ಚಲನಚಿತ್ರ ಒಂದರಲ್ಲಿ ನಾಯಕಿ ನಟಿ ಹೆಣ್ಣುಮಕ್ಕಳಿಗೆ ಹೆರಿಗೆ ನೋವನ್ನು ದೇವರು ಯಾಕೆ ಕೊಡುತ್ತಾನೆಯೋ ಎಂದು ಬೇಸರ ವ್ಯಕ್ತಪಡಿಸಿದಾಗ ಚಿತ್ರದ ನಾಯಕ ಜಗತ್ತಿನಲ್ಲಿ ಹೆಣ್ಣು ಮಕ್ಕಳಲ್ಲಿರುವಷ್ಟು ಗಟ್ಟಿತನ ಯಾರಲ್ಲೂ ಇಲ್ಲ, ಅಕಸ್ಮಾತ್ ಗಂಡಸರಿಗೇನಾದರೂ ಹೆರಿಗೆಯ ನೋವನ್ನು ಕೊಟ್ಟಿದ್ದರೆ ಯಾವ ಗಂಡಸೂ ಕೂಡ ಮಕ್ಕಳನ್ನು ಹುಟ್ಟಿಸುತ್ತಿರಲಿಲ್ಲವಾದ್ದರಿಂದಲೇ ಹೆರಿಗೆಯ ನೋವನ್ನು ಹೆಣ್ಣು ಮಕ್ಕಳಿಗೆ ಕೊಟ್ಟಿರಬಹುದು ಎಂದು ಹೇಳುತ್ತಾನೆ.
ಕೆನ್ನೆಗೆ ಬ್ಲೇಡು ತಾಕಿದರೆ ಅಸಾಧ್ಯ ಉರಿ ಎಂದು
ಒದ್ದಾಡುವ ಗಂಡಸರು ತಿಂಗಳ ಆ ದಿನಗಳಲ್ಲಿ ಹೆಣ್ಣು ಮಕ್ಕಳು ಸಹಿಸುವ ರಕ್ತಸ್ರಾವವನ್ನು, ಹೊಟ್ಟೆ ಮತ್ತು ಸೊಂಟದ ನೋವು, ಕೈ ಕಾಲುಗಳಲ್ಲಿನ ಶಕ್ತಿ ಸೋರಿ ಹೋದಂತಾದರೂ ಒದ್ದಾಡುತ್ತಲೇ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು, ಬಸಿರಿನ ಭಾರವನ್ನು ಹೊತ್ತರೂ ಕೂಡ ಆಗಾಗ ವಿಶ್ರಾಂತಿ ಪಡೆಯುತ್ತಾ ಕೆಲಸ ಕಾರ್ಯಗಳನ್ನು ನಿರ್ವಹಿಸಿ
ಕೊನೆಗೆ ತೀವ್ರ ಸ್ವರೂಪದ ಹೆರಿಗೆ ನೋವನ್ನು ಉಂಡು ತನ್ನ ಪ್ರತಿರೂಪವನ್ನು ಈ ಭೂಮಿಗೆ ತರುವ ಪ್ರಕ್ರಿಯೆಗಳಿಂದಲೇ ಹೆಣ್ಣು ಈ ಜಗತ್ತಿನ ಕಣ್ಣು, ಮಾತೃದೇವತೆ, ಜಗಜ್ಜನನಿ ಎಂದೆನಿಸಿಕೊಳ್ಳುತ್ತಾಳೆ.
ಅಂತಹ ಗಟ್ಟಿಗಿತ್ತಿ ಹೆಣ್ಣು ಮಕ್ಕಳು ನಮ್ಮ ಸುತ್ತ ಇದ್ದರೆ, ನಿಮಗಿಂತ ಸುಂದರವಾಗಿದ್ದರೆ ಜಾಣರಾಗಿದ್ದರೆ ಅವರ ಕುರಿತು ಅಸೂಯಾ ಭಾವನೆ ಬೇಡ.. ಬದಲಾಗಿ ಅವರನ್ನು ಗೌರವಿಸಿ,ಆರಾಧಿಸಿ.
