಯಕ್ಷರಾದ ವಿ. ರಾಮಚಂದ್ರ, ಕಾರ್ಯದರ್ಶಿಗಳಾದ ವಾಸುದೇವ ಸಚ್ಚಾರ್, ಕಾಟನ್ ಅಸೋಸಿಯೇಷನ್ ಅಧ್ಯಕ್ಷ ದಂಡಿನ ತಿಪ್ಪೇಸ್ವಾಮಿ, ನಿಕಟಪೂರ್ವ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಕಾಟನ್ ಅಸೋಸಿಯೇಷನ್‌ನ ಟಿ. ಚನ್ನಪ್ಪ, ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್‌ನ ಪದಾಧಿಕಾರಿಗಳು – ಮುಂಡ್ರಗಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಸಾಯನಿಕ ಕೈಗಾರಿಕೆಗಳನ್ನು ಮುಚ್ಚಲು ಆಗ್ರಹಿಸಿ ಪ್ರತಿಭಟನೆ : ಮುಚ್ಚಲು ಜಿಲ್ಲಾಡಳಿತಕ್ಕೆ ಶಿಫಾರಸ್ಸು
