ಜಿಲ್ಲೆಯಲ್ಲಿನ ಅಂಗನವಾಡಿಗಳ ಸ್ಥಿತಿಗತಿ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ : ನ್ಯಾ. ದಿವ್ಯಶ್ರೀ ಸಿ.ಎಂ.

Vijayanagara Vani
ಜಿಲ್ಲೆಯಲ್ಲಿನ ಅಂಗನವಾಡಿಗಳ ಸ್ಥಿತಿಗತಿ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ : ನ್ಯಾ. ದಿವ್ಯಶ್ರೀ ಸಿ.ಎಂ.
ಕಾರವಾರ. ಜು.10 ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳ ಸ್ಥಿತಿಗತಿ ಕುರಿತಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜಿಲ್ಲೆಯಾದ್ಯಂತ ತಪಾಸಣೆ ಕೈಗೊಂಡು, ವರದಿಯನ್ನು ಸಿದ್ದಪಡಿಸಲಾಗಿದ್ದು, ಈ ವರದಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.
ಅವರು ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 2782 ಅಂಗನವಾಡಿಗಳಿದ್ದು, ಅವುಗಳಲ್ಲಿ 2112 ಸ್ವಂತ ಕಟ್ಟಡದಲ್ಲಿ, 41 ಪಂಚಾಯತ್ ಕಟ್ಟಡಗಳಲ್ಲಿ, 114 ಸಮುದಾಯ ಕಟ್ಟಡಗಳಲ್ಲಿ, 6 ಯುವಕ ಮಂಡಳಿಗಳಲ್ಲಿ, 1 ಮಹಿಳಾ ಮಂಡಳದಲ್ಲಿ, 171 ಶಾಲೆಗಳಲ್ಲಿ, 325 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿ ಪರಿಶೀಲನೆ ವೇಳೆಯಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿವೆ ಎಂದರು.
ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಲ್ಲಿ ಆಹಾರ ಧಾನ್ಯಗಳ ಶೇಖರಣೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದು, ಮಕ್ಕಳಿಗೆ ಶುದ್ದೀಕರಿಸಿದ ನೀರಿನ ಕೊರತೆ ಇದ್ದು, ಪಾತ್ರೆಯಲ್ಲಿ ಬಿಸಿ ಮಾಡಿದ ನೀರು ನೀಡಲಾಗುತ್ತಿದೆ. ಶೌಚಾಲಯ ಮತ್ತು ಅಡುಗೆ ಕೋಣೆ ಒಂದೇ ಕಡೆ ಇರುವುದು, ಶುಚಿತ್ವ ಇಲ್ಲದೇ ಇರುವುದು ಕಂಡು ಬಂದಿದ್ದು, ಕಾರವಾರ ನಗರದಲ್ಲಿನ ಒಂದು ಅಂಗನವಾಡಿ ಚರಂಡಿಯ ಮೇಲ್ಬಾಗದಲ್ಲಿ ಇದ್ದು ಅಪಾಯಕಾರಿಯಾಗಿದೆ. ಈ ಎಲ್ಲಾ ನ್ಯೂನ್ಯತೆಗಳ ಬಗ್ಗೆ ವರದಿಯಲ್ಲಿ ಸವಿವರವಾಗಿ ನಮೂದಿಸಿದ್ದು, ಈ ವರದಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೂ ಸಹ ಸಲ್ಲಿಸಲಾಗುವುದು ಎಂದರು.
ಅAಗನವಾಡಿಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಂಡು, ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ದೂರ ಮಾಡಿ , ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಜುಲೈ 13 ರಂದು ರಾಷ್ಟಿಯ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಾಜೀಯಾಗಬಲ್ಲ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ.
ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು 37,156 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಅದರಲ್ಲಿ 11,662 ಪ್ರಕರಣಗಳು ಲೋಕ ಅದಾತ್ ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಾಗಿದ್ದು, ಈಗಾಗಲೇ 2152 ಪ್ರಕರಣಗಳು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲು ಸಿದ್ದವಾಗಿದ್ದು, 20,804 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಬಗೆಹರಿಸಲು ಗುರುತಿಸಲಾಗಿದೆ. ಸಾರ್ವಜನಿಕರು ಲೋಕ್ ಅದಾಲತ್ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ರಾಜಿಯಾಗುವಂತಹ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿದರು
WhatsApp Group Join Now
Telegram Group Join Now
Share This Article
error: Content is protected !!