ನಿಮ್ಮ ಮನದಾಳದ ಮಾತುಗಳನ್ನು ಕೇಳುವ, ನಿಮ್ಮನ್ನು ಕಾಳಜಿ ಮಾಡುವ,ಈ ಜಗತ್ತಿಗೆ ನಿಮ್ಮನ್ನು ಪರಿಚಯಿಸಿದ, ನಿಮ್ಮ ಸಣ್ಣ ಪುಟ್ಟ ಯಶಸ್ಸನ್ನು ಕೂಡ ಸಂಭ್ರಮಿಸುವ, ನಿಮ್ಮ ತಪ್ಪುಗಳನ್ನು ಮುಖಕ್ಕೆ ಹೊಡೆದಂತೆ ಹೇಳಿ ತಿದ್ದಲು ಪ್ರಯತ್ನಿಸುವ, ಬದುಕಿನ ಹಲವು ನಿಷ್ಠುರ ಸತ್ಯಗಳ ಅರಿವನ್ನು ಮೂಡಿಸುವ ಒಳ್ಳೆಯ ಹೆಣ್ಣು ಮಕ್ಕಳು ನಿಮ್ಮ ಸುತ್ತುವರಿದಿರುವರು ಅವರನ್ನು ಆದರಿಸಿ. ಅವರ ಮಾತುಗಳನ್ನು ಪಾಲಿಸಿ ಬದುಕಿನಲ್ಲಿ ಮುನ್ನಡೆಯಿರಿ.
ಸದಾ ನಿಮ್ಮ ನೆರಳಿನಂತೆ ಇರುವ, ನಿಮ್ಮ ಕಷ್ಟದಲ್ಲಿ ಹೆಗಲು ಕೊಡುವ ಸುಖದಲ್ಲಿ ಜೊತೆಯಾಗುವ, ಜೀವನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನಿಮ್ಮನ್ನು ಸಜ್ಜಾಗಿಸುವ ಮತ್ತು ನಿಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ, ನಿಮ್ಮೆಲ್ಲ ತಪ್ಪುಗಳನ್ನು ಸಹಿಸಿಯೂ ನಿಮ್ಮನ್ನು ಪೊರೆಯುವ, ಜೀವನದಲ್ಲಿ ಎಲ್ಲವೂ ಮುಗಿದು ಹೋಯಿತು ಎಂಬ ಹಂತದಲ್ಲಿಯೂ ನಾನಿರುವೆ ನಿನ್ನ ಜೊತೆ ಎಂಬ ಕಟ್ಟ ಕಡೆಯ ಭರವಸೆಯನ್ನು ನೀಡುವ ತಾಯಿ ರೂಪದ ಹೆಣ್ಣಿನ ಪ್ರೀತಿಯ ಜಾಲದಲ್ಲಿ ಸುರಕ್ಷಿತತೆಯ ಅನುಭವ ಪಡೆಯಿರಿ. ಅವರ ಮಾನಸಿಕ ನೋವು ನಲಿವುಗಳನ್ನು ನೀವು ಕೂಡ ಹಂಚಿಕೊಂಡು ಅವರನ್ನು ಪ್ರೀತಿಸಿ, ಆರಾಧಿಸಿ.
