ಕಾರವಾರ, ಫೆ.20:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಅಂಗವಾಗಿ ಜಿಲ್ಲಾ ರಂಗಮಂದಿರ ದಲ್ಲಿ ಸಂತ ಕವಿ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಮಾಣಿಶ್ವರ್ ನಾರಾಯಣ ನಾಯ್ಕ ಸಂತ ಕವಿ ಸರ್ವಜ್ಞ ರವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡದ ಶ್ರೇಷ್ಠ ಕವಿಗಳ ಸಾಲಿನಲ್ಲಿ ಒಬ್ಬರು ಸಂತ ಕವಿ ಸರ್ವಜ್ಞ ತಮ್ಮ ವಚನಗಳ ಮೂಲಕ ಅತ್ಯಂತ ಸರಳವಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಸಂತ ಕವಿಯಾಗಿದ್ದು, ತ್ರಿಪದಿಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ತನ್ಮೂಲಕ ಅವರ ವಚನಗಳಲ್ಲಿನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು, ಸಮಾಜದಲ್ಲಿ ನಡೆಯುವ ತಪ್ಪುಗಳು, ಮೂಡ ನಂಬಿಕೆಗಳು, ಡಾಂಭಿಕ ಭಕ್ತಿಗಳ ವಿಚಾರ ಸತ್ಯತೆಯನ್ನು, ಅನೇಕ ವಿಚಾರಗಳನ್ನು ನೋಡಿದನ್ನು ಯಾರಿಗೂ ಅಂಜದೇ ನೇರವಾಗಿ ಹೇಳುತ್ತಿದ್ದರು. ಇವರು ಅನೇಕ ವಿಚಾರಗಳನ್ನು ಜನರಲ್ಲಿ ಮನವರಿಕೆ ಮಾಡುತ್ತಿದ್ದರು ಎಂದರು.
ಇದುವರೆಗೆ ಸರ್ವಜ್ಞ ಕವಿಯ 2100 ವಚನಗಳ ಲಭಿಸಿವೆ. ಇನ್ನು ಬಾಕಿ ಸಿಕ್ಕಿಲ್ಲ. ಇವರು ಸಮಾಜದ ಏಳು ಬಿಳುಗಳನ್ನು, ತಪ್ಪಿ ದಾರಿ ಹಿಡಿದಿರುವ ವ್ಯಕ್ತಿಗಳ ನಡೆನುಡಿಗಳನ್ನು ಕಾಲ ಕಾಲಕ್ಕೆ ತಿದ್ದಿ ತಿಡಿ ಮನುಷ್ಯನನ್ನು ಯೋಗ್ಯವಂತರಾಗಿ ಮಾಡುವ ಕೆಲಸದಲ್ಲಿ ತೋಡಗಿದ್ದರು ಎಂದು ಹೇಳಿದರು.
ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿನಿ ಗಂಗಾ ಮೋಹನ ಪಾಟೀಲ್ ಸಂತ ಕವಿ ಸರ್ವಜ್ಞ ಅವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗೀತಾಂಜಲಿ ಸಂಗೀತ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಸರಸ್ಪತಿ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯ್ಕ ಸ್ವಾಗತಿಸಿದರು. ಹಿಂದೂ ಹೈಸ್ಕೂಲ್ ಶಿಕ್ಷಕ ಸಂತೋಷ್ ನಿರೂಪಿಸಿದರು.ಸರಸ್ವತಿ ವಿದ್ಯಾಲಯದ ಶಿಕ್ಷಕ ಮಹಾದೇವ ರಾಣೆ ವಂದಿಸಿದರು.