ನಿಮಗಿಂತ ಮುಂಚೆ ಇಲ್ಲವೆ ನಂತರ ಹುಟ್ಟಿ ನಿಮ್ಮೊಂದಿಗೆ ಆಡಿ ಬೆಳೆಯುವ, ಒಡನಾಡುವ, ಜಗಳ ಮತ್ತು ಪ್ರೀತಿಯನ್ನು ಒಟ್ಟೊಟ್ಟಿಗೆ ಅನುಭವಿಸುತ್ತಾ ಸುಂದರ ಬಾಲ್ಯವನ್ನು ಕಳೆದು, ಅಪ್ಪ ಅಮ್ಮರ ಕಟ್ಟುನಿಟ್ಟಾದ ಶಿಸ್ತಿನಿಂದ ನಿಮ್ಮನ್ನು ಸಂರಕ್ಷಿಸುವ,
ತನ್ನ ಪಾಕೆಟ್ ಮನಿಯ ಅರ್ಧವನ್ನು ನಿಮಗೆ ನಸು ಮುನಿಸಿನಿಂದಲೇ ನೀಡುವ, ಎಂದೂ ಮರಳಿ ನೀಡುವುದಿಲ್ಲ ಎಂಬ ಖಾತರಿಯಿದ್ದು ಕೂಡ ಪ್ರತಿ ಪೈಸೆಯನ್ನು ಲೆಕ್ಕ ಇಡುವ, ನಿಮ್ಮೆಲ್ಲಾ ತಪ್ಪುಗಳನ್ನು ಉದಾರವಾಗಿ ಕ್ಷಮಿಸುವ,ಹಂಚಿ ತಿನ್ನುವ ಜೀವನದ ಕೊನೆಯವರೆಗೂ ನಿಮ್ಮೊಂದಿಗೆ ಆತ್ಮೀಯತೆಯ ಬಾಂಧವ್ಯವನ್ನು ಹೊಂದಿ ನಿಮ್ಮ ಏಳಿಗೆಯನ್ನು ಬಣ್ಣಿಸಿ ಹೇಳುವ ಜೀವವನ್ನು ಎಂದೂ ನೋಯಿಸದಿರಿ. ಬಹುಶಹ ತಾಯಿಯ ನಂತರ ದೇವರು ಕೊಟ್ಟ ಮತ್ತೊಂದು ವರ ಆಕೆ ಎಂಬುದು
ನಮ್ಮರಿವಿಗೆ ಬರುವುದು ತಡವಾಗಬಹುದು… ಆಕೆಯ ಪ್ರೀತಿ ವಾತ್ಸಲ್ಯ ಮಮತೆಯನ್ನು ಭರಪೂರ ಆನಂದಿಸಿ ಕೀಟಲೆ, ಉಪಟಳಗಳನ್ನು ಸಹಿಸಿ. ಜೀವನದ ಏರುಗಾಲದಲ್ಲಿ ನಿಮಗೆ ಆಕೆಯ ನೆನಪಾಗದಿದ್ದರೂ ಬದುಕಿನ ಮುಸ್ಸಂಜೆಯನ್ನು ಕಳೆಯಲು ಇಂತಹ ನೆನಪುಗಳು, ಪ್ರೀತಿ ವಾತ್ಸಲ್ಯದ ಆಹ್ಲಾದಕರ ಅನುಭವಗಳು ನಿಮ್ಮದಾಗಿರಲಿ.
ನಿಮ್ಮ ಜೀವನವನ್ನು ಅತ್ಯಂತ ಸರಳವಾಗಿಸುವ, ನಿಮ್ಮ ನೆರಳನ್ನು ಕೂಡ ಪ್ರೀತಿಸುವ, ತಾವು ಸುಂದರವಾಗಿದ್ದರೂ ನಿಮ್ಮನ್ನು ಹೊಗಳುವ, ನಿಮ್ಮ ಒಂದು ಪ್ರೀತಿಯ ಮಾತಿಗೆ, ಒಲುಮೆಯ ನೋಟಕ್ಕೆ ಕಾತರಿಸುವ ಪತ್ನಿಯ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿ.
ಬೇರೊಬ್ಬ ತಾಯಿಯ ಮಗಳಾಗಿ ಹುಟ್ಟಿ ನಿಮ್ಮ ಜೀವನದಲ್ಲಿ ತಂಗಾಳಿಯಾಗಿ ಬಂದು ನಿಮಗೆ ಪ್ರೀತಿ ಪ್ರೇಮದ ಅನುಭವ ನೀಡುವ, ನಿಮ್ಮ ಹೆತ್ತವರಿಗೆ ಆಸರೆಯಾಗುವ ಮಕ್ಕಳನ್ನು ಹೆತ್ತು ನಿಮ್ಮ ವಂಶೋದ್ಧಾರ ಮಾಡುವ, ಹಲವು ಬಾರಿ ನಸು ಮುನಿದರೂ ತನ್ನೆದೆಯ ಕಾವಿನಲ್ಲಿ ನಿಮ್ಮನ್ನು ಬೆಚ್ಚಗಿಡುವ, ಏನನ್ನು ಕೇಳದೆಯೂ ಎಲ್ಲವನ್ನು ಕೊಡ ಮಾಡುವ ಆ ಜೀವಕ್ಕೆ ಋಣಿಯಾಗಿರಿ.
ಅತ್ಯಂತ ಧೈರ್ಯಶಾಲಿಯಾದ, ದಿಟ್ಟವಾಗಿ ಮಾತನಾಡುವ ಮೂಲಕ ವ್ಯಕ್ತಿಗಳ ನಡುವಿನ ಅನುಮಾನದ ಗೋಡೆಗಳನ್ನು ಒಡೆದು ಹಾಕುವ,
ನಿಷ್ಟುರ ಸತ್ಯಗಳನ್ನು ಹೊರ ಹಾಕುವ, ಮಾತಿನಲ್ಲಿ ಒರಟಾದರೂ ಮನೆ ಮಂದಿಯೆಲ್ಲರ ಕಾಳಜಿ ಮಾಡುವ, ತನ್ನ ವೈಯುಕ್ತಿಕ ನಿರ್ಣಯಗಳಿಗೆ ಬೇರೊಬ್ಬರ ಸಮ್ಮತಿಗಾಗಿ ಕಾಯದ, ತೊಟ್ಟಿಲು ತೂಗಿದ ಕೈಯಿಂದ ಇಡೀ ಮನೆಯ ಜವಾಬ್ದಾರಿಯನ್ನು ಸಂಭಾಳಿಸುವ ಜೀವವನ್ನು ಆರಾಧಿಸಿ.
ನಿಮ್ಮನ್ನು ನೀವು ಇರುವಂತೆಯೇ ಒಪ್ಪಿ ಅಪ್ಪುವ ನಿಮ್ಮ ವ್ಯಕ್ತಿತ್ವದ ಭಾಗವೇ ಆಗುವ ಜೀವವನ್ನು ಪ್ರೀತಿಸಿ.ನಿಮ್ಮ ಹೆತ್ತವರನ್ನು ನೆನಪಿಸುವ, ನಿಮ್ಮ ಇಳಿಗಾಲದಲ್ಲಿ ಆಸರೆಯಾಗುವ, ನಿಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುವ ನೀವು ಮಾಡುವ ಸಣ್ಣ ಪುಟ್ಟ ಸಾಧನೆಗಳನ್ನು ದೊಡ್ಡದು ಎಂಬಂತೆ ಬಿಂಬಿಸಿ ಅಭಿಮಾನದಿಂದ ಕಣ್ಣರಳಿಸುವ ಆ ಪುಟ್ಟ ಜೀವವನ್ನು ಎಂದಿಗೂ ನೋಯಿಸದಿರಿ ಬೇಯಿಸದಿರಿ.
ಸ್ನೇಹಿತರೇ, ಬದುಕು ಬಹಳ ಚಿಕ್ಕದು. ಸಣ್ಣ ಪುಟ್ಟ ಕಾರಣಗಳಿಗೆ ಮನಸ್ಸನ್ನು ಕಹಿ ಮಾಡಿಕೊಂಡು ನಾವೂ ನೊಂದು ನಮ್ಮವರನ್ನು ನೋಯಿಸುವ ಬದಲು, ಇದ್ದುದರಲ್ಲಿಯೇ ಹೊಂದಾಣಿಕೆಯ ಬದುಕನ್ನು ನಡೆಸುವುದು ಇಂದಿನ ಬದುಕಿನ ಅಗತ್ಯತೆಗಳಲ್ಲಿ ಒಂದು ಎಂಬುದನ್ನು ಅರಿತು ಸಾರ್ಥಕ ಬದುಕನ್ನು ಸಾಗಿಸೋಣ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